ಶಿವಾನಂದ ಹಿರೇಮಠ ವಿಸ್ತಾರ ನ್ಯೂಸ್ ಗದಗ
ಲೇಔಟ್ ಮಾಲೀಕರ ಹಿತದೃಷ್ಟಿಯಿಂದ ಕೊರೊನಾ ಕಾಲದಲ್ಲಿ ಗದಗ ನಗರಾಭಿವೃದ್ಧಿ ಪ್ರಾಧಿಕಾರದ ನಿಯಮಗಳು ಸಡಿಲಿಕೆ ಆಗಿವೆ. ಇದು ಅಕ್ರಮಕ್ಕೆ ಮತ್ತಷ್ಟು ಆಸ್ಪದ ನೀಡಿದಂತಾಗುತ್ತಿದೆ. ಈ ಮೊದಲು ಲೇಔಟ್ ಗಳಲ್ಲಿನ ಶೇ. 60 ನಿವೇಶನಗಳನ್ನು, ತದನಂತರ ಶೇ. 40ರಷ್ಟು ನಿವೇಶನಗಳನ್ನು, ಆ ನಂತರ ಶೇ. 30ರಷ್ಟು ನಿವೇಶನಗಳನ್ನು ಪ್ರಾಧಿಕಾರದ ಹೆಸರಿಗೆ ಪ್ಲೆಡ್ಜ್ (ಹಕ್ಕು ಬದಲಾಯಿಸುವುದು) ಮಾಡುವ ನಿಯಮವಿತ್ತು. ಕೊರೊನಾ ಸಂದರ್ಭದಲ್ಲಿ ಲೇಔಟ್ ಮಾಲೀಕರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ನಿಯಮ ಬದಲಾಯಿಸಲಾಗಿದೆ. ಲೇಔಟ್‌ನ ಕಾರ್ನರ್ ಸೈಟ್ ಗಳನ್ನು ಮಾತ್ರ ಪ್ರಾಧಿಕಾರದ ಹೆಸರಿಗೆ ಪ್ಲೆಡ್ಜ್ ಮಾಡುವ ನಿಯಮ ಜಾರಿಯಾಗಿದ್ದು, ಮಾಲೀಕರಿಗೆ ಮತ್ತಷ್ಟು ಅನುಕೂಲವಾಗಿ ಲೇಔಟ್ ಗಳ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಲೇಔಟ್ ಅಕ್ರಮಗಳಿಗೆ ಗದಗ ಜಿಲ್ಲೆ ಹೆಸರುವಾಸಿ.
ಹೊಸ ನಿಯಮವೇನು?
ಶೇ.40% ಸೈಟ್ ಗಳನ್ನು ಲೇಔಟ್ ವಿನ್ಯಾಸದ ಅನುಮೋದನೆ (ಅಪ್ರೂವಲ್) ಆದ ತಕ್ಷಣವೇ ರಿಲೀಸ್ ಮಾಡಬೇಕೆಂದು ಕೊರೊನಾ ಸಂದರ್ಭದಲ್ಲಿ ನಿಮಯ ಕೊರೊನಾ ನಂತರದ ಕಾಲಘಟ್ಟದಲ್ಲಿ ಜಾರಿಯಾಗಿದೆ. ಹೀಗಾಗಿ ಅನಭಿವೃದ್ಧಿ ಲೇಔಟ್ ಗಳ ಶೇ.40 ನಿವೇಶನಗಳನ್ನು ಬೇಕಾಬಿಟ್ಟಿ ಮಾರಬಹುದು. ಫಾರ್ಮ ನಂ 3 ಸೃಷ್ಟಿಯಾಗಿ ನಿವೇಶನ ಖರೀದಿದಾರರಿಗೂ ಮಾಲೀಕತ್ವ ದೊರೆಯುತ್ತದೆ.
ಈ ಮೊದಲು ನಿಯಮವೇನಿತ್ತು?
