Site icon Vistara News

ಈದ್ಗಾ ಮೈದಾನದಲ್ಲೇ ಗಣೇಶೋತ್ಸವ: ಶಾಸಕ ಜಮೀರ್‌ ಖಾನ್‌ಗೆ ಸವಾಲು ಹಾಕಿದ ಮುತಾಲಿಕ್

Edgha maidan

ಬೆಂಗಳೂರು/ಧಾರವಾಡ: ಬೆಂಗಳೂರಿನ ಚಾಮರಾಜ ಪೇಟೆಯ ವಿವಾದಿತ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬಿಬಿಎಂಪಿ ಪ್ರಕಟಿಸಿದ ಬೆನ್ನಿಗೇ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿವೆ. ಇದನ್ನು ನಾಗರಿಕ ವೇದಿಕೆ ಸೇರಿದಂತೆ ಹಿಂದೂ ಸಂಘಟನೆಗಳು ತಮ್ಮ ವಿಜಯ ಎಂದು ಹೇಳಿಕೊಂಡಿದ್ದರೆ, ವಕ್ಫ್‌ ಬೋರ್ಡ್‌ ಇದರ ವಿರುದ್ಧ ಕೋರ್ಟ್‌ ಮೆಟ್ಟಿಲು ಹತ್ತುವುದಾಗಿ ಪ್ರಕಟಿಸಿದೆ. ಇದರ ನಡುವೆಯೇ ಈ ಮೈದಾನದಲ್ಲಿ ಹಬ್ಬ ಆಚರಿಸುವ ವಿವಾದ ತಲೆ ಎತ್ತಿದೆ.

ಜಮೀರ್‌ ಖಾನ್‌

ಧಾರ್ಮಿಕ ಹಬ್ಬಗಳಿಗೆ ಅವಕಾಶವಿಲ್ಲ ಎಂದ ಜಮೀರ್‌
ಈ ಮಧ್ಯೆ ಸೋಮವಾರ ಈದ್ಗಾ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಚಾಮರಾಜಪೇಟೆಯ ಶಾಸಕ ಜಮೀರ್‌ ಅಹಮದ್‌ ಖಾನ್‌ ಅವರು ʻʻಮೈದಾನದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು, ಮುಂದೆ ಗಣರಾಜ್ಯೋತ್ಸವವೂ ನಡೆಯಲಿದೆ. ಅದರ ಸಿದ್ಧತೆಗಾಗಿ ಪರಿಶೀಲನೆ ನಡೆಸಲು ಬಂದಿದ್ದೇನೆ. ಇಲ್ಲಿ ರಾಷ್ಟ್ರೀಯ ಹಬ್ಬ ಮಾಡಬಹುದು. ಆದರೆ, ಯಾವುದೇ ಧಾರ್ಮಿಕ ಹಬ್ಬಗಳಿಗೆ ಅವಕಾಶ ಇಲ್ಲ ಎಂದು ಹೇಳಿದ್ದರು. ಆದರೆ, ಈ ಹಿಂದಿನಂತೆ ವರ್ಷಕ್ಕೆರಡು ಬಾರಿ ಸಾಮೂಹಿಕ ನಮಾಜ್‌ ನಡೆಯುವ ಬಗ್ಗೆ ಅವರು ಉಲ್ಲೇಖಿಸಿಲ್ಲ. ಅವರು ಹಿಂದೂ ಧಾರ್ಮಿಕ ಹಬ್ಬಗಳನ್ನು ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೇ ಆಧಾರದಲ್ಲಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಅವರು ಕಟುವಾದ ಪ್ರತಿಕ್ರಿಯೆ ನೀಡಿದ್ದಾರೆ.

ಮುತಾಲಿಕ್‌

ಮುತಾಲಿಕ್‌ ಹೇಳಿದ್ದೇನು?
ʻʻಶಾಸಕ ಜಮೀರ್ ಅಹ್ಮದ್ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾನಕ್ಕೆ ಅವಕಾಶ ಇಲ್ಲ ಎಂದು ಹೇಳಿರುವುದು ಖಂಡನೀಯ, ಇದನ್ನು ವಿರೋಧಿಸುತ್ತೇನೆ. ಇದು ನಿಮ್ಮ ಆಸ್ತಿನೂ ಅಲ್ಲ, ನಿಮ್ಮ ಪಿತ್ರಾರ್ಜಿತ ಆಸ್ತಿಯೂ ಅಲ್ಲ. ವಕ್ಫ್ ಬೋರ್ಡ್‌ನದ್ದೂ ಅಲ್ಲ, ಮುಸ್ಲಿಮರದ್ದೂ ಅಲ್ಲ, ಇದು ಹಿಂದೂಗಳದ್ದು ಅಲ್ಲ. ಸರ್ಕಾರದ ಜಾಗ ಅದುʼʼ ಎಂದು ಪ್ರಮೋದ್‌ ಮುತಾಲಿಕ್‌ ಧಾರವಾಡದಲ್ಲಿ ಗುಡುಗಿದ್ದಾರೆ.

