ಗದಗ/ ಬೆಂಗಳೂರು: ತಮ್ಮ ಜನುಮದಿನಕ್ಕೆ (Yash Birthday) ಶುಭ ಕೋರಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಆಘಾತಕ್ಕೆ ಒಳಗಾಗಿ ಮೂವರು ಯುವಕರು ಪ್ರಾಣ ಕಳೆದುಕೊಂಡ (Three youths dead) ಘಟನೆಯಿಂದ ಚಿತ್ರ ನಟ ಯಶ್ (Actor Yash) ಅವರು ಬೇಸರಗೊಂಡಿದ್ದಾರೆ. ಪ್ರಸಕ್ತ ಶೂಟಿಂಗ್ ನಿಮಿತ್ತ ವಿದೇಶದಲ್ಲಿರುವ ಯಶ್ ಅವರು ಜನವರಿ ಎಂಟರಂದೇ (ಸೋಮವಾರ) ರಾಜ್ಯಕ್ಕೆ ಮರಳಲಿದ್ದು, ಬರುತ್ತಿದ್ದಂತೆಯೇ ನೇರವಾಗಿ ಮೂವರು ಯುವಕರು ಮೃತಪಟ್ಟ ಗದಗ ಜಿಲ್ಲೆಯ ಸೊರಣಗಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ಸ್ವತಃ ಸಚಿವ ಎಚ್.ಕೆ. ಪಾಟೀಲ್ (Minister HK Patil) ಅವರು ಇದನ್ನು ದೃಢೀಕರಿಸಿದ್ದಾರೆ.
ಯಶ್ ಅವರು ಈಗಾಗಲೇ ತಮ್ಮ ಶೂಟಿಂಗ್ ಸ್ಪಾಟ್‌ನಿಂದ ಹೊರಟಿದ್ದು ಸಂಜೆ ನಾಲ್ಕು ಗಂಟೆ ಹೊತ್ತಿಗೆ ಸೊರಣಗಿ ಗ್ರಾಮಕ್ಕೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮ ಯುವಕರಾದ ಹನುಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಹಾಗೂ ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಮೊದಲಾದ ಯುವಕರು ಮಧ್ಯ ರಾತ್ರಿಯೇ ಯಶ್ ಜನುಮ ದಿನ ಆಚರಣೆಗೆ ಭರದ ಸಿದ್ಧತೆಗಳನ್ನು ನಡೆಸಿದ್ದರು. ಅವರು ದೊಡ್ಡ ಕಟೌಟ್ ಸಿದ್ಧಪಡಿಸಿ ಅದನ್ನು ನೀಲಗಿರಿ ಮರಕ್ಕೆ ಕಟ್ಟುವ ಹಂತದಲ್ಲಿ ಮೂವರು ಅಲ್ಲಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿ ಆಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ. ಹನುಮಂತ ಹರಿಜನ (21), ಮುರಳಿ ನಡವಿನಮನಿ (20), ನವೀನ್ ಗಾಜಿ (19) ಮೃತಪಟ್ಟ ಯುವಕರು. ಮಂಜುನಾಥ್ ಹರಿಜನ, ದೀಪಕ ಹರಿಜನ, ಪ್ರಕಾಶ ಮ್ಯಾಗೇರಿ ಎಂಬವರಿಗೆ ಗಂಭೀರ ಗಾಯಗಳಾಗಿವೆ.
ಘಟನೆಯಿಂದ ಮೂರು ಕುಟುಂಬಗಳು ಭಾರಿ ನೋವನ್ನು ಅನುಭವಿಸುತ್ತಿದ್ದು, ಊರಿಗೆ ಊರೇ ಕಣ್ಣೀರಿಡುತ್ತಿದೆ. ಅದರ ನಡುವೆಯೇ ಮೂವರು ಯುವಕರ ಮೃತದೇಹಗಳನ್ನು ಸಾಮೂಹಿಕವಾಗಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಇದನ್ನೂ ಓದಿ: Birthday banner: ಮೂವರ ಸಾವಿಗೆ ಕಾರಣವಾಯಿತು ಯಶ್ ಬರ್ತ್‌ಡೇ ಬ್ಯಾನರ್
ಸರ್ಕಾರದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ
ಯಶ್ ಹುಟ್ಟುಹಬ್ಬದ ಬ್ಯಾನರ್ ಹಾಕುವ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ಮೂವರು ಯುವಕರ ಕುಟುಂಬಕ್ಕೆ ಸರ್ಕಾರದಿಂದ ತಲಾ ಎರಡು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕಾನೂನು ಸಚಿವರೂ ಆಗಿರುವ ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮೂವರು ಗಾಯಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡಲು ಸಿಎಂ ತಿಳಿಸಿದ್ದಾರೆ ಎಂದರು.
ಈ ಘಟನೆ ಬಗ್ಗೆ ನಟ ಯಶ್ ಕೂಡಾ ನನ್ನ ಜೊತೆ ಮಾತನಾಡಿದರು. ಅವರು ಸಂಜೆಯ ಹೊತ್ತಿಗೆ ಗದಗಕ್ಕೆ ಹೋಗ್ತಿದ್ದಾರೆ.. ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದು ಅವರು ಹೇಳಿದರು.
ಎತ್ತರದಲ್ಲಿ ಫ್ಲೆಕ್ಸ್ ಹಾಕುವಾಗ ಸೂಕ್ತವಾದ ರಕ್ಷಣಾ ವ್ಯವಸ್ಥೆ, ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ. ಈ ರೀತಿ ಘಟನೆಗಳು ನಡೆಯದಂತೆ ಏನೆಲ್ಲ ಎಚ್ಚರಿಕೆ ವಹಿಸಬಹುದು ಎಂದು ಚರ್ಚೆ ಮಾಡಲಾಗಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದರು.