ಬೆಂಗಳೂರು: ಇಲ್ಲಿನ ಚಾಮರಾಜಪೇಟೆ ಶಾಸಕರ ಜಮೀರ್ ಅಹಮದ್ ಖಾನ್ ಅವರ ಕಚೇರಿಯಲ್ಲಿ ಅದ್ಧೂರಿ ಗಣೇಶೋತ್ಸವಕ್ಕೆ ಚಾಲನೆ ನೀಡಲಾಗಿದೆ. ಶಾಸಕರ ಕಚೇರಿ ಇರುವ ಕಟ್ಟಡದ ಕೆಳ ಅಂತಸ್ತಿನಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಶಾಸಕರು ಸಂಸ್ಕೃತ ಶ್ಲೋಕ ಪಠಣ ಮಾಡುವ ಮೂಲಕ ಗಮನ ಸೆಳೆದರು.
ಚಾಮರಾಜಪೇಟೆ ಮೈದಾನ ವಿವಾದಕ್ಕೆ ಸಂಬಂಧಿಸಿ ತಮ್ಮ ಮೇಲೆ ಬರಬಹುದಾದ ಕಪ್ಪು ಚುಕ್ಕೆಯನ್ನು ನಿವಾರಿಸಿಕೊಳ್ಳುವುದಕ್ಕೆ ಶಾಸಕ ಜಮೀರ್ ಅವರು ಗಣೇಶೋತ್ಸವ ಆಚರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಮೀರ್ ಅವರು ಮೊದಲಿನಿಂದಲೂ ತಾನು ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನ ಆಚರಣೆಗೂ ರೆಡಿ, ಗಣೇಶೋತ್ಸವ ಆಚರಣೆಗೂ ರೆಡಿ ಎಂದು ಹೇಳಿದ್ದರು.
ಗಣೇಶ ಪ್ರತಿಷ್ಠಾಪನೆಯ ಬಳಿಕ ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಜಮೀರ್ ಅಹಮದ್ ಖಾನ್ ತಾನೇಕೆ ಉತ್ಸವ ಆಚರಿಸುತ್ತಿದ್ದೇನೆ ಎಂದು ವಿವರಿಸಿದರು.
ʻʻಚಾಮರಾಜಪೇಟೆ ಮೈದಾನದ ವಿವಾದ ಎದುರಾದಾಗ ನಾನೇ ಸ್ವಾತಂತ್ರ್ಯ ದಿನಾಚರಣೆ ಮಾಡ್ತೀನಿ ಎಂದು ಹೇಳಿದ್ದೆ. ಆಗ ಗಣೇಶ ಮೂರ್ತಿ ಕೂರಿಸ್ತೀರಾ ಅಂತ ಕೇಳಲಾಯಿತು. ʻನಾನು ಆಮೇಲೆ ನೋಡ್ತೀನಿ ಎಂದಿದ್ದಕ್ಕೆ, ನಾನು ಹಿಂದೂ ವಿರೋಧಿ, ಗಣೇಶ ವಿರೋಧಿ ಎಂಬ ಪಟ್ಟ ಕಟ್ಟಿದ್ರಿ. ನಾನು ಆ ರೀತಿ ಹೇಳಿದ್ರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ನಾನು ಗಣೇಶ ವಿರೋಧಿ ಅಲ್ಲ. ಅದಕ್ಕಾಗಿ ನನ್ನ ಕಚೇರಿಯಲ್ಲೇ ಗಣೇಶ ಪ್ರತಿಷ್ಠಾಪನೆ ಮಾಡಿದ್ದೇನೆʼʼ ಎಂದರು ಹೇಳಿದರು ಜಮೀರ್.
ʻʻಚಾಮರಾಜಪೇಟೆಯ ನಾಗರಿಕರು ಅಣ್ಣ ತಮ್ಮಂದಿರ ಹಾಗೆ ಇದ್ದೇವೆ. ನಾನು ಮೊದಲ ಬಾರಿ ಎಂಎಲ್ಎ ಆದಾಗ 2005ರಲ್ಲಿ ಸಿಟಿ ಮಾರ್ಕೆಟ್‌ನಲ್ಲಿರುವ ಗಣೇಶ ದೇವಾಲಯ ಓಪನ್ ಆಗಿರಲಿಲ್ಲ. ವಾಸ್ತು ಪ್ರಕಾರ ದೇವಸ್ಥಾನ ತೆರೆಯೋಕಾಗಿಲ್ಲ ಅಂತ ಇದೆ ಜನ ಹೇಳಿದ್ದರು. ನಾನು ತೆರೆಯುವ ವ್ಯವಸ್ಥೆ ಮಾಡಿದೆʼʼ ಎಂದು ಜಮೀರ್ ಹೇಳಿಕೊಂಡರು.
ʻʻಜಮೀರ್ ಅಂದ್ರೆ ಚಾಮರಾಜಪೇಟೆ ಮನೆ ಮಗ. ಯಾವತ್ತೂ ಇಲ್ಲಿ ಜಾತಿ ರಾಜಕೀಯ ಮಾಡಿಲ್ಲ ನಾನು. ನನ್ನ ಪ್ರಕಾರ ಎರಡೇ ಜಾತಿ ಇರೋದು. ಒಂದು ಹೆಣ್ಣು ಮತ್ತೊಂದು ಗಂಡು. ಎಂಎಲ್ಎಯಾಗಿ ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗುವ ಜವಾಬ್ದಾರಿ ನನಗೆ ಇದೆ. ಅದನ್ನು ಪಾಲಿಸಿದ್ದೇನೆʼʼ ಎಂದು ವಿಸ್ತಾರ ಜತೆ ಅಭಿಪ್ರಾಯ ಹಂಚಿಕೊಂಡರು ಜಮೀರ್.
ಅಯ್ಯಪ್ಪ ಸ್ವಾಮಿ ದೇವಾಲಯದ ಬಳಿಯೂ
ಈ ನಡುವೆ, ಗಣೇಶ ಸಮಿತಿ ವತಿಯಿಂದ ಇದಾದ ಬಳಿಕ ಸದ್ಯ ಅಯ್ಯಪ್ಪಸ್ವಾಮಿ ದೇವಾಲಯದ ಮುಂದೆ 18 ಅಡಿ ಎತ್ತರದ ಬೃಹತ್ ಗಣಪನ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಅಲ್ಲದೆ 7 ದಿನಗಳ ಕಾಲ ಈ ಜಾಗದಲ್ಲಿ ಗಣಪನ ಪೂಜೆ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನೆರವೇರಲಿದೆ. ನಗರದ ಹಲವು ಸಮಿತಿಗಳು ಸೆ.10ರಂದು ಮೆರವಣಿಗೆಯಲ್ಲಿ ಭಾಗಿಯಾಗಲಿದ್ದು, 60ಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಮೆರವಣಿಗೆಯಲ್ಲಿ ಭಾಗಿಯಾಗಲಿವೆ.
ಇದನ್ನೂ ಓದಿ | ಚಾಮರಾಜಪೇಟೆ ಮೈದಾನದ ಬಳಿ ಗಣೇಶೋತ್ಸವ ಫೈಟ್; ಹಿಂದು ಸಂಘಟನೆ ಜತೆಗೆ ಜಮೀರ್ ಅಹ್ಮದ್ ಗಣೇಶ ಪೂಜೆ