ಬೆಂಗಳೂರು: ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅಭಿಯಾನದ ಕೊನೇ ಚಿತ್ರ ಗಂಧದ ಗುಡಿ (Gandhada Gudi) ಚಿತ್ರವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ತೋರಿಸುವಂತೆ ಒತ್ತಾಯ ಹೆಚ್ಚಾಗುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಮಾಡುವಂತೆ ಶಿಕ್ಷಣ ಸಚಿವ ನಾಗೇಶ್‌ಗೆ ಚಿಂತಕರಿಂದ ಹಾಗೂ ಪೋಷಕರಿಂದ ಮನವಿ ಬರುತ್ತಿದೆ. ಈ ಸಂಬಂಧ ಟ್ವೀಟ್ ಅಭಿಯಾನವು ಶುರುವಾಗಿದೆ.
ಡಾ. ಪುನೀತ್ ರಾಜಕುಮಾರ್ ನಟನೆಯ ಗಂಧದ ಗುಡಿ ಚಿತ್ರವನ್ನು ಶಾಲಾ ಮಕ್ಕಳಿಗೆ ತೋರಿಸುವಂತೆ ನಾಗರಿಕರಿಂದ, ಚಿಂತಕರಿಂದ ಒತ್ತಾಯ ಕೇಳಿ ಬಂದಿದೆ. ಈ ವಿಚಾರವಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿ, “ನಾನು ಗಂಧದ ಗುಡಿ ಚಿತ್ರ ನೋಡಿಲ್ಲ. ಅಭಿಮಾನಿಗಳು, ಕೆಲ ಚಿಂತಕರು ಚೆನ್ನಾಗಿದೆ ಎಂದು ಹೇಳಿದ್ದಾರೆ. ಶಿಕ್ಷಣ ಇಲಾಖೆಯ ಗಮನಕ್ಕೂ ತಂದಿದ್ದಾರೆ. ಮಕ್ಕಳಿಗೆ ಯೋಗ್ಯ ಅನಿಸಿದ್ದರೆ, ಸಿಎಂ ಜತೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತೇನೆ” ಎಂದು ತಿಳಿಸಿದ್ದಾರೆ.
ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಯಾನ
ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ ಮತ್ತು ವನ್ಯಜೀವಿಗಳ ಕುರಿತಂತೆ ಆಸಕ್ತಿ ಹಾಗೂ ಪ್ರೀತಿ ಹುಟ್ಟಿಸುವಂಥದ್ದಾಗಿದೆ. ಅದನ್ನು ಏಕೆ ಶಾಲಾ ಮಕ್ಕಳಿಗೆ ತೋರಿಸಬಾರದು ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಟ್ವೀಟ್ ಮಾಡಿದ್ದಾರೆ. ಸರ್ಕಾರವೇ ಎಲ್ಲ ಕಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರ ಅವರ ನೆನಪು ಹಾಗೂ ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶಾಲಾ ಪಠ್ಯಕ್ಕೆ ಪುನೀತ್ ರಾಜಕುಮಾರ್
ಮತ್ತೊಂದು ಕಡೆ ಶಾಲಾ ಪಠ್ಯದಲ್ಲಿ ಪುನೀತ್ ಕುರಿತ ಪಠ್ಯ ಸೇರ್ಪಡೆಗೂ ಒತ್ತಾಯ ಕೇಳಿ ಬರುತ್ತಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಪುನೀತ್ ಅವರ ಪಠ್ಯವನ್ನು ಸೇರಿಸುವಂತೆ ಒತ್ತಾಯ ಕೇಳಿ ಬರುತ್ತಿದೆ. ಹಂತ ಹಂತವಾಗಿ ಎಲ್ಲ ಕ್ರಮ ತೆಗೆದುಕೊಳ್ಳುತ್ತೇವೆ. ಏನೆಲ್ಲ ಸಾಧ್ಯವೋ ಎಲ್ಲವನ್ನೂ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | ಕನ್ನಡ ರಾಜ್ಯೋತ್ಸವ | ಇಂದು ಪುನೀತ್‌ಗೆ ಕರ್ನಾಟಕ ರತ್ನ ಪ್ರದಾನ, ರಜನಿಕಾಂತ್, ಜ್ಯೂ.ಎನ್‌ಟಿಆರ್ ಭಾಗಿ