Site icon Vistara News

Yash Birthday : ಬರ್ತ್‌ಡೇ ಅಂದ್ರೇನೆ ಭಯವಾಗುತ್ತಿದೆ; ಫ್ಯಾನ್ಸ್‌ ಸಾವಿಗೆ ಕಂಬನಿ ಮಿಡಿದ ಯಶ್

Yash Fans death

ಗದಗ : ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ವಿದ್ಯುತ್‌ ಶಾಕ್‌ನಿಂದ‌ ಮೃತಪಟ್ಟ ಮೂವರು ಅಭಿಮಾನಿಗಳ (Three Yash fans dead) ಮನೆಗೆ ನಟ ಯಶ್‌ (Actor Yash) ಅವರು ಸೋಮವಾರ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು. ಅದೇ ಹೊತ್ತಿಗೆ ಅಭಿಮಾನಿಗಳು ಹುಟ್ಟು ಹಬ್ಬದ ಸಂದರ್ಭದಲ್ಲಿ (Yash Birthday) ತಮ್ಮ ಅಭಿಮಾನವನ್ನು ಬ್ಯಾನರ್‌, ಕಟೌಟ್‌ಗಳ ಮೂಲಕ ತೋರಿಸುವ ಬದಲು ಒಳ್ಳೆಯ ಕೆಲಸದ ಮೂಲಕ, ಒಳ್ಳೆಯ ಬದುಕಿನ ಮೂಲಕ ತೋರಿಸಬೇಕು ಎಂದು ಮನವಿ ಮಾಡಿದರು.

ಸೋಮವಾರ ಚಿತ್ರ ನಟ ಯಶ್‌ ಅವರ ಜನ್ಮ ದಿನವಿತ್ತು. ಸ್ವತಃ ಯಶ್‌ ಅವರೇ ಇದನ್ನು ಸಾರ್ವಜನಿಕವಾಗಿ ಆಚರಿಸುವುದಿಲ್ಲ ಎಂದು ಘೋಷಿಸಿದ್ದರು. ಈ ನಡುವೆ, ಸೂರಣಗಿ ಗ್ರಾಮದ ಕೆಲವು ಯುವಕರು ಸೇರಿ ಬೃಹತ್‌ ಗಾತ್ರದ ಕಟೌಟ್‌ ರೂಪಿಸಿ ಅದನ್ನು ಕಟ್ಟುವ ಹಂತದಲ್ಲಿ ಅದು ವಿದ್ಯುತ್‌ ತಂತಿಗೆ ಸ್ಪರ್ಶಿಸಿತ್ತು. ಇದರಿಂದ ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು.

ಈ ವಿಷಯ ತಿಳಿಯುತ್ತಿದ್ದಂತೆಯೇ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಚಿತ್ರ ನಟ ಯಶ್‌ ಅವರು ಸಂಜೆಯ ಹೊತ್ತಿಗೆ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿ ಮೂಲಕ ಸೂರಣಗಿಗೆ ಆಗಮಿಸಿದರು. ಅಲ್ಲಿ ಮೃತರ ಮನೆಗಳಿಗೆ ಭೇಟಿ ನೀಡಿ ಮನೆ ಮಂದಿಗೆ ಸಾಂತ್ವನ ಹೇಳಿದರು.

ಒಬ್ಬನೇ ಮಗನನ್ನು ಕಳೆದುಕೊಂಡರು, ಬದುಕಿಗೆ ದಿಕ್ಕಾದ ಮಗನನ್ನು ಕಳೆದುಕೊಂಡವರು ಯಶ್‌ ಮುಂದೆ ಕಣ್ಣೀರಿಟ್ಟರು. ಮೃತಪಟ್ಟ ತಂದೆ ತಾಯಿಯ ಕೈ ಹಿಡಿದು ಅವರಿಗೆ ಸಾಂತ್ವನ ಹೇಳಿದ ಯಶ್‌ ಅವರ ಕಣ್ಣೀರು ಒರೆಸಿದರು.

ಈ ನಡುವೆ, ಕೆಲವರನ್ನು ಮಾತನಾಡಿಸುವ ವೇಳೆ ತಾವೇ ಕಣ್ಣೀರಾದರು, ಭಾವುಕರಾದರು. ಕುಟುಂಬದ ಮಂದಿಗೆ ಯಶ್‌ ಅವರ ಮುಂದೆ ತಮ್ಮ ನೋವನ್ನು ತೋಡಿಕೊಂಡರು.

