Site icon Vistara News

Gandhi Jayanti: ಗಾಂಧೀಜಿಯ ಅಹಿಂಸೆ ಹೋರಾಟದ ಸಂದೇಶ ಇಡೀ ಪ್ರಪಂಚ ಒಪ್ಪಿದೆ: ಡಿ.ಕೆ.ಶಿವಕುಮಾರ್‌

DCM DK Shivakumar

ಬೆಂಗಳೂರು: ಗಾಂಧೀಜಿ ಅವರ (Gandhi Jayanti) ಬದುಕು, ನುಡಿಮುತ್ತುಗಳು ನಮ್ಮ ಬದುಕಿಗೆ ಆದರ್ಶ. ಅವರ ಅಹಿಂಸೆ ಹೋರಾಟದ ಸಂದೇಶವನ್ನು ಇಡೀ ಪ್ರಪಂಚ ಒಪ್ಪಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡುವಾಗ ನಮ್ಮನ್ನು ಬಂದೂಕಿನ ಗುಂಡಿನ ಮೂಲಕ ಕುಗ್ಗಿಸಬಹುದು ಎಂದು ಬ್ರಿಟಿಷರು ಭಾವಿಸಿದ್ದರು. ಆದರೆ ನಮ್ಮ ನಾಯಕರು ಆ ಗುಂಡಿಗೆ ಎದೆಕೊಟ್ಟು ಪ್ರಾಣತ್ಯಾಗ ಮಾಡಿದ ಪರಿಣಾಮ ಇಂದು ದೇಶದಲ್ಲಿ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಸ್ಥಾಪಿತವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ದೇಶದ ಇಬ್ಬರು ಮಹಾಚೇತನರಾದ ಮಹಾತ್ಮಾ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಸ್ಮರಿಸಿ ಅವರ ದೂರದೃಷ್ಟಿಯನ್ನು ನೆನೆಯುವ ದಿನವಾಗಿದೆ ಎಂದು ಹೇಳಿದರು.

ಈ ದೇಶದಲ್ಲಿ ಸ್ವಾತಂತ್ರ್ಯ ತಂದುಕೊಟ್ಟ ನಮ್ಮ ಪಕ್ಷ 60 ವರ್ಷಗಳ ಕಾಲ ಆಡಳಿತ ಮಾಡಿ ಸಂವಿಧಾನ, ತ್ರಿವರ್ಣ ಧ್ವಜ, ರಾಷ್ಟ್ರಗೀತೆ, ಅನೇಕ ತಿದ್ದುಪಡಿಗಳು, ನೂರಾರು ಕಾನೂನುಗಳನ್ನು ನೀಡಿದೆ. ಆ ಮೂಲಕ ಸರ್ವರಿಗೂ ಸಮಬಾಳು, ಸಮಪಾಲು ತತ್ವದ ಮೂಲಕ ಕಾರ್ಯಕ್ರಮ ರೂಪಿಸುತ್ತಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ | Gandhi Jayanti: ಅಧಿಕಾರ ವಿಕೇಂದ್ರೀಕರಣ ಗಾಂಧೀಜಿ ಕನಸಾಗಿತ್ತು: ಸಿಎಂ ಸಿದ್ದರಾಮಯ್ಯ

ದೇವರಿಗೆ ಯಾವುದೇ ಧರ್ಮವಿಲ್ಲ, “ಸಬ್ಕೋ ಸನ್ಮತಿ ದೇ ಭಗವಾನ್” ಎಂದು ಗಾಂಧೀಜಿ ಹೇಳಿದ್ದಾರೆ. ಗಾಂಧೀಜಿ ಅವರು ಮುನ್ನಡೆಸಿದ ಪಕ್ಷದಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಹೆಗಲ ಮೇಲೆ ಹಾಕಿಕೊಂಡು ಕೆಲಸ ಮಾಡುತ್ತಿರುವ ನಾವು ಹೆಮ್ಮೆಪಡಬೇಕು. ಗಾಂಧಿ ಅವರು ದೇಶದ ಪ್ರಧಾನಿ ಆಗಬಹುದಿತ್ತು. ಆದರೆ, ಅವರು ಮಹಾತ್ಮರಾಗಿ ಉಳಿದು, ತಮ್ಮ ದೂರದೃಷ್ಟಿಯಿಂದ ಪಂಡಿತ್ ಜವಾಹರಲಾಲ್ ನೆಹರೂ ಅವರಿಗೆ ಜವಾಬ್ದಾರಿ ನೀಡಿದರು ಎಂದು ಹೇಳಿದರು.

