ಗದಗ: ಶನಿವಾರ ಗದಗದಲ್ಲಿ ನಡೆದ ಜನತಾ ದರ್ಶನ (Janata Darshana) ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ (HK Pateel) ಅವರ ಮುಂದೆ ವಿಶಿಷ್ಟ ಬೇಡಿಕೆಯೊಂದು ಮಂಡನೆಯಾಗಿ ಕುತೂಹಲ ಕೆರಳಿಸಿತು. ಸಮಾಜ ಸೇವಕನಾಗಿ ಗುರುತಿಸಿಕೊಂಡಿರುವ ವ್ಯಕ್ತಿಯೊಬ್ಬರು ತಮಗೆ ಕೇಂದ್ರ ಸರ್ಕಾರದ ಪದ್ಮ ಪ್ರಶಸ್ತಿ (Padma Award) ಕೊಡಿಸುವಂತೆ ಮನವಿ (Request for Padma Award) ಮಾಡಿಕೊಂಡರು. ಸ್ವತಃ ಸಚಿವ ಎಚ್.ಕೆ. ಪಾಟೀಲ್ ಅವರಿಗೇ ಈ ಬೇಡಿಕೆಗೆ ಏನನ್ನಬೇಕು ಎಂದು ತಿಳಿಯದೆ ಒಂದು ಕ್ಷಣ ಬೆರಗಾದರು.
ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದ ಸಮಾಜ ಸೇವಕ (Social worker) ಅಬ್ದುಲ್ ಮುಸ್ತುಸಾಬ್ (Abdul Mustusab) ಎಂಬವರು ಎಚ್.ಕೆ. ಪಾಟೀಲ್ ಅವರನ್ನು ಉದ್ದೇಶಿಸಿಯೇ ಬರೆದ ಒಂದು ಪತ್ರ ಮತ್ತು ತಾವು ಮಾಡಿರುವ ಸಾಧನೆಗಳ ಕೆಲವು ಸರ್ಟಿಫಿಕೇಟ್ ದಾಖಲೆಗಳನ್ನು ಹಿಡಿದುಕೊಂಡೇ ಬಂದಿದ್ದರು.
ನಾನು ಕಳೆದ 12 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಿದ್ದೇನೆ. ನನ್ನ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ. ರಸ್ತೆ, ಮೂಲ ಸೌಕರ್ಯ ಕಲ್ಪಿಸಲು ಹೋರಾಟ ಮಾಡಿದ್ದೇನೆ. ನನ್ನ ಸೇವೆಯನ್ನು ಪರಿಗಣಿಸಿ ಪದ್ಮ ಪ್ರಶಸ್ತಿ ಕೊಡುವಂತೆ ಶಿಫಾರಸು ಮಾಡಬೇಕೆಂದು ಮನವಿ ಮಾಡಿದರು.
ಎಚ್.ಕೆ. ಪಾಟೀಲ್ ಅವರು ಅರ್ಜಿಯನ್ನು ಸ್ವೀಕರಿಸಿದರಾದರೂ ಸಮಾಜ ಸೇವೆ ಮಾಡುವವರು ಪ್ರಶಸ್ತಿ ಕೇಳಬಾರದು ಎಂದು ಹಿತವಚನ ಹೇಳಿದರು. ಜತೆಗೆ, ನಿಮ್ಮ ಸೇವೆಯನ್ನು ನಾನು ಖಂಡಿತವಾಗಿಯೂ ಗೌರವಿಸುತ್ತೇವೆ. ಪದ್ಮ ಪ್ರಶಸ್ತಿ ಕೊಡಿಸುವುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಈಗ ಈ ಪ್ರಶಸ್ತಿಗೆ ಶಿಫಾರಸು ಇಲ್ಲ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕುʼʼ ಎಂದು ಹೇಳಿದರು.
ತನಗೇಕೆ ಪದ್ಮ ಪ್ರಶಸ್ತಿ ನೀಡಬೇಕು ಎಂಬುದನ್ನು ಅಬ್ದುಲ್ ಅವರು ಪತ್ರಕರ್ತರ ಮುಂದೆಯೂ ವಿವರಿಸಿದರು. ಕೇಂದ್ರ ಸರ್ಕಾರ ನನ್ನ 33 ಬೇಡಿಕೆಗಳನ್ನು ಈಡೇರಿಸಿದೆ. ಸಂವಿಧಾನ ತಿದ್ದುಪಡಿಗಳಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿದೆ. ನನಗೆ ಈಗ ಕೇಂದ್ರದ ಪ್ರಶಸ್ತಿ ಪಡೆಯಲು ಶಿಫಾರಸು ಬೇಕಾಗಿದೆ. ಅದಕ್ಕಾಗಿ ಇಲ್ಲಿ ಅರ್ಜಿ ಸಲ್ಲಿಸಿದ್ದೇನೆ ಎಂದರು.
