Site icon Vistara News

ಗಾಂಧಿವಾದ ಕಿತ್ತೊಗೆಯಬೇಕು, ಪ್ರಗತಿಪರರಿಗೆ ಸಂವಿಧಾನ ತತ್ವ ತಿಳಿದಿಲ್ಲ! ನಟ ಚೇತನ್ ಹೊಸ ವರಸೆ

Gandhian ideology must be unfollowed Says Actor Chetan

ಬೆಂಗಳೂರು: ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್‌ ತಂಡದಲ್ಲಿ ಮೀಸಲಾತಿಯನ್ನು ತರಬೇಕು ಎಂದು ಪ್ರತಿಪಾದಿಸಿದ್ದ ಸಾಮಾಜಿಕ ಕಾರ್ಯಕರ್ತ ಹಾಗೂ ಸ್ಯಾಂಡಲ್‌ವುಡ್ ನಟ ಚೇತನ್ ಅಹಿಂಸಾ(Actor Chetan) ಅವರು, ತಮ್ಮ ವಿವಾದಾತ್ಮಕ ಹೇಳಿಕೆಗಳ ಮೂಲಕ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಈ ಮತ್ತೆ ಅಂಥದ್ದೇ ಹೇಳಿಕೆಯ ಮೂಲಕ ಮಹಾತ್ಮ ಗಾಂಧಿ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಗಾಂಧಿವಾದವನ್ನು (Gandhian ideology) ಕಿತ್ತೊಗೆಯಯಬೇಕು ಎಂದು ಹೇಳುವ ಮೂಲಕ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಕುರಿತು ಎಕ್ಸ್ ವೇದಿಕೆಯಲ್ಲಿ ಪೋಸ್ಟ್ ಮಾಡಿರುವ ನಟ ಚೇತನ್, ಮಹಾತ್ಮ ಗಾಂಧಿ ಅವರ ಧಾರ್ಮಿಕ ಸಾಮರಸ್ಯ ಇಂದಿನ ಅಗತ್ಯ ಎಂದು ಪ್ರತಿಪಾದಿಸುವ ಉದಾರವಾದಿಗಳಿಗೆ ನಮ್ಮ ಸಾಂವಿಧಾನಿಕ ತತ್ವದಗಳು ಅರ್ಥವಾಗುತ್ತಿಲ್ಲ. ಖಾಸಗಿಯಾಗಿ ನಾವೆಲ್ಲರೂ ಧಾರ್ಮಿಕ ಹಕ್ಕು ಹೊಂದಿದ್ದೇವೆ. ಸಾರ್ವಜನಿಕವಾಗಿ ನಾವು ಜಾತ್ಯತೀತ ರಾಷ್ಟ್ರ. ಅಂದರೆ, ಧರ್ಮದಿಂದ ದೂರವಾಗಿದ್ದೇವೆ. ಹಾಗಿದ್ದ ಮೇಲೆ, ಧಾರ್ಮಿಕ ಸಾಮರಸ್ಯ ಎನ್ನುವುದು ಅಸಮಾನತೆಯ ಸಂರಕ್ಷಣೆಯಾಗಿದೆ. ಗಾಂಧಿವಾದವನ್ನು ಕಿತ್ತೊಗೆಯಬೇಕು ಎಂದು ಟ್ವೀಟ್ ಮಾಡಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ನಟ ಚೇತನ್ ಅವರು ಗಾಂಧಿ ಮತ್ತು ಗಾಂಧಿವಾದ ವಿರುದ್ದ ತಮ್ಮ ಆಕ್ರೋಶವನ್ನು ಹೊರ ಹಾಕುತ್ತಾರೆ. ಇತ್ತೀಚೆಗಷ್ಟೇ ಅವರು, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿ ಡಿ ಸಾವರ್ಕರ್ ಅವರ ಫೋಟೋ ಜತೆಗೆ ಮಹಾತ್ಮ ಗಾಂಧಿ ಫೋಟೋವನ್ನು ತೆರವು ಮಾಡಬೇಕು ಎಂದು ಹೇಳಿದ್ದರು. ಕಾಂಗ್ರೆಸ್ ಮತ್ತು ಖರ್ಗೆ ಅವರಿಗೆ ಸಾವರ್ಕರ್ ಶತ್ರುವಾಗಿರಬಹುದು. ಆದರೆ, ನಮ್ಮಂಥ ಸಮಾನತಾವಾದಿಗಳಿಗೆ ಸಾವರ್ಕರ್ ಮತ್ತು ಗಾಂಧಿ ಇಬ್ಬರು ನಮ್ಮ ಸೈದ್ಧಾಂತಿಕ ಶತ್ರುಗಳು. ನೀವು ಸಾವರ್ಕರ್ ಮತ್ತು ಗಾಂಧಿ ಇಬ್ಬರ ಫೋಟೋಗಳನ್ನು ತೆಗೆದು ಹಾಕುವುದು ಸೂಕ್ತ. ಇಲ್ಲವಾದರೆ ಇಬ್ಬರನ್ನು ಇಟ್ಟುಕೊಳ್ಳಿ ಮತ್ತು ಸುವರ್ಣ ಸೌಧದಲ್ಲಿ ಕನ್ನಡಿಗ ತಂದೆ ಪೆರಿಯಾರ್ ಅವರ ಭಾವಚಿತ್ರವನ್ನು ಹಾಕಿ ಎಂದು ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿದ್ದರು.

ನಟ ಚೇತನ್ ಅವರು ಸಾರ್ವಜನಿಕವಾಗಿ ಆಗು ಹೋಗುಗಳಿಗೆ ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಾರೆ. ಆದರೆ, ಬಹುತೇಕ ಸಂದರ್ಭದಲ್ಲಿ ಅವರ ಹೇಳಿಕೆಗಳು ಸಾರ್ವಜನಿಕ ಸಾಮರಸ್ಯವನ್ನು ಹಾಳು ಮಾಡುವ ರೀತಿಯಲ್ಲಿ ಇರುತ್ತವೆ. ಇಲ್ಲವೇ ವಿವಾದಕ್ಕೆ ಕಾರಣವಾಗುವ ರೀತಿಯಲ್ಲಿ ಇರುತ್ತವೆ. ಈಗಲೂ ಗಾಂಧಿವಾದವನ್ನು ಕಿತ್ತೊಗೆಯುವುದು ಸೂಕ್ತ ಎಂದು ಹೇಳುವ ಮೂಲಕ ಗಾಂಧಿ ಅವರ ಅಪಾರ ಅನುಯಾಯಿಗಳಿಗೆ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಈ ಸುದ್ದಿಯನ್ನೂ ಓದಿ: Chetan Ahimsa : ಸನಾತನ ಧರ್ಮ, ಸಮಾನ ನಾಗರಿಕ ಸಂಹಿತೆ ಸಮರ್ಥನೆ; ಗ್ಯಾರಂಟಿ ವಿರುದ್ಧ ಸಿಡಿಮಿಡಿ; ಬದಲಾದ್ರಾ ನಟ ಚೇತನ್‌?

Exit mobile version