ಗದಗ: ಅವನು ಎಂಜಿನಿಯರಿಂಗ್ ವಿದ್ಯಾರ್ಥಿ (Engineering student). ಈಗ ಆರನೇ ಸೆಮಿಸ್ಟರ್. ಕಳೆದ ಐದೂ ಸೆಮಿಸ್ಟರ್ ಗಳಲ್ಲಿ ಟಾಪರ್ ಆಗಿಯೇ ಇದ್ದ. ಇನ್ನೇನು ಮೂರು ದಿನ ಕಳೆದರೆ ಸೇನೆ ಸೇರುವ ಸಂದರ್ಶನವಿತ್ತು. ಈ ಬಾರಿ ಸೇನಾ ಪರೀಕ್ಷೆಯನ್ನು (Military exam) ಪಾಸ್ ಮಾಡಿ ಸೇರಿಯೇ ಬಿಡುವ ಖಚಿತತೆಯನ್ನು ಹೊಂದಿದ್ದ. ಆದರೆ, ಚಿತ್ರ ನಟ ಯಶ್ (Actor Yash) ಅವರನ್ನು ನೋಡುವ ಹಂಬಲ ಈ ಹುಡುಗನ ಪ್ರಾಣವನ್ನೇ ಕಸಿದುಕೊಂಡಿದೆ. ಅಂದ ಹಾಗೆ ನಾಳೆ (ಜನವರಿ 10) ನಿಖಿಲ್ ಹುಟ್ಟುಹಬ್ಬವಿತ್ತು!
ಇದು ಸೂರಣಗಿ ಪಟ್ಟಣದಲ್ಲಿ ನಡೆದ ಮೂವರು ಅಭಿಮಾನಿಗಳ ಸಾವಿಗೆ ಸಾಂತ್ವನ ಹೇಳಲು ಬಂದಿದ್ದ ಚಿತ್ರ ನಟ ಯಶ್ (Yash Birthday) ಅವರ ಪೊಲೀಸ್ ಬೆಂಗಾವಲು ವಾಹನ ಬೈಕ್‌ಗೆ ಡಿಕ್ಕಿ ಹೊಡೆದು ಸಂಭವಿಸಿದ ದುರಂತದಲ್ಲಿ ಪ್ರಾಣ ಕಳೆದುಕೊಂಡ ಗದಗಿನ ಬಿಂಕದಕಟ್ಟಿ ಗ್ರಾಮದ ನಿಖಿಲ್ ಎಂಬ ಪ್ರತಿಭಾವಂತ ಯುವಕನ ದುರಂತ ಕಥೆ.
ನಿಖಿಲ್ ಅಪ್ಪಟ ದೇಶಾಭಿಮಾನಿ ಮತ್ತು ಅಷ್ಟೇ ತೀವ್ರವಾದ ಯಶ್ ಅಭಿಮಾನಿ. ಯಶ್ ಅವರು ಸೂರಣಗಿ ದುರಂತದಲ್ಲಿ ಮೃತಪಟ್ಟವರ ಮನೆಗೆ ಬರುತ್ತಾರೆ ಎಂಬುದನ್ನು ತಿಳಿದ ಆತ ಅವರು ಗದಗ ಪಟ್ಟಣದ ಮೂಲಕ ಹಿಂದಿರುಗುವ ವೇಳೆ ಒಮ್ಮೆ ನೋಡಿ ಬಿಡಬೇಕು ಎಂಬ ಆತುರದಲ್ಲಿ ಗದಗ ಪಟ್ಟಣಕ್ಕೆ ಬಂದಿದ್ದರು. ಅಲ್ಲಿ ಬೈಕನ್ನು ರಸ್ತೆಯ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಿರುಗಿಸುವ ವೇಳೆ ವೇಗವಾಗಿ ಧಾವಿಸಿ ಬಂದ ಪೊಲೀಸ್ ಬೆಂಗಾವಲು ವಾಹನ ಡಿಕ್ಕಿಯಾಗಿತ್ತು.
ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ನಿಖಿಲ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಆತ ಬದುಕುಳಿಯಲಿಲ್ಲ. ಮಂಗಳವಾರ ಆತನ ಶವವನ್ನು ಖಾಸಗಿ ಆಸ್ಪತ್ರೆಯಿಂದ ಜಿಮ್ಸ್ ಆಸ್ಪತ್ರೆಗೆ ರವಾನಿಸಿ ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ನಂತರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಕುಟುಂಬಿಕರು ಪಾರ್ಥಿವ ಶರೀರವನ್ನು ಬಿಂಕದಕಟ್ಟಿ ಗ್ರಾಮಕ್ಕೆ ಒಯ್ದಿದ್ದಾರೆ.
ಇತ್ತ ಬಿಂಕದಕಟ್ಟಿ ಮನೆಯಲ್ಲಿ ಶೋಕ ಮಡುಗಟ್ಟಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ನಿಖಿಲ್‌ನ ಸಹಪಾಠಿಗಳು ದೊಡ್ಡ ಸಂಖ್ಯೆಯಲ್ಲಿ ಮನೆಗೆ ಬಂದಿದ್ದಾರೆ. ಶಿಕ್ಷಕರೂ ಧಾವಿಸಿದ್ದಾರೆ.
ಎಲ್ಲರ ಪ್ರೀತಿಯ ಪ್ರತಿಭಾವಂತ
ಅಂದ ಹಾಗೆ ಈ ರೀತಿ ಪ್ರಾಣ ಕಳೆದುಕೊಂಡಿರುವ ನಿಖಿಲ್ ಒಬ್ಬ ಅಪ್ಪಟ ಪ್ರತಿಭಾವಂತ, ಮಹಾನ್ ದೇಶಪ್ರೇಮಿ.
ಲಕ್ಷ್ಮೇಶ್ವರದ ಅಗಡಿ ಸಿವಿಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದ ನಿಖಿಲ್ ಬಹಳ ಬುದ್ಧಿವಂತನಾಗಿದ್ದ. ಈಗ ಆರನೇ ಸೆಮಿಸ್ಟರ್‌ನಲ್ಲಿರುವ ಆತ ಇಲ್ಲಿವರೆಗಿನ ಎಲ್ಲಾ ಸೆಮ್‌ಗಳಲ್ಲಿ ಟಾಪರ್ ಆಗಿದ್ದ.
ಮೂರು ದಿನದಲ್ಲಿ ಮಿಲಿಟರಿ ಸಂದರ್ಶನ ಇತ್ತು
ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಭಾರತೀಯ ಸೇನೆ ಸೇರುವ ಕನಸು ಕಂಡಿದ್ದ ನಿಖಿಲ್. ನಿಜವೆಂದರೆ ಈ ಹಿಂದೆಯೇ ಒಮ್ಮೆ ಭಾರತೀಯ ಸೇನೆಗೆ ಆತನ ಆಯ್ಕೆಯಾಗಿತ್ತು. ಆದರೆ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದರಿಂದ ರಿಜೆಕ್ಟ್ ಆಗಿತ್ತು.. ಈ ಬಾರಿ ಟ್ಯಾಟೂ ತೆಗೆಸಿಕೊಂಡು ಸೇನೆ ಸೇರಲು ಉತ್ಸುಕನಾಗಿದ್ದ..
ಅವನಿಗೆ ಲೆಫ್ಟಿನೆಂಟ್ ಕರ್ನಲ್ ಆಗಿ ದೇಶಸೇವೆ ಮಾಡೋ ಛಲ ಇತ್ತು. ಅವನಿಗೆ ಇನ್ನು ಮೂರು ದಿನದಲ್ಲಿ ಬೆಳಗಾವಿಯಲ್ಲಿ ಸೇನಾ ಸಂದರ್ಶನ ಇತ್ತು.
ಅದರ ನಡುವೆ ತನ್ನ ಅಭಿಮಾನದ ನಟ ಯಶ್ ಗದಗಕ್ಕೆ ಬರುತ್ತಾರೆ ಎಂಬ ಸುದ್ದಿ ತಿಳಿದು ಸ್ನೇಹಿತನ ಬೈಕ್ ತಗೆದುಕೊಂಡು ನಗರಕ್ಕೆ ಬಂದಿದ್ದ. ಅಲ್ಲಿ ವೈಡರ್ ಕ್ರಾಸ್ ಮಾಡುವ ವೇಳೆ ಪೊಲೀಸ್ ವಾಹನಕ್ಕೆ ಡಿಕ್ಕಿಯಾಗಿ ಪ್ರಾಣ ಕಳೆದುಕೊಂಡ. ಬದುಕಿದ್ದರೆ ನಾಳೆ ಜನವರಿ 10ರಂದು ಆತನ ಜನ್ಮದಿನದ ಸಂಭ್ರಮ ಇರುತ್ತಿತ್ತು. ಆದರೆ ಈಗ ಮನೆಯಲ್ಲಿ ಸೂತಕದ ವಾತಾವರಣ.