ಗದಗ: ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವಿಗೀಡಾಗಿದ್ದಾನೆ ಎಂದು ರೋಗಿಯ ಸಂಬಂಧಿಕರು ಆರೋಪಿಸಿ, ರೊಚ್ಚಿಗೆದ್ದು ಆಸ್ಪತ್ರೆ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಗದಗ ನಗರದ ಬೆಟಗೇರಿಯಲ್ಲಿ ನಡೆದಿದೆ.
ಗದಗ ನಗರದ ಬೆಟಗೇರಿ ಜರ್ಮನ್ ಆಸ್ಪತ್ರೆಯಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಇಸ್ಮಾಯಿಲ್ ಡಂಬಳ ಎಂಬ ವ್ಯಕ್ತಿ ನ್ಯುಮೋನಿಯಾದಿಂದ ಬಳಲುತ್ತಿದ್ದ. ನಾಲ್ಕು ದಿನಗಳ ಹಿಂದೆ ಜರ್ಮನ್ ಆಸ್ಪತ್ರೆಗೆ ದಾಖಲಾಗಿದ್ದ. ರೋಗಿ ಗುಣವಾಗುತ್ತಾನೆ ಎಂದು ನಾಲ್ಕು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿದ್ದರು. ಆದರೆ ನಾಲ್ಕು ದಿನಗಳಿಂದ ರೋಗಿಯನ್ನು ನೋಡಲು ಸಂಬಂಧಿಕರಿಗೆ ಬಿಟ್ಟಿರಲಿಲ್ಲ. ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ಹೋಗಲು ಅಂಬ್ಯುಲೆನ್ಸ್ ತಯಾರಿ ಮಾಡುತ್ತಿದ್ದಂತೆ ರೋಗಿ ಸಾವನ್ನಪ್ಪಿದ್ದಾನೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ.
ಮೊದಲೇ ಸಾವನ್ನಪ್ಪಿದ್ದ ರೋಗಿಯನ್ನು ಬದುಕಿದ್ದಾನೆ ಎಂದು ಸುಳ್ಳು ಹೇಳಿ ಐಸಿಯುನಲ್ಲಿ ಇಟ್ಟುಕೊಂಡಿದ್ದಾರೆ. ಹಣ ಪೀಕಲು ರೋಗಿಗೆ ಚಿಕಿತ್ಸೆ ನೀಡುವ ನಾಟಕವನ್ನು ವೈದ್ಯರು ಮಾಡಿದ್ದರು ಎಂದು ರೋಗಿಯ ಸಂಬಂಧಿಕರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆಸ್ಪತ್ರೆ ಎದುರು ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಂಬಂಧಿಕರು, ಕಲ್ಲು ತೂರಾಟ ನಡೆಸಿ ಆಸ್ಪತ್ರೆಯಲ್ಲಿನ ಕಿಟಕಿ ಗಾಜು ಪುಡಿ ಮಾಡಿದ್ದಾರೆ. ನಂತರ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ. ರೋಗಿಯ ಸಂಬಂಧಿಕರ ಮೇಲೂ ಆಸ್ಪತ್ರೆಯ ಮಕ್ಕಳ ವಾರ್ಡ್ ಜಖಂಗೊಳಿಸಿದ ಆರೋಪ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: Doctor Negligence: ಓವರ್ ಡೋಸ್‌ನಿಂದ 6 ತಿಂಗಳ ಮಗು ಸಾವು; ವೈದ್ಯರ ನಿರ್ಲಕ್ಷ್ಯಕ್ಕೆ ಪೋಷಕರು ಕಿಡಿ