Site icon Vistara News

Ganga Kalyan Yojana: ಗಂಗಾ ಕಲ್ಯಾಣ ಬಾಕಿ ಅರ್ಜಿಗಳನ್ನು 2 ತಿಂಗಳಲ್ಲಿ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

CM Siddaramaiah

ಬೆಂಗಳೂರು: ಗಂಗಾ ಕಲ್ಯಾಣ ಯೋಜನೆಯಲ್ಲಿ (Ganga Kalyan Yojana) ಕೊಳವೆ ಬಾವಿ ವಿದ್ಯುದೀಕರಣಕ್ಕೆ 1948 ಅರ್ಜಿಗಳು ಬಾಕಿ ಉಳಿದಿವೆ. ಇನ್ನು ಎರಡು ತಿಂಗಳಲ್ಲಿ ಬಾಕಿ ಅರ್ಜಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಂದುವರೆದ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಸ್ಕಾಂಗಳು ವಿದ್ಯುಚ್ಛಕ್ತಿ ಸಂಪರ್ಕ ಒದಗಿಸುವುದಕ್ಕೆ ಅನಗತ್ಯ ವಿಳಂಬ ಮಾಡಕೂಡದು. ಶುಲ್ಕ ಪಾವತಿಸಿಲ್ಲ ಎಂದು ಬಾಕಿ ಉಳಿಸಿಕೊಳ್ಳಬಾರದು. ಇದಕ್ಕೆ ಟ್ರಾನ್ಸ್‌ಫಾರ್ಮರ್‌ಗಳು ಇಲ್ಲ, ಕಂಬಗಳಿಲ್ಲ ಎಂಬ ನೆಪಗಳನ್ನು ಹೇಳಬಾರದು ಎಂದು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜೆಸ್ಕಾಂ ಮತ್ತು ಹೆಸ್ಕಾಂಗಳಲ್ಲಿ ಬಾಕಿ ಅರ್ಜಿಗಳ ಸಂಖ್ಯೆ ಹೆಚ್ಚಿರುವುದನ್ನು ಪರಿಶೀಲಿಸಿದ ಮುಖ್ಯಮಂತ್ರಿಗಳು ಅಭಿಯಾನ ಕೈಗೆತ್ತಿಕೊಂಡು ವಿದ್ಯುದೀಕರಣ ಕೈಗೊಳ್ಳಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಬೋರ್‌ ವೆಲ್‌ ಕೊರೆಯುವುದು ಹಾಗೂ ವಿದ್ಯುದೀಕರಣದಲ್ಲಿ ಅನಗತ್ಯವಾಗಿ ವಿಳಂಬ ಮಾಡಬಾರದು. ಈ ವಿಳಂಬ ನೀತಿ ಅಪರಾಧ ಎಂದು ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | JDS Protest: ಸಚಿವ ಸಂಪುಟದಿಂದ ಡಿ.ಸುಧಾಕರ್ ವಜಾ ಮಾಡಿ; ಜೆಡಿಎಸ್ ಕಾರ್ಯಕರ್ತರ ಒತ್ತಾಯ

ಜೇಬಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ?

ವಿದ್ಯುತ್ ಉಪಕೇಂದ್ರ ಆರಂಭಿಸಲು ಮತ್ತು ಟ್ರಾನ್ಸ್ ಫಾರ್ಮರ್ ಲೈನ್‌ಗೆ ಭೂಮಿ ಒದಗಿಸುವಂತೆ ಎಷ್ಟು ಅರ್ಜಿಗಳು ಬಂದಿವೆ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಇದಕ್ಕೆ ಅಧಿಕಾರಿಯೊಬ್ಬರ ಉತ್ತರದಿಂದ ಅಸಮಾಧಾನಗೊಂಡ ಸಿಎಂ, ಆ ಅರ್ಜಿಗಳನ್ನು ಜೇಬಿನಲ್ಲಿ ಇಟ್ಕೊಂಡು ಏನ್ ಮಾಡ್ತಾ ಇದೀರ? ಮೊದಲು ಆ ಎಲ್ಲಾ ಅರ್ಜಿಗಳ ಬೇಡಿಕೆ ಪೂರ್ಣಗೊಳಿಸಿ ಎಂದು ಸೂಚಿಸಿದರು.

Exit mobile version