Site icon Vistara News

Gelatin Sticks : ಕಟ್ಟಡ ಕಾಮಗಾರಿಯಲ್ಲಿ ಜಿಲೆಟಿನ್‌ ಸ್ಫೋಟ; ಮೂವರು ಕಾರ್ಮಿಕರು ಗಂಭೀರ

gelatin sticks blast

ಬೆಂಗಳೂರು: ಕಟ್ಟಡ ಕಾಮಗಾರಿ (Construction work) ವೇಳೆ ಜಿಲೆಟಿನ್ ಸ್ಫೋಟಗೊಂಡು (gelatin sticks blast) ಇಬ್ಬರು ಕಾರ್ಮಿಕರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ಕಳೆದ ಜುಲೈ 7ರ ರಾತ್ರಿ 11:30ರ ಸುಮಾರಿಗೆ ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ. ಮೂವರು ಕೂಲಿ ಕಾರ್ಮಿಕರಿಗೆ ಗಾಯವಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಶ್ರೀನಿವಾಸ್, ಮಣಿಕಂಠ, ಶಶಿಕುಮಾರ್ ಎಂಬುವವರು ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ವೈಟ್‌ ಫೀಲ್ಡ್‌ನ ವೈದೇಹಿ ಆಸ್ಪತ್ರೆಯ ಸಮೀಪ ಕಶ್‌ಮನ್‌ ಆ್ಯಂಡ್‌ ವೇಕ್‌ಫೀಲ್ಡ್‌ (cushman and wakefield) ಪ್ರಾಜೆಕ್ಟ್‌ನ ವಿಕ್ರಮ್ ಮಾರ್ಲಾ ಅವರಿಗೆ ಸೇರಿದ ಜಮೀನಿನಲ್ಲಿ ಇನ್ಫೋ ಪ್ರೋ ಸಲ್ಯೂಶನ್ ಕಂಪನಿಯಿಂದ ಕೆಲಸ ಮಾಡಿಸಲಾಗುತ್ತಿದೆ. ಇಲ್ಲೊಂದು ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ನಿರ್ಮಾಣ ವೇಳೆ ಬೃಹತ್ ಕಲ್ಲು ಬಂಡೆ ಸಿಕ್ಕಿದ್ದು ಅದನ್ನು ಒಡೆಯಲು ಅಕ್ರಮವಾಗಿ ಜಿಲೆಟಿನ್ ಬಳಕೆ ಮಾಡಲಾಗಿದೆ. ಕುಶಾಲ್ ಅರ್ಥ್ ಮೂವರ್ಸ್ ಪ್ರಾಜೆಕ್ಟ್ ಕೆಲಸಗಾರರು ಜಿಲೆಟಿನ್ ಬಳಸಿ ಕಲ್ಲು ಸ್ಫೋಟಿಸುವಾಗ ದುರ್ಘಟನೆ ನಡೆದಿದೆ. ಜಿಲೆಟಿನ್ ಸ್ಫೋಟಕದಿಂದ ಅಲ್ಲೇ ಇದ್ದ ಮೂವರು ಕಾರ್ಮಿಕರಿಗೆ ಗಂಭೀರ ಗಾಯವಾಗಿದೆ.

ಬಿಲ್‌ ಪಾವತಿಸಲು ಪರದಾಟ

ಇಬ್ಬರು ಕೂಲಿ ಕಾರ್ಮಿಕರ ದೇಹದ ಬಹುಪಾಲು ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು ಬಿಲ್ ಪಾವತಿಸಲು ಪರದಾಡುವಂತಾಗಿದೆ. ದಿಕ್ಕು ಕಾಣದೆ ಕಂಗಲಾಗಿರುವ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ.