*1998 ರಲ್ಲಿ ನಗರಾಭಿವೃದ್ಧಿ ರಚನೆ ನಂತರ 2004 -05 ರ ವರೆಗೆ ಲೇಔಟ್ ಗಳ ನಿರ್ಮಾಣಕ್ಕೆ ಕಠಿಣ ನಿಗಮಗಳೇ ಇರಲಿಲ್ಲ.ಲೇಔಟ್ ಅಭಿವೃದ್ಧಿ ಮಾಡಲು ಮಾಲೀಕರಿಗೆ ನಿರ್ದೇಶನ ನೀಡುವ ಅಧಿಕಾರ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇದ್ದರೂ ಕಟ್ಟುನಿಟ್ಟಾಗಿ ನಿರ್ದೇಶನ ನೀಡಲು ಪ್ರಾಧಿಕಾರ ವಿಫಲವಾಗಿದೆ. ಈ ಅವಧಿಯಲ್ಲಿ 137 ಲೇಔಟ್ ನಿರ್ಮಾಣಗೊಂಡಿವೆ. ಈ ಸಂದರ್ಭದಲ್ಲಿ ನಗರಾಭಿವೃದ್ಧಿಯ ಹಕ್ಕು ಕಸಿದುಕೊಂಡ ನಗರಸಭೆ ಡೆವಲಪ್‌ಮೆಂಟ್ ಚಾರ್ಜಸ್ ಕಟ್ಟಿಸಿಕೊಂಡು ತಾವೇ ಲೇಔಟ್ ಅಭಿವೃದ್ಧಿ ಮಾಡುತ್ತೇವೆಂದು ಅಧಿಸೂಚನೆ ಹೊರಡಿಸಿ ಕೆಲವೊಂದು ಕಡೆ ಲೇಔಟ್ ಬೇಕಾಬಿಟ್ಟಿ ನಿರ್ಮಿಸಿದ್ದಾರೆ.
2005 ರ ನಂತರ 2012 ವರೆಗೆ 60:40 ವ್ಯವಸ್ಥೆ ಜಾರಿ ಆಗಿದೆ. ಅಭಿವೃದ್ಧಿಪಡಿಸಬೇಕಾದ ಲೇಔಟ್ ಮಾಲೀಕರ ನಿವೇಶನಗಳಲ್ಲಿ ಶೇ. 60ರಷ್ಟು ನಿವೇಶನಗಳನ್ನು ಪ್ರಾಧಿಕಾರಕ್ಕೆ ಪ್ಲೆಡ್ಜ್ ಮಾಡಿ ಇನ್ನುಳಿದ ಶೇ. 40ರಷ್ಟು ನಿವೇಶನಗಳನ್ನು ತಕ್ಷಣವೇ ಮಾಲೀಕರಿಗೆ ಮಾರಾಟಕ್ಕೆ ಅನುಮತಿ ನೀಡುವುದು. ಈ ಅವಧಿಯಲ್ಲಿ 205 ಲೇಔಟ್‌ಗಳು ನಿರ್ಮಾಣಗೊಂಡಿವೆ. ಇದರಲ್ಲಿ ಶೇ.50ರಷ್ಟು ಲೇಔಟ್ ಅಭಿವೃದ್ಧಿಗೊಂಡಿಲ್ಲ. ಆದರೂ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರದಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ಸಿಕ್ಕು ನಿವೇಶನ ಮಾರಾಟ ಮಾಡಲಾಗಿದೆ.
2012ರಿಂದ 2016ರವರೆಗೆ 212 ಲೇಔಟ್ ಗಳು ನಿರ್ಮಾಣಗೊಂಡಿವೆ. 30:30:40 ಅನುಪಾತದಲ್ಲಿ ಮಾಲೀಕರಿಗೆ ನಿವೇಶನ ರಿಲೀಸ್ ಮಾಡಲಾಗಿದೆ. ಮೊದಲನೇ ಹಂತದಲ್ಲಿ ಶೇ.30 ರಷ್ಟು, ಎರಡನೇ ಹಂತದಲ್ಲಿ ಶೇ.30ರಷ್ಟು ಹಾಗೂ ಮೂರನೇ ಹಂತದಲ್ಲಿ ಲೇಔಟ್ ಅಭಿವೃದ್ಧಿಗೊಂಡ ನಂತರ ಸಂಪೂರ್ಣ ಸೈಟ್ ಗಳನ್ನು ಮಾಲೀಕರಿಗೆ ರಿಲೀಸ್ ಮಾಡಬೇಕು.
2015 ರ ನಂತರ ಲೇಔಟ್ ನೀಲ ನಕ್ಷೆ ನೀಡಿ ಪ್ರಾಧಿಕಾರ ದಿಂದ ಅನುಮತಿ ಪಡೆದು, ತದನಂತರ ಲೇಔಟ್ ಗಳನ್ನು ಸಂಪೂರ್ಣ ಅಭಿವೃದ್ಧಿ ಪಡಿಸಿ ಅಂತಿಮವಾಗಿ ಪ್ರಾಧಿಕಾರದಿಂದ ಅಂತಿಮ ಅನುಮೋದನೆ ಪಡೆಯಬೇಕು.
ನಗರಾಭಿವೃದ್ಧಿ ಪ್ರಾಧಿಕಾರ ಏನು ಮಾಡಬೇಕು?
-ನಗರ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ನಗರಾಭಿವೃದ್ಧಿ ಇಲಾಖೆಯ ಪಾತ್ರ ಪ್ರಮುಖ. ಈ ನಿಟ್ಟಿನಲ್ಲಿ ವಿದ್ಯುತ್, ನೀರು, ರಸ್ತೆ, ಉದ್ಯಾನವನ ಅಭಿವೃದ್ಧಿ, ಕೆಜಿಪಿ, ಕ್ಲಿಯರೆನ್ಸ್ ಸರ್ಟಿಫಿಕೇಟ್ ಒಳಗೊಂಡು ಎಲ್ಲ ಇಲಾಖೆಗಳ ಅನುಮತಿ ಪತ್ರಗಳನ್ನು ಪರಿಶೀಲಿಸಿ, ಸ್ಥಳ ವೀಕ್ಷಣೆ ನಂತರವೇ ಅನುಮೋದನೆ ನೀಡಬೇಕು. ಈ ಪ್ರಕ್ರಿಯೆಗೆ ಪ್ರಾಮಾಣಿಕತೆ ಬಹುಮುಖ್ಯ ಪಾತ್ರ ವಹಿಸುತ್ತದೆ.
-ಅನಭಿವೃದ್ಧಿಯ 554 ಲೇಔಟ್ ಮಾಲೀಕರಿಗೆ ನೋಟೀಸ್ ಜಾರಿಗೊಳಿಸುವುದರ ಜತೆಗೆ ಗಡುವು ನೀಡಬೇಕಿದೆ.
-ಪ್ರತಿ ಲೇಔಟ್ ಗಳಲ್ಲಿನ ಖಾಲಿ ನಿವೇಶನಗಳನ್ನು ಗುರುತಿಸಿ ಪ್ರಾಧಿಕಾರದ ಹೆಸರಿಗೆ ಪ್ಲೆಡ್ಜ್ ಮಾಡಬೇಕು.
-ಲೇಔಟ್ ಮಾಲೀಕರ ಸಭೆ ಕರೆದು ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ.
-ನಿವೇಶನ ಖರೀದಿದಾರರಿಂದ ಏರಿಯಾ ಡೆವಲಪ್‌ಮೆಂಟ್ ಚಾರ್ಜ್ ಕಟ್ಟಿಸಿಕೊಳ್ಳುವ ಹವ್ಯಾಸ ರೂಢಿಯಲ್ಲಿದ್ದು, ನಗರಾಭಿವೃದ್ಧಿ ಮಧ್ಯಪ್ರವೇಶಿಸಿ ಈ ಹವ್ಯಾಸಕ್ಕೆ ಇತಿಶ್ರಿ ಹೇಳಬೇಕು.
ನಿವೇಶನ ಖರೀದಿಗೆ ಏನು ಮಾಡಬೇಕು?
ಗದಗ ನಗರದಲ್ಲಿ, ಅಥವಾ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನಿವೇಶನ ಖರೀದಿಗೆ ಆಸಕ್ತಿ ಹೊಂದಿದ ನಾಗರಿಕರು ನಿವೇಶನದ ದಾಖಲೆಗಳ ಝೆರಾಕ್ಸ್ ಪ್ರತಿಯೊಂದಿಗೆ ಸ್ಥಳೀಯ ನಗರಾಭಿವೃದ್ಧಿಗೆ ಭೇಟಿ ನೀಡಿ ಪರಿಶೀಲಿಸಿ. ಲೇಔಟ್ ಮಾಲೀಕರಿಗೆ ಸ್ಥಳೀಯ ಪ್ರಾಧಿಕಾರದಿಂದ ಕ್ಲಿಯರೆನ್ಸ್ ಸರ್ಟಿಫಿಕೇಟ್ ದೊರೆತಿದೆಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ. ಈ ಸಂದರ್ಭದಲ್ಲಿ ಕಾನೂನು ಸಲಹೆ ಪಡೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ | ಗದಗ ಲೇಔಟ್ ನಷ್ಟ | ಅಭಿವೃದ್ಧಿ ಆಗದ ಬಡಾವಣೆಗಳಿಗೆ ಸಕ್ರಮ ದಾಖಲೆ ನೀಡುವುದರಲ್ಲಿ ʻಗುಡಾʼ ಸದಾ ಮುಂದು