ಗದಗ: ರಾಕಿಂಗ್ ಸ್ಟಾರ್ ಯಶ್ (Actor Yash) ಅವರ ಮತ್ತೊಬ್ಬ ಅಭಿಮಾನಿ ಸಾವನ್ನಪ್ಪಿದ್ದಾರೆ. ಸೋಮವಾರ ಲಕ್ಷ್ಮೇಶ್ವರದ ಸೂರಣಗಿ ಗ್ರಾಮಕ್ಕೆ ಬಂದಿದ್ದ ಯಶ್ ಅವರು ಮರಳುವ ವೇಳೆ ಅವರ ಪೊಲೀಸ್ ಬೆಂಗಾವಲು (Police escort vehicle) ವಾಹನ ಡಿಕ್ಕಿಯಾಗಿ ಒಬ್ಬ ಯುವಕ ಗಾಯಗೊಂಡಿದ್ದ. ಆ ಯುವಕ ಈಗ ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಕಳೆದುಕೊಂಡಿದ್ದಾನೆ. ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿಖಿಲ್ (32) ಎಂಬಾತನೇ ಮೃತಪಟ್ಟ ಯುವಕ. ದುರಂತವೆಂದರೆ ನಿಖಿಲ್ ಬುಧವಾರ ತನ್ನದೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಬೇಕಾಗಿತ್ತು!
ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಮೂವರು ಅಭಿಮಾನಿಗಳ (Three Yash fans dead) ಮನೆಗೆ ನಟ ಯಶ್ (Actor Yash birthday) ಅವರು ಸೋಮವಾರ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಹನುಮಂತ ಹರಿಜನ (21), ಮುರಳಿ ನಡುವಿನಮನಿ (20) ಮತ್ತು ನವೀನ್ ಗಾಜಿ (19) ಎಂಬ ಮೂವರು ಯುವಕರು ಮೃತಪಟ್ಟರೆ, ಮಂಜುನಾಥ್ ಹರಿಜನ, ದೀಪಕ್ ಹರಿಜನ, ಪ್ರಕಾಶ್ ಮ್ಯಾಗೇರಿ ಎಂಬುವವರು ಗಾಯಗೊಂಡಿದ್ದರು.
ಗೋವಾದಲ್ಲಿ ಶೂಟಿಂಗ್‌ನಲ್ಲಿದ್ದ ಯಶ್ ಅವರು ಅಲ್ಲಿಂದ ಹುಬ್ಬಳ್ಳಿಗೆ ವಿಶೇಷ ವಿಮಾನದ ಮೂಲಕ ಬಂದು ಅಲ್ಲಿಂದ ಫಾರ್ಚುನರ್ ಕಾರಿನಲ್ಲಿ ಸೂರಣಗಿಗೆ ತೆರಳಿದ್ದರು. ಮನೆಯವರಿಗೆ ಸಾಂತ್ವನ ಹೇಳಿ ಮರಳುವ ವೇಳೆ ಗದಗದ ತೇಜಾ ನಗರದ ಬಳಿಕ ಅವಘಡ ಸಂಭವಿಸಿತ್ತು.
ಯುವಕ ನಿಖಿಲ್ ಸ್ಕೂಟರ್‌ನಲ್ಲಿ ಸಾಗುತ್ತಾ ತೇಜಾ ನಗರದ ಬಳಿ ರಸ್ತೆ ಕ್ರಾಸ್ ಮಾಡುವ ವೇಳೆ ಯಶ್ ಬೆಂಗಾವಲಿಗಿದ್ದ ಪೊಲೀಸ್ ವಾಹನ ಡಿಕ್ಕಿಯಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಪೊಲೀಸರು, ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗದಗ ತಾಲೂಕಿನ ಬಿಂಕದಕಟ್ಟಿ ಗ್ರಾಮದ ನಿಖಿಲ್ (32) ಯಶ್ ಅಭಿಮಾನಿಯಾಗಿದ್ದು, ಯಶ್ ಅವರನ್ನು ನೋಡಲು ಹಾತೊರೆದಿದ್ದ. ಇದೀಗ ಆತನೂ ಮೃತಪಟ್ಟಿದ್ದಾನೆ. ನಿಖಿಲ್ ಜನವರಿ 10ರಂದು ತನ್ನದೇ ಜನ್ಮದಿನ ಆಚರಿಸಲು ಸಿದ್ಧತೆ ನಡೆಸಿದ್ದ. ಆದರೆ, ಸಾವು ಅವನನ್ನು ಹಿಂಬಾಲಿಸಿತ್ತು.
ಚೇಸ್ ಮಾಡಬೇಡಿ ಎಂದಿದ್ದ ಯಶ್
ಸೋಮವಾರ ಮೃತಪಟ್ಟ ಮೂವರು ಯುವಕರ ಕುಟುಂಬಗಳನ್ನು ಭೇಟಿ ಮಾಡಿದ ಯಶ್ ಅವರು, ಬಳಿಕ ಮಾಧ್ಯಮಗಳ ಜತೆ ಮಾತನಾಡಿ ಯಾರೂ ಕೂಡಾ ಚೇಸ್ ಮಾಡುವುದು, ಬ್ಯಾನರ್, ಕಟೌಟ್ ಹಾಕುವ ಕೆಲಸ ಮಾಡಬೇಡಿ. ಹಿಂದೆ ಕೂಡಾ ಹಲವು ಅನಾಹುತಗಳು ಆಗಿವೆ. ಹೀಗಾಗಿ ನನಗೆ ಬರ್ತ್‌ಡೇ ಅಂದರೆನೇ ನನಗೆ ಭಯ ಆಗ್ತಿದೆ. ನಿಜವಾಗಲೂ ಈ ಬರ್ತ್‌ಡೇ ಆಚರಿಸದಿರಲು ಇಂಥ ಘಟನೆಗಳೇ ಕಾರಣ. ನನ್ನ ಬರ್ತ್‌ಡೇಯಿಂದ ಯಾರಿಗೂ ತೊಂದರೆ ಆಗಬಾರದು ಎಂದು ಹೇಳಿದ್ದರು.
ನಾನು ಎಲ್ಲರಿಗೂ ಹೇಳುವುದೇನೆಂದರೆ, ಈ ಬೈಕ್ ಚೇಸ್ ಮಾಡುವುದು, ಪ್ರಾಣಕ್ಕೆ ಅಪಾಯ ತಂದುಕೊಳ್ಳುವುದು ಮಾಡಬೇಡಿ. ನಮ್ಮ ಮೇಲೆ ಪ್ರೀತಿ ಗೌರವ ಇದ್ದರೆ, ಜವಾಬ್ದಾರಿಯಿಂದ ನಡೆದುಕೊಳ್ಳಿ. ನಿಮಗೂ ಕುಟುಂಬಗಳಿವೆ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ನುಡಿ ಹೇಳಿದರು ಯಶ್. ನಿಮಗೆ ಅಭಿಮಾನ ತೋರಿಸಲೇಬೇಕು ಎಂದಿದ್ದರೆ, ಒಳ್ಳೆಯ ಕೆಲಸ ಮಾಡಿ. ತುಂಬ ದೊಡ್ಡದಾಗಿ ಬೆಳೆಯಿರಿ. ಅವರು ಖುಷಿಯಾಗಿದ್ದರೇ ನನಗೆ ಸಂತೋಷ ಎಂದಿದ್ದರು.