ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭ ಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳದ ಶ್ರೀ ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವ (Gavi Mutt Rathotsava) ಭಾನುವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿತು. ನಾಡಿನ ಮೂಲೆ ಮೂಲೆಯಿಂದ ಬಂದಿದ್ದ ಲಕ್ಷಾಂತರ ಭಕ್ತರ ಜಯಘೋಷ, ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ಸಂಪನ್ನಗೊಂಡಿತು.
ರಾಜ್ಯದ ಸುಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ಕೊಪ್ಪಳದ ಶ್ರೀ ಗವಿಮಠದ ಜಾತ್ರೆ ತನ್ನದೇ ವಿಶೇಷತೆ ಮೂಲಕ ವರ್ಷದಿಂದ ವರ್ಷಕ್ಕೆ ಭಕ್ತರನ್ನು ಸೆಳೆಯುತ್ತಿದೆ. ಕಳೆದ ಎರಡು ವರ್ಷದಿಂದ ಕೊರೊನಾ ಭೀತಿಯಿಂದ ಜಾತ್ರೆ ಒಂದಿಷ್ಟು ಕಳೆಗುಂದಿತ್ತು. ಆದರೆ, ಈ ಬಾರಿ ಅಜ್ಜನ ಜಾತ್ರೆ ಅದ್ಧೂರಿಯಾಗಿ ನಡೆಯಬೇಕು ಎಂಬ ಭಕ್ತರ ಆಶಯದಂತೆಯೇ ರಥೋತ್ಸವ ನೆರವೇರಿತು.
ಭಾನುವಾರ ಸಂಜೆ ಸುಮಾರು ೫.೩೦ಕ್ಕೆ ಈಶ ಫೌಂಡೇಷನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರು ಧ್ವಜಾರೋಹಣ ಮಾಡುವ ಮೂಲಕ ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಮಹಾರಥ ಸಾಗುತ್ತಿದ್ದಂತೆ ಭಕ್ತರು ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಊರ ಹೊರಗೊಂದು ಸೂರು, ಅಲ್ಲಿ ಸಾಹಿತ್ಯದ ಕಂಪು ಜೋರು: ಸಾಹಿತ್ಯ ಜಾತ್ರೆಯ 13 ವಿಶೇಷತೆಗಳಿವು
ಗವಿಮಠದ ಆವರಣ, ಬೆಟ್ಟ ಸೇರಿದಂತೆ ಎಲ್ಲಿ ನೋಡಿದರೂ ಭಕ್ತ ಸಾಗರವೇ ರಥೋತ್ಸವಕ್ಕೆ ಹರಿದು ಬಂದಿತ್ತು. ಜಯ ಗವಿಸಿದ್ದೇಶ ಎಂಬ ಭಕ್ತರ ಜಯಘೋಷ ಮುಗಿಲುಮುಟ್ಟಿತ್ತು. ಮಹಾರಥೋತ್ಸವಕ್ಕೆ ಚಾಲನೆ ನೀಡಿದ ಈಶ ಫೌಂಡೇಷನ್‌ನ ಸ್ಥಾಪಕರಾದ ಸದ್ಗುರು ಅವರು ನೆರೆದಿದ್ದ ಭಕ್ತ ಸಮೂಹವನ್ನು ಕಂಡು ಇದೊಂದು ಅದ್ಭುತ ಅನುಭವ ಎಂದು ಬಣ್ಣಿಸಿದರು.
ಗವಿಸಿದ್ದೇಶ ಇದ್ದಾರೆ ಎಂಬುದಕ್ಕೆ ಇಲ್ಲಿ ಸೇರಿರುವ ಅಸಂಖ್ಯಾತ ಜನಸಂಖ್ಯೆ ಸಾಕ್ಷಿಯಂತಿದೆ. ಇದು ಈ ದೇಶದ ಸಂಸ್ಕೃತಿ ಮತ್ತು ನಾಗರಿಕತೆಯನ್ನು ಪ್ರತಿಬಿಂಬಿಸುತ್ತದೆ. ಇಷ್ಟೊಂದು ಜನರನ್ನು ಸಾಮಾನ್ಯರು ನಿರ್ವಹಣೆ ಮಾಡಲು ಸಾಧ್ಯವಿಲ್ಲ. ದೈವ, ಭಕ್ತಿಯೊಂದೇ ಮಾತ್ರ ಇದನ್ನು ನಿರ್ವಹಣೆ ಮಾಡಲು ಸಾಧ್ಯ ಎಂದರು.
ಮಹಾರಥೋತ್ಸವಕ್ಕೂ ಮುನ್ನ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಇತ್ತೀಚೆಗೆ ದೇಹಾಂತ್ಯಗೊಳಿಸಿದ ನಡೆದಾಡುವ ದೇವರೆಂದು ಕರೆಸಿಕೊಳ್ಳುತ್ತಿದ್ದ ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮಿಗಳನ್ನು ಸ್ಮರಿಸಿಕೊಂಡರು. ಮಹಾರಥೋತ್ಸವಕ್ಕೆ ಆಗಮಿಸಿದ್ದ ಲಕ್ಷಾಂತರ ಜನರು ಒಂದು ನಿಮಿಷ ಮೌನಾಚರಣೆ ಮಾಡಿ ಶ್ರೀಗಳ ಆತ್ಮಕ್ಕೆ ಶಾಂತಿ ಕೋರೋಣ ಎಂದು ಗವಿಶ್ರೀಗಳು ಹೇಳುತ್ತಿದ್ದಂತೆ, ಇಡೀ ಭಕ್ತಸಮೂಹ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಿದ್ದೇಶ್ವರ ಸ್ವಾಮಿಗಳ ಆತ್ಮಕ್ಕೆ ಶಾಂತಿ ಕೋರಿದರು.
ನಾಡಿನ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತರ ಭಕ್ತಿಯ ನಡುವೆ ಅಲ್ಲಲ್ಲಿ ಪುನೀತ್ ಭಾವಚಿತ್ರ ಹಿಡಿದು ಅವರ ಅಭಿಮಾನಿಗಳು ಅಭಿಮಾನ ವ್ಯಕ್ತಪಡಿಸಿದ್ದು ಕಂಡು ಬಂದಿತು. ಷಟ್‌ಸ್ಥಲ ಧ್ವಜಾರೋಹಣಕ್ಕೂ ಮೊದಲು ನೆರೆದಿದ್ದ ಜನರು ಒಂದೆರಡು ಹೆಜ್ಜೆ ರಥ ಎಳೆಯುವ ಮೂಲಕ ಕೊಂಚ ಎಡವಟ್ಟು ಮಾಡಿದರು. ಇದನ್ನು ಹೊರತುಪಡಿಸಿ, ಗವಿಮಠದ ಮಹಾರಥೋತ್ಸವ ಜರುಗುವ ಮೂಲಕ ಜಾತ್ರೆಗೆ ಅಧಿಕೃತ ಚಾಲನೆ ದೊರತಿದ್ದು, ಮೂರು ದಿನಗಳ ಕಾಲ ಅದ್ಧೂರಿ ಕಾರ್ಯಕ್ರಮಗಳು ನಡೆಯಲಿವೆ.
ಇದನ್ನೂ ಓದಿ | ಕನ್ನಡ ಸಾಹಿತ್ಯ ಸಮ್ಮೇಳನ | ಮಾತೃಭಾಷೆ ಶಿಕ್ಷಣಕ್ಕೆ ಬೇಕಿದೆ ಸಾಂವಿಧಾನಿಕ ರಕ್ಷಣೆ: ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಸೆ