ಶಿರಸಿ (ಯಲ್ಲಾಪುರ): ದೇವರನ್ನು ಬಿಟ್ಟರೆ ಮತ್ತೊಬ್ಬ ಸೃಷ್ಟಿಕರ್ತ ಎಂದರೆ ಕವಿ ಮಾತ್ರ. ಆತ ಯಾವುದೇ ಲೋಕವನ್ನು ತನ್ನ ಕವಿತೆ ಮೂಲಕ ಸೃಷ್ಟಿಸಬಲ್ಲ ಎಂದು ಚಿಂತಕ ಹಾಗೂ ಬರಹಗಾರ ರೋಹಿತ್ ಚಕ್ರತೀರ್ಥ (Rohit Chakrateertha) ಅಭಿಪ್ರಾಯಪಟ್ಟರು. ಯಲ್ಲಾಪುರದ ಅಡಿಕೆ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ (Akhila Bharateeya sahitya Parishad) ಹಾಗೂ ಕರ್ನಾಟಕ ಗಮಕ ಕಲಾ ಪರಿಷತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಜಿಲ್ಲಾ ಮಟ್ಟದ ಸಾಹಿತ್ಯ-ಗಮಕ ಅಧಿವೇಶನದ (Sahitya Gamaka Adhiveshana) ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ʻʻಸಾಹಿತ್ಯ ಎಂಬುದು ನಮ್ಮಲ್ಲಿನ ಮನುಷ್ಯತ್ವದ ಗುಣವನ್ನು ಬೆಳೆಸುವ ಒಂದು ಸಾಧನ. ಅಂತಹ ಸಾಹಿತ್ಯಕ್ಕೆ ಅದರದ್ದೇ ಆದ ಒಂದು ಶಕ್ತಿ ಇದೆ. ಸಾಹಿತ್ಯ ಕವಿತೆ ಮೂಲಕ ಹೊಸ ಲೋಕವನ್ನು ಸೃಷ್ಟಿಸುವ ಗುಣ ಬೆಳೆಸಿಕೊಳ್ಳಬೇಕು. ಕೇವಲ ಕವಿತೆ ಬರೆದವರು ಮಾತ್ರ ಕವಿಯಾಗಲಾರ. ಅದನ್ನು ಕೇಳಿ ಆಸ್ವಾದಿಸುವರು ಕೂಡ ಕವಿಗಳಾಗುತ್ತಾರೆ. ಅದರ ಆಳಕ್ಕೆ ಇಳಿದರೆ ಮಾತ್ರ ಅದರ ಸತ್ವ ತಿಳಿಯುತ್ತದೆʼʼ ಎಂದು ಹೇಳಿದರು.
ʻʻಕಾವ್ಯವನ್ನು ಕೇವಲ ಸಾಲುಗಳಲ್ಲಿ ಓದಿದರೆ ಸಾಲದು. ನಮ್ಮಲ್ಲಿನ ಭಾವನೆಗಳಲ್ಲಿ ಬೆರೆಸಿಕೊಳ್ಳಬೇಕು. ಕಾವ್ಯ ಕೇವಲ ಗಂಭೀರವಾಗಿರದೆ ಹೂವನ್ನು ಅರಳಿಸುವ ರೀತಿ ಇರಬೇಕಿದೆ. ಸಾರ್ಥಕವಾದ ಒಂದು ಕಥೆ ಕಾವ್ಯ ಬರೆದರೆ ಸಾಕು ಆತ ಕವಿಯಾಗುತ್ತಾನೆ. ಹಾಡುವ ಸಾಹಿತ್ಯಗಳೇ ನಮ್ಮನ್ನು ಸೆಳೆಯುತ್ತವೆ. ಅದರಿಂದ ಹೊಸ ಭಾವನೆಗಳು ಹುಟ್ಟುತ್ತವೆ. ಕಾವ್ಯವನ್ನು ಆಸ್ವಾದಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಆಗ ಮಾತ್ರ ಕಾವ್ಯಗಳು ನಮ್ಮ ಮನಸ್ಸಿಗೆ ಹತ್ತಿರವಾಗುತ್ತವೆʼʼ ಎಂದು ಹೇಳಿದರು.
ಗುಣ, ಸಂಖ್ಯೆಯಲ್ಲಿ ಸಾಹಿತ್ಯ ಸಮ್ಮೇಳನ ಬಲವರ್ಧನೆ: ಕೋಣೆಮನೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷ ಹಾಗೂ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಸಾಹಿತ್ಯ ಸಮ್ಮೇಳನಗಳು ಸಂಖ್ಯಾತ್ಮಕವಾಗಿ ಹಾಗೂ ಗುಣಾತ್ಮಕವಾಗಿ ಯಶಸ್ಸು ಕಂಡಿವೆ. ಅದಕ್ಕೆ ನಾವು ನಡೆಸಿದ ಅನೇಕ ಸಾಹಿತ್ಯ-ಗಮಕ ಅಧಿವೇಶನಗಳೇ ಸಾಕ್ಷಿ ಎಂದರು.
ಅಖಿಲ ಭಾರತ ಸಾಹಿತ್ಯ ಪರಿಷತ್ 1966ರಿಂದಲೇ ಸಾಹಿತ್ಯ ಸೇವೆಯನ್ನು, ಸಂಘಟನೆಯನ್ನು ನಡೆಸಿಕೊಂಡು ಬರುತ್ತಿದೆ. ರಾಜ್ಯ ಘಟಕ ಆರಂಭವಾಗಿದ್ದು 2015ರಲ್ಲಿ. ಅದಾದ ಬಳಿಕ ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಡಹಳ್ಳಿಯಲ್ಲಿ ಮೊದಲ ರಾಜ್ಯ ಅಧಿವೇಶನ ನಡೆದಿದ್ದು, ಬಳಿಕ ಎರಡು ಸಮಾವೇಶಗಳು ನಡೆದಿವೆ. ಜಿಲ್ಲಾ ಮಟ್ಟದಲ್ಲೂ ಸಾಹಿತ್ಯ ಪರಿಷದ್ ಸಕ್ರಿಯವಾಗಿದೆ ಎಂದು ಹರಿಪ್ರಕಾಶ್ ಕೋಣೆಮನೆ ವಿವರಿಸಿದರು.
ಇದನ್ನೂ ಓದಿ: Akhil Bharatiya Sahitya Parishad : ನಮ್ಮವರು ಬ್ರಿಟಿಷ್ ಮಾನಸಿಕತೆಯಿಂದ ಹೊರಬಂದಿಲ್ಲ: ಹರಿಪ್ರಕಾಶ್ ಕೋಣೆಮನೆ
ʻʻನಾವೆಲ್ಲ ಒಂದು ಎಂಬುದು ರಾಷ್ಟ್ರೀಯತೆ. ಈ ಕಾರಣಕ್ಕಾಗಿಯೇ ಸಾಹಿತ್ಯದಲ್ಲಿ ರಾಷ್ಟ್ರೀಯತೆ ಅನಿವಾರ್ಯವಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಯೋಚಿಸುವುದು ಅವಶ್ಯಕವಾಗಿದೆ. ಸಾಹಿತ್ಯದ ರಚನೆ ಯಾವುದೋ ಖುಷಿ, ಪ್ರಚಾರ, ಸ್ಥಾನಮಾನ ಗಳಿಸಲು ಅಲ್ಲ. ಮುಂದಿನ ಪೀಳಿಗೆಯಲ್ಲಿ ರಾಷ್ಟ್ರೀಯತೆ ಮನೋಭಾವ ಬೆಳೆಸುವ ದೃಷ್ಟಿಯಿಂದ ಸಾಹಿತ್ಯ ಕುರಿತ ಇಂತಹ ಅಧಿವೇಶನಗಳು ಹೆಚ್ಚು ನಡೆಸಬೇಕಿದೆ. ಸಮಾನ ಮನಸ್ಕರು, ಸಮಾಜ ಸುಧಾರಕರು ಒಂದೆಡೆ ಸೇರಿಸಿ ಸಾಹಿತ್ಯ ಸಮ್ಮೇಳನ ನಡೆಸಬೇಕಿದೆʼʼ ಎಂದರು ಹೇಳಿದರು.
ʻʻಕಳೆದ ಹತ್ತು ವರ್ಷದಿಂದ ಈಚೆಗೆ ರಾಷ್ಟ್ರ ಕವಿ ಬಿರುದಿಗೆ ನಮಗೆ ಕವಿಗಳೇ ಸಿಗುತ್ತಿಲ್ಲ. ಸಮಾಜದಲ್ಲಿ ಸಾಹಿತ್ಯದ ಕೃಷಿ ಕ್ಷೀಣಿಸುತ್ತಿದೆ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಅದನ್ನು ನಾವು ತೊಡೆದು ಹಾಕಬೇಕಾಗಿದೆʼʼ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ ನೆರೂರ, ಟಿಎಂಎಸ್ ಅಧ್ಯಕ್ಷ ಎನ್.ಕೆ. ಭಟ್ ಅಗ್ಗಾಶಿ ಕುಂಬ್ರಿ, ಅಡಿಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ರವಿ ಹೆಗಡೆ ಉಪಸ್ಥಿತರಿದ್ದರು.