| ಪಾಂಡುರಂಗ ಜಂತ್ಲಿ, ವಿಜಯನಗರ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ದೇಶದೆಲ್ಲೆಡೆ ವಿಘ್ನ ನಿವಾರಕ ಗಣೇಶನನ್ನು(Ganesh chaturthi) ಶ್ರದ್ಧಾ-ಭಕ್ತಿಯಿಂದ ಪೂಜಿಸಲಾಗುತ್ತಿದೆ. ಆದರೆ ಯುನೆಸ್ಕೋ ವಿಶ್ವಪರಂಪರೆ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಪ್ರಸಿದ್ಧ ಹಂಪಿಯಲ್ಲಿರುವ ಎರಡು ಗಣೇಶ ಮೂರ್ತಿಗಳಿಗೆ ಹಬ್ಬದ ಸಮಯದಲ್ಲೂ ಪೂಜೆಯ ಭಾಗ್ಯವಿಲ್ಲ. ಇದಕ್ಕೆ ಮುಖ್ಯಕಾರಣ ಇಲ್ಲಿನ ಮೂರ್ತಿಗಳು ಭಗ್ನವಾಗಿರುವುದು…
ಹೌದು, ದಿನ ಬೆಳಗಾದರೆ ಹಂಪಿಗೆ ಬರುವ ಪ್ರವಾಸಿಗರು ತದೇಕಚಿತ್ತದಿಂದ ಹಂಪಿಯ ಏಕಶಿಲೆ ಕಡಲೆಕಾಳು ಹಾಗೂ ಸಾಸಿವೆಕಾಳು ಗಣೇಶ ವಿಗ್ರಹಗಳನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ವಿಶ್ವಪರಂಪರೆ ತಾಣದಲ್ಲಿರುವ ಈ ಗಣೇಶನ ಮೂರ್ತಿಗಳನ್ನು ಜನರು ಸ್ಮಾರಕಗಳ ರೀತಿ ನೋಡುತ್ತಾರೆ ವಿನಃ ಪೂಜೆ ಮಾಡುವುದು ಕಂಡುಬರುವುದಿಲ್ಲ. ಹಾಗಂತ ಇವುಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರ ಸಂಖ್ಯೆಯಲ್ಲೇನು ಕಡಿಮೆಯಾಗಿಲ್ಲ.
ಹಂಪಿಯ ಈ ಪ್ರಸಿದ್ಧ ಗಣೇಶ ಮೂರ್ತಿಗಳು ಇರುವುದು ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಆಸುಪಾಸಿನಲ್ಲಿ. ಹೇಮಕೂಟದ ಬೆಟ್ಟದ ಕೆಳಭಾಗದಲ್ಲಿರುವ ಸಾಸಿವೆಕಾಳು ಗಣೇಶ 8 ಅಡಿ ಎತ್ತರವಿದೆ. ಸಾಸಿವೆಕಾಳು ಗಣೇಶ ಮೂರ್ತಿಯನ್ನು ಏಕಶಿಲೆಯಲ್ಲಿ ನಿರ್ಮಾಣ ಮಾಡಲಾಗಿದೆ. ಪುರಾಣಗಳ ಪ್ರಕಾರ ಗಣಪ ಮಿತಿಮೀರಿ ತಿಂದಿದ್ದರಿಂದ ತನ್ನ ಹೊಟ್ಟೆ ಒಡೆಯುವಂತಾಯಿತು. ಆ ಸಂದರ್ಭದಲ್ಲಿ ಅದನ್ನು ತಡೆಯಲು ಹೊಟ್ಟೆ ಅಡ್ಡಲಾಗಿ ಸರ್ಪವನ್ನು ಸುತ್ತಿಕೊಂಡನೆಂಬ ಪ್ರತೀತಿಯಿದೆ. ಈ ವಿಗ್ರಹದ ಬಲಗೈ ಹಾಗೂ ಸೊಂಡಿಲನ್ನು ಕತ್ತರಿಸಲಾಗಿರುವ ಆನೆಯ ದಂತ ಮತ್ತು ಅಂಕುಶವನ್ನು ಕಾಣಬಹುದು. ಈ ಮೂರ್ತಿಯನ್ನು ಕ್ರಿ.ಶ.1506ರಲ್ಲಿ ಚಂದ್ರಗಿರಿಯ ವ್ಯಾಪಾರಿಯೊಬ್ಬರು ವಿಜಯನಗರ ಸಾಮ್ರಾಜ್ಯದ ನರಸಿಂಹ 2 ಅವರಿಗಾಗಿ ಕಟ್ಟಿಸಿದರು ಎಂಬ ಮಾಹಿತಿಯಿದೆ.
