ಕೊಪ್ಪಳ: ನಮ್ಮವರೇ ನನ್ನನ್ನು ಬಳ್ಳಾರಿಯಲ್ಲಿರದಂತೆ ಮಾಡಿದರು. ನಾನು ಬಳ್ಳಾರಿಯಲ್ಲಿದ್ದರೆ ರಾಜಕೀಯವಾಗಿ ಬೆಳೆಯುತ್ತಾನೆ ಎಂಬ ಕಾರಣಕ್ಕೆ ನಮ್ಮವರು, ದೊಡ್ಡವರು ಸೇರಿ ಬಳ್ಳಾರಿಯಿಂದ ಹೊರ ಹಾಕಿಸಿದ್ದಾರೆ. ಶ್ರೀರಾಮುಲು ಅವರನ್ನು ಮಗುವಿನಂತೆ ನೋಡಿಕೊಂಡಿದ್ದೆ. ಆದರೆ ಈಗ ಯಾರೂ ನನ್ನೊಂದಿಗೆ ಬಂದಿಲ್ಲವೆಂದು ಚಿಂತಿಸುವುದಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhan Reddy) ಹೇಳಿದ್ದಾರೆ.
ಗಂಗಾವತಿಯಲ್ಲಿ ಏರ್ಪಡಿಸಿದ್ದ ಬಳ್ಳಾರಿ ಪಾಲಿಕೆಯ 35 ವಾರ್ಡ್‌ಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, 1999ರಲ್ಲಿ ಶ್ರೀರಾಮುಲು ಅವರನ್ನು ಗೆಲ್ಲಿಸಿದ್ದೆ. ಸುಷ್ಮಾ ಸ್ವರಾಜ್ ಬಳ್ಳಾರಿಗೆ ಬಂದಾಗ ಶ್ರೀರಾಮುಲು ನನ್ನ ಸಹಾಯ ಕೇಳಿದ್ದರು. ಕುಮಾರಸ್ವಾಮಿ ಸಿಎಂ ಇದ್ದಾಗ ಅವರ ವಿರುದ್ಧ ಮಾತನಾಡಿದ್ದೆ. ಆಗ ಪಕ್ಷದಿಂದ ನನ್ನ ಅಮಾನತು ಮಾಡಿದ್ದರು. ಕುಮಾರಸ್ವಾಮಿ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವಂತೆ ಸುಷ್ಮಾ ಸ್ವರಾಜ್ ಹೇಳಿದ್ದರು. ಆದರೆ ನಾನು ನನ್ನ ಹೋರಾಟ ಬಿಟ್ಟಿಲ್ಲ ಎಂದರು.
ಕಾಂಗ್ರೆಸ್‌ಗೆ ಸೇರಿದರೆ ಜೈಲಿಗೆ ಕಳುಹಿಸುವುದಿಲ್ಲ ಎಂದಿದ್ದರು. ಆದರೆ, ನಾನು ಬಿಜೆಪಿ ಬಿಡಲಿಲ್ಲ. ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಆದರೆ, ಅಂದು ಪಾದಯಾತ್ರೆ ಮಾಡಿದವರು ಆರಂಭ ಮಾಡಲಿಲ್ಲ. ನಮ್ಮವರು ಸಹ ಆರಂಭ ಮಾಡಿಲ್ಲ. ರಾಜ್ಯದಲ್ಲಿ ನಾನೇ ಸಿಎಂ ಆಗುತ್ತೇನೆ, ಸಿಎಂ ಆಗುವವರನ್ನು ಮಾಡುತ್ತೇನೆ ಎಂದರು.
ಇದನ್ನೂ ಓದಿ | JDS Politics: ನನ್ನ ಬಗ್ಗೆ ಮಾತನಾಡಿದರೆ ಅವರ ಬಂಡವಾಳ ಬಯಲು: ದಳಪತಿಗಳಿಗೆ ಶಿವಲಿಂಗೇಗೌಡ ಎಚ್ಚರಿಕೆ
2024ರಲ್ಲಿ ಬಳ್ಳಾರಿಯಲ್ಲಿ ನಿತ್ಯ 10 ವಿಮಾನಗಳು ಬರುವಂತೆ ಮಾಡುತ್ತೇನೆ. ಬಳ್ಳಾರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಜಿಂದಾಲ್‌ನವರು ಒಪ್ಪಿಕೊಂಡಿದ್ದರು. ರೈಲು ಪ್ರಯಾಣದಲ್ಲಿ ಹಲವರು ಹತ್ತುತ್ತಾರೆ, ಕೆಲವರು ಇಳಿಯುತ್ತಾರೆ. ಯಾರು ನನ್ನೊಂದಿಗೆ ಬಂದಿಲ್ಲ ಎಂದು ಚಿಂತಿಸುವುದಿಲ್ಲ. ಯುದ್ದಕ್ಕೆ ನಿಂತಾಗ ಸ್ನೇಹಿತರು, ಅಣ್ಣ ತಮ್ಮಂದಿರನ್ನು ನೋಡಬಾರದು ಎಂದು ಶ್ರೀಕೃಷ್ಣ ಹೇಳಿದ್ದಾನೆ ಎಂದು ಪರೋಕ್ಷವಾಗಿ ಸಚಿವ ಶ್ರೀರಾಮುಲು ಹಾಗೂ ಸಹೋದರ ಸೋಮಶೇಖರ ರೆಡ್ಡಿ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಈಗ ಜನಾರ್ದನ ರೆಡ್ಡಿ ಮಾತುಕತೆ ನಡೆಸಿದ್ದಾರೆ. ಮತ್ತೆ ಬಿಜೆಪಿ ಸೇರುತ್ತಾರೆ ಎಂಬ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ, ನಾನು ಮುಂದೆ ಇಟ್ಟ ಹೆಜ್ಜೆ ಹಿಂದಕ್ಕೆ ಇಡುವುದಿಲ್ಲ ಎಂದ ಅವರು, ಬಳ್ಳಾರಿ ನಗರ ಕ್ಷೇತ್ರದಲ್ಲಿ ಮುಂಬರುವ ಚುನಾವಣೆಯಲ್ಲಿ ಲಕ್ಷ್ಮಿ ಅರುಣಾರನ್ನು ಗೆಲ್ಲಿಸಬೇಕು. ಬಳ್ಳಾರಿಗೆ ಹೋಗಲು ನ್ಯಾಯಲಯ ನಿರ್ಬಂಧವಿರುವ ಹಿನ್ನೆಲೆಯಲ್ಲಿ ಬಳ್ಳಾರಿ ಕಾರ್ಯಕರ್ತರ ಸಭೆಯನ್ನು ಗಂಗಾವತಿಯಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.