“ಪಾಪವನ್ನು ದ್ವೇಷಿಸಿ, ಪಾಪಿಯನ್ನು ಪ್ರೀತಿಸಿ” ಎಂಬ ಸಂದೇಶವನ್ನು ಗಾಂಧೀಜಿ ಅವರು ಕೊಟ್ಟಿದ್ದಾರೆ. ನಾನು ಅನೇಕ ಸಂದರ್ಭದಲ್ಲಿ ಗಾಂಧಿ ಅವರ ಮಾತನ್ನು ಹೇಳುತ್ತಿರುತ್ತೇನೆ. “ನಾವು ನಮ್ಮನ್ನು ನಿಯಂತ್ರಿಸಿಕೊಳ್ಳಬೇಕಾದರೆ ಬುದ್ಧಿಯನ್ನು ಪ್ರಯೋಗಿಸಬೇಕು, ನಾವು ಬೇರೆಯವರನ್ನು ನಿಯಂತ್ರಿಸಬೇಕಾದರೆ ಪ್ರೀತಿಯನ್ನು ಪ್ರಯೋಗಿಸಬೇಕು ಎಂದು ತಿಳಿಸಿದರು.

ದೇಶಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನಾವೆಲ್ಲರೂ ಸ್ಮರಿಸಬೇಕು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಗಾಂಧೀಜಿ ಅವರು 18 ಬಾರಿ ಕರ್ನಾಟಕಕ್ಕೆ ಬಂದಿದ್ದಾರೆ. 1924ರಲ್ಲಿ ಅವರು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು ಎಂದು ಹೇಳಿದರು.

ನಂಜನಗೂಡಿನ ಬದನಾಳು ಗ್ರಾಮಕ್ಕೆ ಗಾಂಧಿ ಅವರು ಎರಡು ಬಾರಿ ಭೇಟಿ ನೀಡಿದ್ದರು. ಸುಮಾರು 30-40 ವರ್ಷಗಳಿಂದ ಇಲ್ಲಿನ ಸವರ್ಣೀಯರು ಹಾಗೂ ದಲಿತರ ನಡುವೆ ಬಿರುಕು ಮೂಡಿತ್ತು. ಭಾರತ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಎರಡೂ ಸಮುದಾಯವನ್ನು ಒಂದುಗೂಡಿಸಿ ಎರಡೂ ಕೇರಿಗಳ ನಡುವಣ ರಸ್ತೆಯನ್ನು ಮತ್ತೆ ತೆರೆದು ಅದಕ್ಕೆ ಭಾರತ ಜೋಡೋ ರಸ್ತೆ ಎಂದು ನಾಮಕರಣ ಮಾಡಲಾಯಿತು. ಆ ಮೂಲಕ ಇತಿಹಾಸ ಬರೆಯಲಾಯಿತು. ಇದು ಕಾಂಗ್ರೆಸ್ ಪಕ್ಷದ ಶಕ್ತಿ ಹಾಗೂ ಇತಿಹಾಸ. ಕಾಂಗ್ರೆಸ್ ಪಕ್ಷ ಸದಾ ಹೃದಯಗಳನ್ನು ಬೆಸೆಯುವ ಕೆಲಸ ಮಾಡಿಕೊಂಡು ಬಂದಿವೆ ಎಂದು ತಿಳಿಸಿದರು.

ಪ್ರತಿ ಹಳ್ಳಿಯಲ್ಲಿ ಶಾಲೆ, ಸಹಕಾರ ಸಂಸ್ಥೆ ಇರಬೇಕು ಎಂದು ವಾದ ಮಾಡುತ್ತಿದ್ದೇವೆ. ನಿಜವಾದ ಭಾರತ ಅದರ ಪ್ರಜೆಗಳಲ್ಲಿ ಅಲ್ಲ ಇಲ್ಲಿರುವ 7 ಲಕ್ಷ ಹಳ್ಳಿಗಳಲ್ಲಿ ಅಡಗಿದೆ ಎಂದು ಗಾಂಧಿ ಅವರು ಸಂದೇಶ ನೀಡಿದ್ದರು. ಇಲ್ಲಿರುವ ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತಂದಿದ್ದೀರಿ. ನಿಮ್ಮ ಮುಂದೆ ಬಹಳ ದೊಡ್ಡ ಜವಾಬ್ದಾರಿ ಇದೆ. ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು, ಒಂದಾಗಿದ್ದಾರೆ. ಸರ್ಕಾರ ತೆಗೆದವರ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಈ ಅಪವಿತ್ರ ಮೈತ್ರಿ ಸರಿಯಿಲ್ಲ ಎಂದು ಅನೇಕ ನಾಯಕರು ಆ ಪಕ್ಷ ತೊರೆದು ಕಾಂಗ್ರೆಸ್ ಸೇರಲು ಮುಂದೆ ಬರುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | Raja Marga Column : ಗಾಂಧಿ ಕ್ಲಾಸ್‌ ಹೆಸರು ಬಂದಿದ್ದು ಹೇಗೆ?; ನೀವೆಂದೂ ಕೇಳಿರದ 25 ಸಂಗತಿಗಳು