ಇದನ್ನೂ ಓದಿ | Ganesh Chaturthi | ಅಕ್ಷರಗಳಲ್ಲೂ ಅರಳಿದ ವಿನಾಯಕ, ಈ ಕಲಾವಿದನ ಕೈಚಳಕ ಮನಮೋಹಕ
ಅದೇ ರೀತಿ ಕಡಲೆಕಾಳು ಗಣೇಶನ ಮೂರ್ತಿ ಏಕಶಿಲೆಯಾಗಿದ್ದು, 18 ಅಡಿ ಎತ್ತರವಿದೆ. ನೋಡಲು ಬಲು ಸೊಗಸು ಈ ಗಣೇಶನ ಮೂರ್ತಿ. ವಿಜಯನಗರ ಸಾಮ್ರಾಜ್ಯ ಕಾಲದಲ್ಲಿ ವಿಶೇಷವಾಗಿ ಪೂಜಿಸಲ್ಪಡುತ್ತಿದ್ದ ಹಂಪಿಯ ಈ ಎರಡು ಗಣೇಶನ ಮೂರ್ತಿಗಳು ಇದೀಗ ಇವುಗಳಿಗೆ ಪೂಜೆ ಭಾಗ್ಯವಿಲ್ಲ. ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಕೊಂಪೆಯಾಗಿ ಮಾರ್ಪಾಡಾಯಿತು. ಈ ಸಂದರ್ಭದಲ್ಲಿ ಹಲವು ದೇವಸ್ಥಾನಗಳ ಗರ್ಭಗುಡಿಯಲ್ಲಿರುವ ಮೂರ್ತಿಗಳು ಬಹಮನಿ ಸುಲ್ತಾನರ ದಾಳಿಯಿಂದ ನಾಶವಾದವು. ಆ ಸಂದರ್ಭದಲ್ಲಿ ಈ ಎರಡೂ ಗಣೇಶನ ಏಕಶಿಲಾ ಮೂರ್ತಿಗಳು ಭಗ್ನಗೊಂಡಿವೆ ಎನ್ನಲಾಗಿದೆ. ಪುರಾತತ್ವ ಇಲಾಖೆ ಪೂಜೆಗೆ ಒತ್ತು ನೀಡದೆ ಸಂರಕ್ಷಣೆಗೆ ಹೆಚ್ಚು ಆದ್ಯತೆ ನೀಡಿದ್ದಾರೆ. ಇದರಿಂದಾಗಿ ಹಂಪಿಯ ಗಣೇಶದ್ವಯರಿಗೆ ದರುಶನ ಭಾಗ್ಯವಿದೆ, ಪೂಜೆ ನಡೆಯೋದಿಲ್ಲ.
ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಕಾಲದಲ್ಲಿ ಅತ್ಯಂತ ಶ್ರೀಮಂತವಾಗಿ ಬೆಳೆಯಿತು ಎಂಬುವುದಕ್ಕೆ ಇತಿಹಾಸದಲ್ಲಿ ಉಲ್ಲೇಖವಿದೆ. ಇದೇ ಸಮಸಯದಲ್ಲಿ ವಿಜಯನಗರ ಸಾಮ್ರಾಜ್ಯದ ಹಾದಿ ಬೀದಿಗಳಲ್ಲಿ ಅತ್ಯಂತ ಹೇರಳವಾಗಿ ಮುತ್ತು ರತ್ನಗಳನ್ನು ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ ಈ ಎರಡೂ ಬೃಹತ್ ಮೂರ್ತಿಯಲ್ಲೂ ಮುತ್ತು-ರತ್ನಗಳು ಇರಬಹುದು ಎಂದು ಮೂರ್ತಿಗಳನ್ನು ಭಗ್ನಗೊಳಿಸಿದ್ದರು ಎನ್ನಲಾಗುತ್ತಿದೆ. ಜತೆಗೆ ಹಿಂದು ಸನಾತನ ಧರ್ಮದ ಪ್ರಕಾರ ಚಿಕ್ಕ ಮೂರ್ತಿಯಿಂದ ಹಿಡಿದು ದೊಡ್ಡ ಮೂರ್ತಿವರೆಗೆ ಅಲ್ಪ ಪ್ರಮಾಣದಲ್ಲಿ ಭಗ್ನವಾದರೂ ಪೂಜೆ ಸಲ್ಲಿಕೆ ಮಾಡಬಾರದು ಎಂಬ ನಂಬಿಕೆ ಇದೆ. ಹೀಗಾಗಿ ಅಂದು ಬಹಮನಿ ಸುಲ್ತಾನರ ದಾಳಿಗೆ ಒಳಗಾಗಿ ಭಗ್ನಗೊಂಡಾಗಿನಿಂದ ಇಂದಿನವರೆಗೆ ಒಂದೇ ಒಂದು ಪೂಜೆ ಸಲ್ಲಿಕೆ ಆಗಿಲ್ಲ ಎಂಬುವುದು ಇಲ್ಲಿನ ವಿಶೇಷವಾಗಿದೆ.
ಇದನ್ನೂ ಓದಿ | ನಾನು ಯಾರಿಗೂ ಜೀವ ಬೆದರಿಕೆ ಹಾಕಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟನೆ