Site icon Vistara News

Gandhi Jayanti: ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧೀಜಿ ಚಿಂತನೆಗಳೇ ಪ್ರೇರಣೆ: ಸಿಎಂ ಸಿದ್ದರಾಮಯ್ಯ

Mahatma Gandhi Seva Award to Garag Kshetriya Seva Sangha

ಬೆಂಗಳೂರು: ಮಹಾತ್ಮ ಗಾಂಧಿ ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ. ಸರ್ಕಾರದ ಜನಪರ ಯೋಜನೆಗಳಿಗೆ ಗಾಂಧೀಜಿವರ ಚಿಂತನೆಗಳೇ ಪ್ರೇರಣೆ. 2014ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಗಾಂಧಿ ಜಯಂತಿಯಂದು ಗಾಂಧಿ ಸೇವಾ ಪ್ರಶಸ್ತಿಯನ್ನು ನೀಡಲು ತೀರ್ಮಾನಿಸಿ, ಗಾಂಧಿಜೀಯವರ ತತ್ವಾದರ್ಶಗಳ ಹಾದಿಯಲ್ಲಿ ನಡೆಯುವ ವ್ಯಕ್ತಿ ಅಥವಾ ಸಂಘ ಸಂಸ್ಥೆಗಳಿಗೆ ಗಾಂಧಿ ಪ್ರಶಸ್ತಿಯನ್ನು ನೀಡಬೇಕೆಂದು ಆದೇಶ ಹೊರಡಿಸಲಾಯಿತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ಗಾಂಧಿ ಜಯಂತಿಯಲ್ಲಿ ಮಹಾತ್ಮಾ ಗಾಂಧಿ ಸೇವಾ ಪ್ರಶಸ್ತಿ 2023ರ ಪ್ರದಾನ ಮಾಡಿ ಮಾತನಾಡಿ, ಗಾಂಧಿ ಪ್ರಶಸ್ತಿಗೆ ಆರ್ಹರಾಗುವವರು ಗಾಂಧಿಜೀಯವರ ತತ್ವಗಳಲ್ಲಿ ನಂಬಿಕೆಯಿಟ್ಟುವವರಾಗಿರಬೇಕು. ಧಾರವಾಡದ ಗರಗ ಕ್ಷೇತ್ರಿಯ ಸೇವಾ ಸಂಘ, ಖಾದಿ ಉತ್ಪನ್ನ ಮತ್ತು ಮಾರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಭಾರತದ ರಾಷ್ಟ್ರಧ್ವಜ ತಯಾರಾಗಿದ್ದಾರೆ. ಇಲ್ಲಿ ತಯಾರಾಗುವ ರಾಷ್ಟ್ರಧ್ವಜವನ್ನು ಇಡೀ ದೇಶಕ್ಕೆ ಸರಬರಾಜು ಮಾಡಲಾಗುತ್ತದೆ. ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಭಾಜನರಾದ ಈ ಸಂಸ್ಥೆಯ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು ಹಾಗೂ ಪ್ರಶಸ್ತಿಯ ಆಯ್ಕೆ ಸಮಿತಿಗೆ ಧನ್ಯವಾದ ಅರ್ಪಿಸಿದರು.

ಇದನ್ನೂ ಓದಿ | Gandhi Jayanti: ಗಾಂಧೀಜಿಯ ಅಹಿಂಸೆ ಹೋರಾಟದ ಸಂದೇಶ ಇಡೀ ಪ್ರಪಂಚ ಒಪ್ಪಿದೆ: ಡಿ.ಕೆ.ಶಿವಕುಮಾರ್‌

ಗಾಂಧೀಜಿ ಸರಳ ಜೀವಿ

ಮಹಾತ್ಮ ಗಾಂಧಿ ಅವರ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ. ವಕೀಲ ವೃತ್ತಿಯಲ್ಲಿದ್ದ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದದಿಂದ ಅವಮಾನಿತರಾದರು. ಆ ದೇಶದಲ್ಲಿ ವರ್ಣಭೇದ ನೀತಿ ವಿರುದ್ದ ಹೋರಾಟ ನಡೆಸಿದರು. ಗೋಪಾಲಕೃಷ್ಣ ಗೋಖಲೆ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಗಾಂಧೀಜಿಯವರ ಹೋರಾಟದ ಹಾದಿಯನ್ನು ನೋಡಿ, ಭಾರತದಲ್ಲಿನ ಬ್ರಿಟಿಷರ ದಾಸ್ಯದಿಂದ ತಪ್ಪಿಸಲು ನೇತೃತ್ವ ವಹಿಸಲು ಕೋರಿದರು. 1915ರಲ್ಲಿ ಗಾಂಧೀಜಿ ಭಾರತಕ್ಕೆ ಬಂದರು. ಭಾರತದ ಸಾಮಾಜಿಕ ವ್ಯವಸ್ಥೆ, ಜನರ ಬದುಕನ್ನು ಅರಿಯಲು ರೈಲಿನಲ್ಲಿ 3ನೇ ದರ್ಜೆಯಲ್ಲಿಯೇ ಪ್ರಯಾಣ ಮಾಡಿ, ಇಡೀ ಭಾರತವನ್ನು ಸುತ್ತಿದ್ದ ಅತ್ಯಂತ ಸರಳ ಜೀವಿ ಗಾಂಧೀಜಿ ಎಂದು ತಿಳಸಿದರು.

ಅಹಿಂಸಾ ಹಾದಿಯಲ್ಲಿ ನಡೆದು ಸ್ವಾತಂತ್ರ್ಯ ಪಡೆದ ಭಾರತ

ಗಾಂಧೀಜಿಯವರ ಮಾತು ಹಾಗೂ ಕೃತಿಯಲ್ಲಿ ವ್ಯತ್ಯಾಸವಿರಲಿಲ್ಲ. ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿ, ಸತ್ಯ ಮತ್ತು ಅಹಿಂಸೆಯ ಮಾರ್ಗವನ್ನು ಅನುಸರಿಸಿದರು. ಅಹಿಂಸಾ ಹಾದಿಯಲ್ಲಿ ನಡೆದು ಸ್ವಾತಂತ್ರ್ಯ ಪಡೆಯಲು ಹೊರಟ ದೇಶವೆಂದರೆ ಭಾರತ. ಗಾಂಧಿಜೀಯವರು ದೊಡ್ಡ ಮಾನವತಾವಾದಿ. ಮನುಷ್ಯ ಮನುಷ್ಯನನ್ನು ಪ್ರೀತಿಸುವ ಸ್ವಭಾವವನ್ನು ಬೆಳೆಸಿಕೊಳ್ಳುವ ಮೂಲಕ ಗಾಂಧೀಜಿಯವರಿಗೆ ನಿಜವಾದ ಗೌರವ ಅರ್ಪಿಸಿದಂತಾಗುತ್ತದೆ. ಅವರು ನಡೆದ ದಾರಿಯಲ್ಲಿ ನಡೆಯುವ ಪ್ರಮಾಣಿಕ ಪ್ರಯತ್ನದಿಂದ ನಾವೆಲ್ಲರೂ ಸಂಕಲ್ಪ ಮಾಡಬೇಕು. ಅವರಿಗೆ ಮಹಾತ್ಮ ಎಂದು ಬಿರುದು ನೀಡಿದವರು ರವೀಂದ್ರನಾಥ ಟ್ಯಾಗೋರ್. ಸುಭಾಷ್ ಚಂದ್ರ ಬೋಸ್ ಅವರು ರಾಷ್ಟ್ರಪಿತ ಎಂದು ಕರೆದರು. ದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಕೊನೆಯವರೆಗೂ ಶ್ರಮಿಸಿದ್ದರು. ಆದರೆ ನಾಥೂರಾಂ ಗೋಡ್ಸೆ ಮತಾಂಧತೆಯಿಂದ ಗಾಂಧೀಜಿ ಅಸುನೀಗಿದರು. ಹೀಗಿದ್ದರೂ ಗೋಡ್ಸೆ ಅವರನ್ನು ಪೂಜಿಸುವವರು ಈ ದೇಶದಲ್ಲಿರುವುದು ವಿಷಾದನೀಯ. ಇಂತಹವರ ಬಗ್ಗೆ ನಾವು ಜಾಗೃತರಾಗಿರಬೇಕು ಎಂದರು.

ಮಹಿಳಾ ಸಬಲೀಕರಣಕ್ಕೆ ಆದ್ಯತೆ

ಭಾರತ ಹಳ್ಳಿಗಳ ದೇಶ. ಹಳ್ಳಿಗಳ ಸ್ವಾವಂಬನೆಯಿಂದ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ. ನಮ್ಮ ದೇಶಕ್ಕೆ ದೊಡ್ಡ ಕೈಗಾರಿಕೆಗಳ ಬದಲು ಗುಡಿ ಕೈಗಾರಿಕೆಗಳು ಬರಬೇಕು. ಗಾಂಧೀಜಿ ಪಂಚಾಯತ್ ರಾಜ್ ವ್ಯವಸ್ಥೆಯಂತೆ ಅಧಿಕಾರ ಹಳ್ಳಿಯಿಂದ ದಿಲ್ಲಿಗೆ ಹೋಗಬೇಕೆ ಹೊರತು, ದಿಲ್ಲಿಯಿಂದ ಹಳ್ಳಿಗೆ ಬರಬಾರದು ಎಂದಿದ್ದರು. ಅಧಿಕಾರ ವಿಕೇಂದ್ರೀಕರಣ, ದೇಶ, ರಾಜ್ಯ, ಜಿಲ್ಲೆ, ಹಳ್ಳಿ ನಾಲ್ಕು ಹಂತದಲ್ಲಿ ಅಧಿಕಾರದ ವಿಕೇಂದ್ರೀಕರಣ, ಜನರ ಪಾಲ್ಗೊಳ್ಳುವಿಕೆಯಿದ ಜನತಂತ್ರದ ವಿಕೇಂದ್ರೀಕರಣ ಸಾಧ್ಯ. ನಮ್ಮ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಗಾಂಧೀಜಿವರ ಚಿಂತನೆಗಳೇ ಪ್ರೇರಣೆ. ಮಹಿಳಾ ಸ್ವಾತಂತ್ರ್ಯ ಹಾಗೂ ಸಬಲೀಕರಣದ ಬಗ್ಗೆ ಅಪಾರವಾದ ಬದ್ಧತೆ ಹೊಂದಿದ್ದರು. ಮಹಿಳೆಯರ ಅಭಿವೃದ್ಧಿಯಿಂದ ನಾಡು, ದೇಶದ ಅಭಿವೃದ್ಧಿ ಸಾಧ್ಯ. ಸರ್ಕಾರ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಿದೆ. ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಅನ್ನಭಾಗ್ಯ ಯೋಜನೆಗೆ ಗಾಂಧಿ ತತ್ವಗಳನ್ನು ಅವಲಂಬಿಸಿವೆ ಎಂದರು.

ಇದನ್ನೂ ಓದಿ | Gandhi Jayanti : ಗಾಂಧಿ, ಶಾಸ್ತ್ರಿ ಆದರ್ಶಗಳೇ ನಮಗೆ ಮಾರ್ಗದರ್ಶಕ ಎಂದ ಸಿದ್ದರಾಮಯ್ಯ

ಭಾರತ ಕಂಡ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ

ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯಾಗಿದ್ದು, ಇಡೀ ದೇಶದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಅವರು ಭಾರತ ಕಂಡ ಪ್ರಾಮಾಣಿಕ ರಾಜಕಾರಣಿ ಲಾಲ್ ಬಹದ್ದೂರ್ ಶಾಸ್ತ್ರಿ. ಸ್ವಾತಂತ್ರ್ಯ ಹೋರಾಟಗಾರರಾಗಿ, ಗಾಂಧಿವಾದಿಯಾಗಿ ಬದುಕಿದವರು ಎಂದರು.

Exit mobile version