ʻʻಸರ್ಕಾರಿ ಜಾಗದಲ್ಲಿ ನೀವು ನಮಾಜ್ ಮಾಡುತ್ತಾ ಬಂದಿದ್ದೀರಿ. ವಿಧಿವಿಧಾನದ ಮೂಲಕ ವರ್ಷಕ್ಕೆ ಎರಡು ಬಾರಿ ನಮಾಜ್ ಮಾಡುತ್ತಾ ಬಂದಿದ್ದೀರಿ. ಹಾಗಾದ್ರೆ ಗಣೇಶೋತ್ಸವಕ್ಕೆ ನಿಮ್ಮ ವಿರೋಧ ಯಾಕೆ?ʼʼ ಎಂದು ಪ್ರಶ್ನಿಸಿರುವ ಮುತಾಲಿಕ್‌, ʻʻನೀವು ಕೇವಲ ಮುಸ್ಲಿಂ ವೋಟಿನ ಮೇಲೆ ಗೆದ್ದಿಲ್ಲ. ಮುಸ್ಲಿಂ ಎಂಎಲ್ಎ ಕೂಡಾ ಅಲ್ಲ. ನೀವು ಚಾಮರಾಜಪೇಟೆ ಶಾಸಕ, ನಿಮಗೆ ಹಿಂದೂಗಳು ವೋಟು ಹಾಕಿದ್ದಾರೆ ನೆನೆಪಿಟ್ಟುಕೊಳ್ಳಿ. ಇನ್ನೊಮ್ಮೆ ನಿಮ್ಮಿಂದ ಇಂತಹ ಹೇಳಿಕೆ ಬರಬಾರದುʼʼ ಎಂದು ಎಚ್ಚರಿಕೆ ನೀಡಿದ್ದಾರೆ.

ʻʻನೀವು ನಿಮ್ಮ ಹೇಳಿಕೆಯನ್ನು ವಾಪಸ್‌ ಪಡೆಯಬೇಕು. ಹಿಂದೂಗಳ ಕ್ಷಮೆ ಕೇಳಬೇಕುʼʼ ಎಂದು ಆಗ್ರಹಿಸಿರುವ ಅವರು ʻʻನಾವು ಅದೇ ಮೈದಾನದಲ್ಲಿ ಗಣೇಶೋತ್ಸವ ಆಚರಿಸುತ್ತೇವೆ. ತಾಕತ್ತಿದ್ದರೆ ತಡೆಯಿರಿʼʼ ಎಂದು ಸವಾಲು ಹಾಕಿದ್ದಾರೆ.

ಸೊಕ್ಕು ಮುರಿಯೋಣ ಎಂದ ಮುತಾಲಿಕ್‌
ʻʻಹಿಂದೂಗಳು ಜಮೀರ್ ಗೆ ಮತ ಹಾಕಿದರೆ ಗಣೇಶನ ವಿರುದ್ಧವಾಗಿ ನಡೆದುಕೊಂಡ ಹಾಗೆ. ಅವರ ಸೊಕ್ಕನ್ನು ಮುರಿಯಬೇಕು ಅಂದ್ರೆ ಮುಂಬರುವ ಚುನಾವಣೆಯಲ್ಲಿ ಸೋಲಿಸಬೇಕುʼʼ ಎಂದು ಕೂಡಾ ಮುತಾಲಿಕ್‌ ಹೇಳಿದ್ದಾರೆ.

ಇದನ್ನೂ ಓದಿ | Idga Maidan | ಈದ್ಗಾ ಮೈದಾನದ ಪ್ರಾರ್ಥನಾ ಗೋಡೆ ತೆರವಿಗೆ ಒತ್ತಾಯ, ಉರುಳಿಸುವ ಎಚ್ಚರಿಕೆ

Exit mobile version