Site icon Vistara News

ಶ್ರೀಶೈಲಪ್ಪ ಬಿದರೂರು ನಿಧನ | ನಾಯಕನ ಹಠಾತ್‌ ನಿಧನಕ್ಕೆ ಸಂತಾಪ ಸೂಚಿಸಿದ ಗಣ್ಯರು

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಟಿಕೆಟ್‌ ಆಕಾಂಕ್ಷಿಗಳ ಸಭೆ ನಡೆಯುತ್ತಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿ ನಿಧನರಾದ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಕಾಂಗ್ರೆಸ್‌ ಮುಖಂಡರು ಸಂತಾಪ ಸೂಚಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಬಹಳ ದುಃಖದ ದಿನ. ಮಾಜಿ ಶಾಸಕರು, ಎರಡು ಬಾರಿ ವಿಧಾನಸಭೆ ಸದಸ್ಯರಾಗಿದ್ದರು. ೨೦೦೪-೨೦೦೮ ರಲ್ಲಿ ಶಾಸಕರಾಗಿದ್ದರು. ಕಾಂಗ್ರೆಸ್ ಪಕ್ಷದ ಟಿಕೆಟ್‌ಗೆ ಅರ್ಜಿ ಕೂಡ ಸಲ್ಲಿಸಿದ್ದರು. ಅವರ ಅಪ್ಲಿಕೇಶನ್ ಚೆಕ್ ಬುಕ್ ಎಲ್ಲ ನನ್ನ ಹತ್ತಿರವೇ ಇದೆ. ಬೆಳಗ್ಗೆ ಸ್ವಲ್ಪ ಆರೋಗ್ಯ ಸರಿಯಿಲ್ಲದಿದ್ದರೂ ಛಲದಿಂದ ಮೀಟಿಂಗ್‌ಗೆ ಬಂದಿದ್ದರು.

ಮ್ಯಾಸಿವ್ ಹಾರ್ಟ ಅಟ್ಯಾಕ್ ಆಗಿದೆ. ಸ್ಪಾಟ್‌ನಲ್ಲೇ ಹಾರ್ಟ್ ಅಟ್ಯಾಕ್ ಆದಾಗ ಏನು ಮಾಡಬೇಕು ಅದನ್ನು ಮಾಡಿದೆವು. ವನಿತಾ ಅವರು ಸಿಪಿಆರ್ ಮಾಡಿ ಉಳಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದರು. ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದೂಡಿದ್ದೇವೆ. ಶ್ರದ್ಧಾಂಜಲಿ ಕೂಡ ಸಲ್ಲಿಸಿದ್ದೇವೆ.

