ಶಿವಮೊಗ್ಗ: ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಇರುವ ವಿಚಾರಣಾಧೀನ ಕೈದಿಯೊಬ್ಬನ ಬಳಿ ಗಾಂಜಾ (Ganja in jail) ಪತ್ತೆಯಾಗಿದೆ. ಆತ ತೀವ್ರವಾಗಿ ಅಸ್ವಸ್ಥನಾದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಿ ವಾಪಸ್ ಕರೆತರುವಾಗ ಜೇಬಿನಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.
ಶಾಹೀದ್ ಖುರೇಷಿ ಎಂಬಾತನ ಬಳಿ ಗಾಂಜಾ ಪತ್ತೆಯಾಗಿದೆ. ಶನಿವಾರ (ಡಿಸೆಂಬರ್ ೩) ಬೆಳಗ್ಗೆ ಈತ ಅಸ್ವಸ್ಥಗೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸಂಜೆ ಮರಳಿ ಕಾರಾಗೃಹಕ್ಕೆ ಆಂಬ್ಯುಲೆನ್ಸ್ ಮೂಲಕ ತುಂಗಾ ನಗರ ಠಾಣೆಗೆ ಕರೆತರಲಾಗಿದೆ. ಈ ವೇಳೆ ಆತನ ಜೇಬಿನಲ್ಲಿ ಗಾಂಜಾ ಇರುವುದು ಗೊತ್ತಾಗಿದೆ. ಆದರೆ, ಈ ಗಾಂಜಾ ಆತನಿಗೆ ಎಲ್ಲಿಂದ ಬಂತು? ಯಾರು ಕೊಟ್ಟರು ಎಂಬ ಬಗ್ಗೆ ಇನ್ನೂ ತಿಳಿದುಬಂದಿಲ್ಲ. ಈ ಹಿನ್ನೆಲೆಯಲ್ಲಿ ದೂರು ದಾಖಲಿಸಿ ಮತ್ತೆ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ಪೊಲೀಸರಿಗೆ ಚಾಕು ಇರಿದಿದ್ದ ಶಾಹೀದ್
ಕ್ರಿಮಿನಲ್ ಹಿನ್ನೆಲೆಯುಳ್ಳ ಶಾಹಿದ್ ಖುರೇಷಿಯು ಐದು ತಿಂಗಳ ಹಿಂದೆ ಪೊಲೀಸ್ ಸಿಬ್ಬಂದಿಗೆ ಚಾಕು ಇರಿದಿದ್ದ. ಆರೋಪಿಯನ್ನು ಬಂಧಿಸಲು ಹೋದ ಪೊಲೀಸ್ ಕ್ರೈಮ್ ಸಿಬ್ಬಂದಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಜೂ.21ರಂದು ಶಿವಮೊಗ್ಗದ ಬೈಪಾಸ್ ರಸ್ತೆ ಸಮೀಪದ ಕ್ಲಾರ್ಕ್ ಪೇಟೆಯಲ್ಲಿ ಈ ಘಟನೆ ನಡೆದಿತ್ತು. ಪೊಲೀಸ್ ಪೇದೆ ಗುರುನಾಯಕ್ ಹಾಗೂ ಇನ್ನೊಬ್ಬ ಸಿಬ್ಬಂದಿ ರಮೇಶ್‌ಗೆ ಈತ ಚಾಕು ಇರಿದಿದ್ದ.
ಈ ಹಿನ್ನೆಲೆಯಲ್ಲಿ ಅದೇ ದಿನ ಸಂಜೆ ಪೊಲೀಸರು ಮತ್ತೆ ಬಂಧಿಸಲು ಹೋದಾಗಲೂ ಶಾಹೀದ್ ಹಲ್ಲೆಗೆ ಯತ್ನ ಮಾಡಿದ್ದ. ವಿದ್ಯಾನಗರ ಸಮೀಪದ ಮಹಾವೀರ ಗೋಶಾಲೆ ಬಳಿ ತಪ್ಪಿಸಿಕೊಂಡು ಓಡುತ್ತಿದ್ದಾಗ ಶಿವಮೊಗ್ಗದ ಕೋಟೆ ಠಾಣೆಯ ಇನ್ಸ್‌ಪೆಕ್ಟರ್ ಚಂದ್ರಶೇಖರ್ ಅವರು ಶಾಹೀದ್ ಖುರೇಶಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದರು. ಶಾಹೀದ್ ಬಂಧನಕ್ಕಾಗಿ ಅಂದಿನ ಎಸ್‌ಪಿ ಲಕ್ಷ್ಮೀಪ್ರಸಾದ್ ಅವರು ಶಿವಮೊಗ್ಗ ಸಿಟಿ ಡಿವೈಎಸ್ಪಿ ಬಾಲರಾಜ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದರು.
ಇದನ್ನೂ ಓದಿ | Accident Case | ನ್ಯಾಮತಿಯಲ್ಲಿ ಟ್ರ್ಯಾಕ್ಟರ್‌ಗೆ ಹಿಂಬದಿಯಿಂದ ಗುದ್ದಿದ ಬಸ್; ಸವಾರ ಸ್ಥಳದಲ್ಲೇ ಸಾವು