ಕಾರ್ಯಕರ್ತರ ಭಾವನೆ ಬಗ್ಗೆ ನಮಗೆ ಅರಿವಿದೆ. ನಾವು ನುಡಿದಂತೆ ನಡೆಯಲು ಕೊಟ್ಟ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಆ ಮೂಲಕ ನೀವು ಜನರ ಬಳಿ ಹೋಗಲು, ಪಕ್ಷ ಸಂಘಟನೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಗ್ರಾಮ ಸ್ವರಾಜ್ಯ ಗಾಂಧೀಜಿ ಕೊಟ್ಟ ದೊಡ್ಡ ಕೊಡುಗೆ. ನಮ್ಮ ಪಕ್ಷ ರಾಜೀವ್ ಗಾಂಧಿ ಅವರ ನೇತೃತ್ವದ ಸರ್ಕಾರ ಸಂವಿಧಾನಕ್ಕೆ 73, 74ನೇ ತಿದ್ದುಪಡಿ ನೀಡಿ ಶಕ್ತಿ ನೀಡಿದೆವು. ಜೆ.ಎಚ್ ಪಟೇಲ್ ಅವರ ಕಾಲದಲ್ಲಿ ಪಂಚಾಯಿತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಕೃಷ್ಣ ಅವರ ಕಾಲದಲ್ಲಿ ಪಂಚಾಯಿತಿಗೆ 23 ಇಲಾಖೆಗಳನ್ನು ಸೇರಿಸಿ ಹೆಚ್ಚಿನ ಅನುದಾನ ನೀಡಿ ಶಕ್ತಿ ನೀಡಿದೆವು. ಪರಿಣಾಮ ಇಂದು ಪಂಚಾಯಿತಿಗಳೇ ಸರ್ಕಾರವಾಗಿ ಆಡಳಿತ ನಡೆಸುವಂತೆ ಮಾಡಿದ್ದೇವೆ ಎಂದು ತಿಳಿಸಿದರು.

ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸ್ಥಳೀಯ ಮಟ್ಟದಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಸಿದ್ಧರಾಗಬೇಕು. ಶಾಸಕರಾಗುವ ಮುನ್ನ ಸ್ಥಳೀಯ ಮಟ್ಟದಲ್ಲಿ ನಾಯಕರಾಗಬೇಕು. ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿ, ಸಹಕಾರಿ ಸಂಘದ ನಿರ್ದೇಶಕನಾಗಿದ್ದೆ. ರಾಮಲಿಂಗಾರೆಡ್ಡಿ ಪಾಲಿಕೆ ಸದಸ್ಯರಾಗಿದ್ದರು. ನಮ್ಮ ಕಾರ್ಯಾಧ್ಯಕ್ಷರು ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಬಿ.ಡಿ. ಜತ್ತಿ ಅವರು ಕೂಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು. ನೆಹರೂ ಅವರು ಕೂಡ ಅಲಹಬಾದ್ ಮುನ್ಸಿಪಲ್ ಅದ್ಯಕ್ಷರಾಗಿದ್ದರು. ಕೆಂಗಲ್ ಹನುಮಂತಯ್ಯ ಪಾಲಿಕೆ ಅಧ್ಯಕ್ಷರಾಗಿದ್ದರು. ಮಲ್ಲಿಕಾರ್ಜುನ ಖರ್ಗೆ ಹಾಗೂ ಧರಂ ಸಿಂಗ್ ಅವರು ಕೂಡ ಕಾರ್ಪೊರೇಟರ್‌ಗಳಾಗಿದ್ದರು. ನಿಮ್ಮ ದಿಕ್ಕು, ನಾಯಕತ್ವ ಬೂತ್ ಹಾಗೂ ಪಂಚಾಯಿತಿ ಮಟ್ಟದಲ್ಲಿ ಇರಬೇಕು ಎಂದು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡುತ್ತೇನೆ ಎಂದು ತಿಳಿದರು.

ಇದನ್ನೂ ಓದಿ | ನನ್ನ ದೇಶ ನನ್ನ ದನಿ ಅಂಕಣ: ಉಪ್ಪಿನ ಸತ್ಯಾಗ್ರಹದ ವೈಭವೀಕರಣವೇನೋ ಸರಿ, ಉಪ್ಪಿನ ಮೇಲಿನ ತೆರಿಗೆ ಕಡಿಮೆಯಾಯಿತೇ?

ನಮ್ಮ ಸರ್ಕಾರ ಅಧಿಕಾರ ತಂದಿರುವ ನಿಮಗೆ ಧನ್ಯವಾದಗಳು, ಮುಂದಿನ ದಿನಗಳಲ್ಲೂ ನೀವು ಒಟ್ಟಾಗಿ ತಾಳ್ಮೆಯಿಂದ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.

Exit mobile version