ಬರ್ತ್‌ ಡೇ ಅಂದ್ರೇ ಭಯವಾಗಲು ಶುರುವಾಗಿದೆ ಎಂದ ಯಶ್‌

ಮೂರೂ ಕುಟುಂಬಗಳನ್ನು ಭೇಟಿ ಮಾಡಿದ ಯಶ್‌ ಅವರು, ಬಳಿಕ ಮಾಧ್ಯಮಗಳ ಜತೆ ಮಾತನಾಡಿ, “ನಾವು ಯಾರೂ ಈ ಬರ್ತ್‌ಡೇ ಸೆಲೆಬ್ರೇಷನ್‌ ಅನ್ನು ಇಷ್ಟಪಡಲ್ಲ. ಈ ಬರ್ತ್‌ಡೇ ಅಂದರೆನೇ ನನಗೆ ಭಯ ಆಗ್ತಿದೆ. ನಿಜವಾಗಲೂ ಈ ಬರ್ತ್‌ಡೇ ಆಚರಿಸದಿರಲು ಇಂಥ ಘಟನೆಗಳೇ ಕಾರಣ. ನನ್ನ ಬರ್ತ್‌ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂದು ಹೇಳಿದರು.

ಮೃತರ ಕುಟುಂಬಕ್ಕೆ ಹೇಗೆ ಸಹಾಯ ಮಾಡುತ್ತೀರಿ ಎಂದು ಕೇಳಿದಾಗ, ʻʻದುಡ್ಡಿನ ಸಹಾಯ ಯಾರು ಬೇಕಾದರೂ ಮಾಡಬಹುದು, ಮನೆ ಮಗ ಬರ್ತಾನಾ? ಏನೇ ಕೊಟ್ಟರೂ ಮಗ ಬರ್ತಾನಾ?ʼʼ ಎಂದು ಕೇಳಿದರು ಯಶ್‌.

ಆ ಕುಟುಂಬಕ್ಕೆ ಏನು ಬೇಕೋ ಅದನ್ನು ಮಾಡೋಣ. ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ಅದನ್ನು ನಾನಿಲ್ಲಿ ಹೇಳುವ ಅವಶ್ಯಕತೆಯಿಲ್ಲ. ಹಾಗಂತ ಇದೆಲ್ಲ ಒಂದು ಮಾದರಿ ಆಗಬಾರದು ಎಂದು ಹೇಳಿದರು.

ಅಭಿಮಾನಿಗಳಿಗೆ ಎಚ್ಚರಿಕೆ ನುಡಿ ಹೇಳಿದ ಯಶ್‌

ಅವರೆಲ್ಲರಿಗೂ ಈಗಿನ್ನು 20 ವರ್ಷ. ನಾನು ಎಲ್ಲರಿಗೂ ಹೇಳುವುದೇನೆಂದರೆ, ಈ ಬೈಕ್‌ ಚೇಸ್‌ ಮಾಡುವುದು, ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಮಾಡಬೇಡಿ. ನಮ್ಮ ಮೇಲೆ ಪ್ರೀತಿ ಗೌರವ ಇದ್ದರೆ, ಜವಾಬ್ದಾರಿಯಿಂದ ನಡೆದುಕೊಳ್ಳಿ. ನಿಮಗೂ ಕುಟುಂಬಗಳಿವೆ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನುಡಿ ಹೇಳಿದರು ಯಶ್‌. ನಿಮಗೆ ಅಭಿಮಾನ ತೋರಿಸಲೇಬೇಕು ಎಂದಿದ್ದರೆ, ಒಳ್ಳೆಯ ಕೆಲಸ ಮಾಡಿ. ತುಂಬ ದೊಡ್ಡದಾಗಿ ಬೆಳೆಯಿರಿ. ಅವರು ಖುಷಿಯಾಗಿದ್ದರೇ ನನಗೆ ಸಂತೋಷ ಎಂದರು.

ರಾಜ್ಯ ಸರ್ಕಾರದಿಂದ 2 ಲಕ್ಷ ರೂ. ಪರಿಹಾರ

ಈ ನಡುವೆ, ರಾಜ್ಯ ಸರ್ಕಾರು ವಿದ್ಯುತ್‌ ದುರಂತದಲ್ಲಿ ಮೃತಪಟ್ಟ ಯಶ್‌ ಅಭಿಮಾನಿಗಳ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡಿದೆ. ಅದರ ಜತೆಗೆ ಗಾಯಗೊಂಡವರಿಗೆ ತಲಾ 50 ಸಾವಿರ ರೂ. ಪರಿಹಾರವನ್ನು ಪ್ರಕಟಿಸಿದೆ.

Exit mobile version