ಅವರ ಆತ್ಮಕ್ಕೆ ಭಗವಂತ ಶಾಂತಿ ನೀಡಲಿ. ಅವರ ಮಗ ಜತೆಯಲ್ಲಿದ್ದ. ಎಲ್ಲ ಪಕ್ಷದ ನಾಯಕರೂ ಅವರ ಸ್ನೇಹ ಹೊಂದಿದ್ದರು. ಅವರ ಕುಟುಂಬ ಇನ್ನೂ ಶಾಕ್‌ನಲ್ಲಿದೆ. ಇವತ್ತಿನ ಸಭೆ ಮುಂದೂಡಿ ಜೂಮ್‌ನಲ್ಲಿ ಮಾಡುತ್ತೇವೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಮೊನ್ನೆ ಶ್ರೀಶೈಲಪ್ಪ ಬಿದರೂರು ನಮ್ಮ ಮನೆಗೆ ಬಂದಿದ್ದರು. ನಾನು ಆಗ ಅವರಿಗೆ ಕೇಳಿದೆ, ಎಲ್ಲಪ್ಪಾ ಬಿದರೂರು ಕಾಣ್ತಾನೆ ಇಲ್ವಲ್ಲ ಅಂತ. ಇಲ್ಲ ಸರ್ ಆರೋಗ್ಯ ಸರಿ ಇರಲಿಲ್ಲ ಎರಡು ತಿಂಗಳು ಆಸ್ಪತ್ರೆಯಲ್ಲಿದ್ದೆ ಅಂದರು. ನನಗೆ ರೋಣ ಅಥವಾ ಗದಗಕ್ಕೆ ಟಿಕೆಟ್ ಕೊಡಿಸಿ ಅಂದರು. ನಾನು ಅದಕ್ಕೆ ಗದಗದಲ್ಲಿ ಎಚ್. ಕೆ. ಪಾಟೀಲ್ ಇದಾರಲ್ಲ ಅಂತ ಹೇಳಿದೆ. ರೋಣದಲ್ಲಾದ್ರೂ ಕೊಡಿಸಿ ಅಂತ ಹೇಳಿದರು. ರಾಜಕೀಯದಲ್ಲಿ ಸಕ್ರಿಯವಾಗಿ ಇರಬೇಕು ಅನ್ನೋ ಆಸಕ್ತಿ ಇತ್ತು ಅವರಿಗೆ. ಎರಡು ಬಾರಿ ಶಾಸಕರಾಗಿದ್ದರು. ನನಗೆ ಬಹಳ ಆಪ್ತ ಸ್ನೇಹಿತ. ಜೆಡಿಎಸ್ ನಲ್ಲಿ ಇದ್ದಾಗಿಂದಲೂ ಪರಿಚಯ. ಕ್ಷೇತ್ರದಲ್ಲಿ, ಅಜಾತಶತ್ರು ಆಗಿದ್ದರು. ಅಂಥವರ ಸಾವು ತೀವ್ರ ದುಃಖ ತಂದಿದೆ ಎಂದರು.

ಕೆಪಿಸಿಸಿ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಮಾತನಾಡಿ, ಕಾಂಗ್ರೆಸ್‌ಗೆ ಇಂದು ದುಃಖದ ದಿನ. ಶ್ರೀಶೈಲಪ್ಪ ಬಿದರೂರು ನಿಧನದಿಂದ ತೀವ್ರ ದುಃಖವಾಗಿದೆ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಅವರ ಕುಟುಂಬದ ಜತೆ ಕಾಂಗ್ರೆಸ್‌ ಇರಲಿದೆ ಎಂದರು.

ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮಾತನಾಡಿ, ಶ್ರೀಶೈಲಪ್ಪ ಬಿದರೂರು ಅವರು ಎರಡು ಬಾರಿ ಶಾಸಕರಾಗಿದ್ದರು. ಪರಿಷತ್ ಚುನಾವಣೆಯಲ್ಲಿ ನನ್ನ ಗೆಲುವಿಗೆ ಸಹಕಾರ ನೀಡಿದ್ದರು. ಅವರ ಆತ್ಮಕ್ಕೆ ಶಾಂತಿ ನೀಡಲಿ, ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಲಭಿಸಲಿ. ಇಂದು ಬೆಳಿಗ್ಗೆ ಅವರನ್ನು ಭೇಟಿಯಾದಾಗ ಆರೋಗ್ಯ ಸರಿ ಇರಲಿಲ್ಲ. ಏಕೆ ಆಗಮಿಸಿದಿರಿ ಎಂದು ಕೇಳಿದೆ. ಪರವಾಗಿಲ್ಲ ಆರಾಮವಾಗಿದ್ದೇನೆ ಎಂದರು. ಅವರ ಮಗ ಜತೆಯಲ್ಲೇ ಇದ್ದರು. ಸಭೆಯಲ್ಲಿ ಶ್ರದ್ದಾಂಜಲಿ ಸಲ್ಲಿಸಿದ್ದೇವೆ, ಇಂದಿನ ಎಲ್ಲ ಸಭೆ ಮುಂದೂಡಲಾಗಿದೆ ಎಂದರು.

ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿ, ಶ್ರೀಶೈಲಪ್ಪ ನಮ್ಮನ್ನು ಅಗಲಿದ್ದಾರೆ. ಕಾಂಗ್ರೆಸ್ ಆಕಾಂಕ್ಷಿಗಳ ಸಭೆಗೆ ಆಗಮಿಸಿದ್ದರು. ಸ್ಬಲ್ಪ ಮಟ್ಟಿಗೆ ಅನಾರೋಗ್ಯ ಇತ್ತು. ಸಭೆ ಪ್ರಾರಂಭ ಆಗುವ ಮೊದಲೇ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಪರಿವಾರ ಕುಟುಂಬಸ್ಥರಿಗೆ ದುಃಖ ತಡೆಯಲು ಶಕ್ತಿ ನೀಡಲಿ ಎಂದರು.

ಮಾಜಿ ಸಚಿವ ಎಚ್. ಕೆ. ಪಾಟೀಲ್ ಮಾತನಾಡಿ, ಶ್ರೀಶೈಲಪ್ಪ ಬಿದರೂರು ಸ್ನೇಹ ಜೀವಿ, ಎಲ್ಲರೊಟ್ಟಿಗೂ ಒಳ್ಳೆಯ ರೀತಿಯಲ್ಲಿದ್ದರು. 2018-19 ರಲ್ಲಿ ನಮ್ಮ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ನಾವು ಇಲ್ಲಿ ಬಂದಾಗ ವೈದ್ಯರ ಆಶಾಭಾವನೆ ನೀಡಲಿಲ್ಲ. ಎರಡು ಮೂರು ನಿಮಿಷ ಆದ ಮೇಲೆ ವೈದ್ಯರು ಘೋಷಣೆ ಮಾಡಿದರು. ಕೆಲವು ತಿಂಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಗದಗ ಜಿಲ್ಲೆಯ ಸೂಡಿಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ ಎಂದರು.

ಸ್ಥಳದಲ್ಲೇ ಸಿಪಿಆರ್‌

ಬಿದರೂರು ಅವರು ಕುಳಿತಲ್ಲೇ ಕುಸಿದಾಗ ಅನೇಕರು ಆಗಮಿಸಿ ಎಚ್ಚರಿಸಲು ಪ್ರಯತ್ನಿಸಿದರು. ಕೆಲ ಹೊತ್ತಿನಲ್ಲೆ, ಸಭೆಯಲ್ಲೇ ಇದ್ದ ಕಾಂಗ್ರೆಸ್‌ ನಾಯಕಿ ಹಾಗೂ ವೈದ್ಯೆ ವೈದ್ಯೆ ಡಾ.ವನಿತಾ, ಬಿದರೂರು ಅವರ ಎದೆ ಭಾಗವನ್ನು ಬಲವಾಗಿ ಒತ್ತುವ ಮೂಲಕ ಸಿಪಿಆರ್‌ (Cardiopulmonary resuscitation) ನೀಡಿದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ವೈದ್ಯೆ ಸಿಪಿಆರ್‌ ಮಾಡುತ್ತಿರುವುದನ್ನು ಸ್ಥಳದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.ನಿಧನದ ನಂತರ ಮಣಿಪಾಳ್‌ ಆಸ್ಪತ್ರೆ ಪ್ರಕಟಣೆ ಹೊರಡಿಸಿದ್ದು, ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದ ಬಿದರೂರು ಅವರನ್ನು ಆಸ್ಪತ್ರೆಗೆ ಕರೆತಂದಾಗಲೇ ನಾಡಿ ಮಿಡಿತ ಇರಲಿಲ್ಲ. ಸಿಪಿಆರ್‌ ಮಾಡಲಾಯಿತಾದರೂ ಸಫಲವಾಗಲಿಲ್ಲ. ಆಸ್ಪತ್ರೆಗೆ ಆಗಮಿಸುವ ಮುನ್ನವೇ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಯಿತು ಎಂದಿದೆ.

ಇದನ್ನೂ ಓದಿ | Heart Attack | ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಭೆಯಲ್ಲಿದ್ದಾಗಲೇ ಮಾಜಿ ಶಾಸಕ ಬಿದರೂರುಗೆ ಹೃದಯಾಘಾತ, ನಿಧನ

Exit mobile version