Site icon Vistara News

Heart Attack | ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಭೆಯಲ್ಲಿದ್ದಾಗಲೇ ಮಾಜಿ ಶಾಸಕ ಬಿದರೂರುಗೆ ಹೃದಯಾಘಾತ, ನಿಧನ

heart-attack-to-congress-ticket-aspirant

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳ ಸಭೆಯ ನಡೆಯುತ್ತಿರುವಾಗಲೇ ಆಕಾಂಕ್ಷಿಯೊಬ್ಬರು ಹೃದಯಾಘಾತಕ್ಕೆ (Heart Attack) ಒಳಗಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ನಗರದ ಹೊರವಲಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಭೆ ನಡೆಸುತ್ತಿದ್ದರು. ಈ ಸಭೆಯಲ್ಲಿ ಭಾಗವಹಿಸಿದ್ದ ರೋಣ ಹಾಗೂ ಗದಗ ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಅವರಿಗೆ ಹೃದಯಾಘಾತ ಆಗಿದೆ.

ಆಕಾಂಕ್ಷಿಗಳ ಸಭೆಯಲ್ಲಿ ಭಾಗಿಯಾಗಿದ್ದ ಬಿದರೂರು ಅವರಿಗೆ ಸಭೆಯಲ್ಲಿ ಹೃದಯಾಘಾತವಾಗಿ ವಾಂತಿ ಮಾಡಿಕೊಂಡರು. ತಕ್ಷಣವೇ ಅಲ್ಲಿದ್ದ ಕಾರ್ಯಕರ್ತರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಸ್ಪತ್ರೆಯಲ್ಲಿ ಬಿದರೂರು ಸ್ಥಿತಿ ಗಂಭೀರವಾಗಿದೆ ಎನ್ನಲಾಗಿತ್ತು. ಕೆಲ ಹೊತ್ತಿನಲ್ಲೇ ಅವರ ನಿಧನದ ಸುದ್ದಿ ಕೇಳಿಬಂತು.

ಸಭೆ ನಡೆಸುತ್ತಿದ್ದ ಸ್ಥಳದಲ್ಲೇ ಕೆಪಿಸಿಸಿ ಅಧಯಕ್ಷ ಡಿ.ಕೆ. ಶಿವಕುಮಾರ್‌ ಅವರು ಸಂತಾಪ ಸೂಚನೆ ಮಾಡಿದರು. ಶ್ರೀಶೈಲಪ್ಪ ಅವರು ನಿಧನರಾದ ಹಿನ್ನೆಲೆಯಲ್ಲಿ ಸಭೆಯನ್ನು ರದ್ದುಪಡಿಸಿದ ಶಿವಕುಮಾರ್‌, ನವೆಂಬರ್‌ 27ರಂದು ಆನ್‌ಲೈನ್‌ ಸಭೆ ನಡೆಸುವುದಾಗಿ ತಿಳಿಸಿದರು.

ಸಂತಾಪ ಸೂಚಿಸಿದ ಡಿ.ಕೆ. ಶಿವಕುಮಾರ್.

ಮೂಲ ಬಿಜೆಪಿ ಕಟ್ಟಾಳು

1996ರಲ್ಲಿ ಮೊದಲ ಬಾರಿಗೆ ಜಾತ್ಯಾತೀತ ಜನತಾದಳದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದ ಬಿದರೂರ ಅವರು ನಂತರ ಕಮಲ ಹಿಡಿದು ಅನೇಕ ಹುದ್ದೆ ನಿಭಾಯಿಸಿ, 2008 ರಲ್ಲಿ ಗದಗ ವಿಧಾನಸಭೆಯ ಅಭ್ಯರ್ಥಿಯಾಗಿದ್ದರು. ಕಾಂಗ್ರೆಸ್‌ ಪಕ್ಷದ ಎಚ್‌.ಕೆ.ಪಾಟೀಲರಿಗೆ ಸೋಲಿನ ರುಚಿ ನೀಡಿದ್ದ ಬಿದರೂರು, ಜಿಲ್ಲೆಯಲ್ಲಿ ಬಿಜೆಪಿ ಸಂಘಟಿಸಿ ನಗರಸಭೆ, ತಾಪಂ, ಜಿಪಂ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಪಡೆದು ಅಧಿಕಾರದ ಗದ್ದುಗೆ ಏರಲು ಶ್ರಮಿಸಿದ್ದರು.

ಆಸ್ಪತ್ರೆಗೆ ಭೇಟಿ ನೀಡಿದ ಮಾಜಿ ಸಚಿವ ಎಚ್‌.ಕೆ. ಪಾಟೀಲ್‌

ಆದರೆ, 2013ರ ವಿಧಾನಸಭೆ ಚುನಾವಣೆಯಲ್ಲಿ ಶ್ರೀಶೈಲಪ್ಪ ಬಿದರೂರಗೆ ಮತ್ತೆ ಸೋಲು ಎದುರಾಗಿತ್ತು. 2013ರಲ್ಲಿ ಬಿಜೆಪಿ-ಕೆಜೆಪಿ ಇಬ್ಬಾಗವಾದ ಪರಿಣಾಮ ಟಿಕೆಟ್‌ ದೊರೆಯದೇ ಅಸಮಧಾನ ಹೊರಹಾಕಿದ್ದರು. ನಂತರ 2018ರ ಚುನಾವಣೆಯಲ್ಲೂ ಬಿಜೆಪಿ ಟಿಕೆಟ್‌ ಪ್ರಮುಖ ಆಕಾಂಕ್ಷಿಯಾಗಿದ್ದರೂ ಟಿಕೆಟ್‌ ವಂಚಿತರಾಗಿದ್ದರಿಂದ ಪಕ್ಷ ಬಿಡುವ ವಿಚಾರ ಮಾಡಿದ್ದರು.

ಶ್ರೀಶೈಲಪ್ಪ ಬಿದರೂರು ಅವರ ಮನೆ

ನಂತರ ಪಕ್ಷದ ಹಿರಿಯರ ಮನವೊಲಿಕೆಯಿಂದ ಬಿಜೆಪಿ ಅಭ್ಯರ್ಥಿ ಪರವಾಗಿ ಕೆಲಸ ಮುಂದುವರಿದಿದ್ದರು. ಮತ್ತೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಗದಗ ಕ್ಷೇತ್ರದಿಂದ ಟಿಕೆಟ್‌ ಕೈ‌ತಪ್ಪಿದ್ದರಿಂಧ ಅಸಮಾಧಾನಗೊಂಡು 20 ವರ್ಷಗಳ ಕಾಲ ಸಂಘಟಿಸಿದ ಬಿಜೆಪಿ ತೊರೆದು‌ ಕಾಂಗ್ರೆಸ್ ಸೇರ್ಪಡೆ ಆಗಿದ್ದರು.

ಇದನ್ನೂ ಓದಿ | Karnataka Election 2023 | ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವ ಸಿದ್ದರಾಮಯ್ಯ ಆಸೆಗೆ ಡಿಕೆಶಿ ತಣ್ಣೀರು

Exit mobile version