ಗಂಭೀರ ಗಾಯಗೊಂಡಿರುವ ಕಾರ್ಮಿಕರು, ಸ್ಥಳ ಪರಿಶೀಲಿಸಿದ ಪೊಲೀಸರು

ಇದನ್ನೂ ಓದಿ: Bomb threat : ಮಲಗಲು ಬಿಡದ್ದಕ್ಕೆ ಮಸೀದಿಗೆ ಹುಸಿ ಬಾಂಬ್‌ ಇಟ್ಟ

ನಗರ ಪ್ರದೇಶದೊಳಗೆ ಜಿಲಿಟಿನ್‌ ಸ್ಫೋಟಕ್ಕಿಲ್ಲ ಅವಕಾಶ

ನಗರ ಪ್ರದೇಶದೊಳಗೆ ಜಿಲಿಟಿನ್ ಸ್ಫೋಟಕ್ಕೆ ಅವಕಾಶವಿಲ್ಲ. ಕಟ್ಟಡ ನಿರ್ಮಾಣಕ್ಕೆ ಅಡಿಪಾಯ ಹಾಕುವಾಗ ಬೃಹತ್ ಕಲ್ಲುಗಳು ಬಂದಲ್ಲಿ, ಕೆಮಿಕಲ್ ಬ್ಲಾಸ್ಟ್ ಅಥವಾ ಡೈಮಂಡ್ ಕಟಿಂಗ್ ಮಾಡಲು ಅವಕಾಶ ಇದೆ. ಜಿಲೆಟಿನ್ ಬಳಕೆಗೆ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ನಗರ ಪ್ರದೇಶದೊಳಗೆ ಜಿಲೆಟಿನ್ ಬಳಕೆಗೆ ಅವಕಾಶವೇ ಇಲ್ಲ. ಆದರೂ ವೈಟ್ ಫೀಲ್ಡ್‌ನಲ್ಲಿ ಅಕ್ರಮವಾಗಿ ಜಿಲಿಟಿನ್ ಬಳಕೆ ‌ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಎಫ್‌ಐಆರ್‌ ದಾಖಲು

ಗಾಯಾಳು ಶ್ರೀನಿವಾಸ್ ಪತ್ನಿ ಕಲ್ಯಾಣಿ ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇವರ ದೂರಿನಡಿ ಸ್ಫೋಟಕ ವಸ್ತು ಕಾಯ್ದೆ (Explosive of Substances Act), SC & ST ಪ್ರಿವೆನ್ಷನ್ ಆಫ್‌ ಅಟ್ರಾಸಿಟಿ ಆಕ್ಟ್, ಐಪಿಸಿ ಸೆಕ್ಷನ್ 34,201,286,338 ಅಡಿ ಎಫ್‌ಐಆರ್‌ ದಾಖಲಾಗಿದೆ. ಕರ್ಮಷಿಯಲ್ ಕಟ್ಟಡ ನಿರ್ಮಾಣಕ್ಕೆ ಜಿಲೆಟಿನ್ ಬಳಕೆ ಮಾಡಿದ ಹಿನ್ನೆಲೆ ಕುಶಾಲ್ ಅರ್ಥ ಮೂವರ್ಸ್‌ನ ಮಂಜುನಾಥ್ ರೆಡ್ಡಿ, ಕುಶಾಲ್ ರೆಡ್ಡಿ, ಪ್ರಭು, ಲೋಕೇಶ್, ವಿಕ್ರಮ್ ಮರ್ಲ, ಅಶೋಕ್ ಶೆಟ್ಟಿ ಹಾಗೂ ಸಾಕೇತ್ ವಿರುದ್ಧ ದೂರು ದಾಖಲಾಗಿದೆ.

ರಸ್ತೆ ಅಪಘಾತವೆಂದು ಆಸ್ಪತ್ರೆಗೆ ದಾಖಲಿಸಿ ಪರಾರಿ

ಅಕ್ರಮವಾಗಿ ಕಟ್ಟಡ ಕಾಮಗಾರಿಯಲ್ಲಿ ತಡರಾತ್ರಿ ಬಂಡೆ ಸ್ಫೋಟಿಸಿದ ಅವಘಡಕ್ಕೆ ಕಾರಣರಾದ ಆರೋಪಿಗಳು, ಕೃತ್ಯದ ಬಳಿಕ ಗಾಯಾಳು ಕುಟುಂಬಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಮಾತ್ರವಲ್ಲದೆ ಗಾಯಾಳನ್ನು ಆಸ್ಪತ್ರೆಗೆ ದಾಖಲಿಸುವಾಗ ರಸ್ತೆ ಅಪಘಾತದಿಂದ ಹೀಗಾಗಿದೆ ಎಂದಿದ್ದಾರೆ. ಆಸ್ಪತ್ರೆಗೆ ಗಾಯಾಳಾನ್ನು ದಾಖಲಿಸಿ ಅಲ್ಲಿಂದ ಪರಾರಿ ಆಗಿದ್ದಾರೆ. ವಿಷಯ ತಿಳಿದ ಕುಟುಂಬಸ್ಥರು ಕೆಲಸ ಮಾಡುವ ಜಾಗದಲ್ಲಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಮಾಲೀಕರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version