ಎಚ್.ಕೆ. ಪಾಟೀಲರಿಗೆ ಪತ್ರ ಬರೆದ ಸುಜಾತಾ ದೊಡ್ಡಮನಿ
ಈ ನಡುವೆ, ಅಬ್ದುಲ್ ಮುಸ್ತುಸಾಬ್ ಅವರು ತಮಗೆ ಪದ್ಮಭೂಷಣ ಪ್ರಶಸ್ತಿಗೆ ಶಿಫಾರಸು ಮಾಡಬಹುದು ಶಿರಹಟ್ಟಿ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸುಜಾತಾ ದೊಡ್ಡಮನಿ ಅವರು ಪಾಟೀಲರಿಗೆ ಬರೆದ ಪತ್ರವನ್ನೂ ತಂದಿದ್ದರು. ಸುಜಾತಾ ದೊಡ್ಡಮನಿ ಅವರು ಪತ್ರ ನೀಡಿದ್ದನ್ನು ವೇದಿಕೆಯಲ್ಲಿ ಸಚಿವರಿಗೆ ಮತ್ತು ಜಿಲ್ಲಾಡಳಿತ ಅಧಿಕಾರಿಗಳಿಗೆ ತೋರಿಸಿದರು.
ಹಿಂದಿನ ಸುದ್ದಿ: Padma Awards : ಪದ್ಮ ಪ್ರಶಸ್ತಿಗಳಿಗೆ ಅರ್ಹರನ್ನು ನೀವೂ ಶಿಫಾರಸು ಮಾಡಿ! ಸೆಪ್ಟೆಂಬರ್ 15 ಕೊನೆ ದಿನ
ಅಂತಿಮವಾಗಿ ಎಚ್.ಕೆ. ಪಾಟೀಲ್ ಅವರು ಸಮಾಧಾನಕರವಾದ ಇನ್ನೊಂದು ಸಲಹೆ ನೀಡಿದರು. ನಿಮ್ಮ ಸೇವೆಯನ್ನು ಪುರಸ್ಕರಿಸಲು ಅವಕಾಶವಿದ್ದರೆ ಖಂಡಿತ ಗೌರವಿಸೋಣ. ಕೇಂದ್ರ ಸರ್ಕಾರ ಪ್ರಶಸ್ತಿಗೆ ಶಿಫಾರಸು ಮಾಡಲು ಅವಕಾಶವಿಲ್ಲ. ಆದರೆ, ನಿಮ್ಮ ಅರ್ಜಿಯನ್ನು ಜಿಲ್ಲಾ ಪ್ರಶಸ್ತಿ ಪರಿಗಣಿಸಬಹುದೇ ನೋಡೋಣ ಎಂದು ಹೇಳಿದರು. ಇದನ್ನು ಕೇಳಿದ ಅಬ್ದುಲ್ ಅವರು ವೇದಿಕೆಯಿಂದ ಕೆಳಗಿಳಿದು ಬಂದರು. ಈ ಪ್ರಹಸನವನ್ನು ನೋಡಿ ಕೆಲವರು ಪ್ರಶಸ್ತಿಗಾಗಿ ಈ ರೀತಿ ಎಲ್ಲ ಮಾಡಬೇಕಾ ಎಂದು ಪರಸ್ಪರ ಮಾತನಾಡಿಕೊಂಡರು. ಇನ್ನು ಕೆಲವರು ಹೌದು ಈಗ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯೇ ಇದೆಯಲ್ವಾ? ರಾಜ್ಯೋತ್ಸವ ಪ್ರಶಸ್ತಿಗೆ ನಾವೇ ಅರ್ಜಿ ಸಲ್ಲಿಸಬೇಕು. ಸರ್ಕಾರದ ಸಮಿತಿ ಅದರಲ್ಲಿ ಆಯ್ಕೆ ಮಾಡುತ್ತದೆ ಎಂದು ವಿವರಿಸಿದರು.