ಗದಗ: ಮಳೆಯಿಂದ ರಸ್ತೆ ಮಧ್ಯೆ ಸೃಷ್ಟಿಯಾಗಿದ್ದ ಕಂದಕದಲ್ಲಿ ಬಿದ್ದು ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
ಗದಗ ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮಂಜುನಾಥ್ ಮಾದರ್ (19) ಮತ್ತು ಬಸವರಾಜ್ ಜವಳಬೆಂಚಿ (17) ದುರ್ಮರಣ ಕಂಡವರು. ಇವರು ಲಕ್ಕುಂಡಿಯಿಂದ ಎಲಿಸಿರುಂದ ಗ್ರಾಮದ ಸಂಬಂಧಿಕರ ಮನೆಗೆ ಬರ್ತ್ ಡೇ ಆಚರಣೆಗೆ ಬೈಕ್ ಮೇಲೆ ಹೊರಟಿದ್ದರು. ರಸ್ತೆ ಮಧ್ಯದಲ್ಲಿದ್ದ ಕಂದಕ ಗಮನಿಸದೆ ಬೈಕ್ ಚಲಾಯಿಸಿದ ಪರಿಣಾಮ ಬಿದ್ದು ಮೃತಪಟ್ಟಿದ್ದಾರೆ.
ಆಯ ತಪ್ಪಿ 50 ಅಡಿ ಆಳದ ಕಂದಕಕ್ಕೆ ಇವರು ಬಿದ್ದಿದ್ದಾರೆ. ಇತ್ತೀಚಿನ ಮಳೆಗೆ ರಸ್ತೆ ಕೊರೆದು ಕಂದಕ ಸೃಷ್ಟಿ ಆಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಇದರ ನಂತರವೂ ರಸ್ತೆ ದುರಸ್ತಿಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇಲ್ಲೊಂದು ಕಂದಕ ಇದೆ ಎಂಬುದೇ ವೇಗವಾಗಿ ಬರುವ ವಾಹನ ಸವಾರರಿಗೆ ತಿಳಿಯುವುದೇ ಇಲ್ಲ. ಬ್ಯಾರಿಕೇಡ್ ಅಥವಾ ಸುರಕ್ಷತಾ ಫಲಕ ಅಳವಡಿಸಿರಲಿಲ್ಲ. ಇದು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಲೋಪ ಎಂದು ಸ್ಥಳೀಯರು ಆರೋಪಿಸಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವವರೆಗೆ ಮೃತ ದೇಹ ಮೇಲೆತ್ತದಿರಲು ನಿರ್ಧರಿಸಿದ್ದಾರೆ.
ಇದನ್ನೂ ಓದಿ | ಅಪಘಾತದಿಂದ ಮೃತಪಟ್ಟ ಯುವಕ, ಅಂಗದಾನ ಮಾಡಿದ ಕುಟುಂಬ