ಬೆಂಗಳೂರು: ʻʻನಾವು ಈಗಿನಿಂದಲೇ ಲೋಕಸಭಾ ಚುನಾವಣೆಗೆ (Lokasabha Election) ಸಜ್ಜಾಗಬೇಕಾಗಿದೆ. ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಕ್ಷೇತ್ರಗಳಲ್ಲಿ ಜನಪರವಾಗಿ ಕೆಲಸ ಮಾಡಿʼʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಕಾಂಗ್ರೆಸ್ ಶಾಸಕರಿಗೆ ಸೂಚನೆ ನೀಡಿದರು. ಅವರು ಬುಧವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ (CLP Meeting) ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಶಾಸಕರಿಗೆ ಸಿದ್ದರಾಮಯ್ಯ ನೀಡಿದ ಸೂಚನೆಗಳು
- ರಾಜ್ಯದ ಜನತೆ ಅಪಾರ ನಿರೀಕ್ಷೆಗಳ ಜತೆಗೆ ನಮಗೆ ಅಪಾರ ಬಹುಮತದ ಮೂಲಕ ಜವಾಬ್ದಾರಿ ವಹಿಸಿದ್ದಾರೆ. 5 ವರ್ಷಗಳ ಕಾಲ ಅಭಿವೃದ್ಧಿ ಕಡೆಗೆ ಗಮನ ಹರಿಸಿ. ನಿಮ್ಮ ಕ್ಷೇತ್ರಗಳ ಜನರ ನಿರೀಕ್ಷೆ ಈಡೇರಿಸಿ.
- ವಿಧಾನಸಭೆ ಅಧಿವೇಶನದಲ್ಲಿ ಕಡ್ಡಾಯವಾಗಿ ಹೆಚ್ಚು ಕ್ರಿಯಾಶೀಲತೆಯಿಂದ ಭಾಗವಹಿಸಿ.
- ಬಿಜೆಪಿಯವರು ಮಾಡುವ ಸುಳ್ಳು ಅಪಾದನೆಗಳನ್ನು ಯಶಸ್ವಿಯಾಗಿ ಎದುರಿಸಲು ಎಲ್ಲಾ ಶಾಸಕರು ಕಡ್ಡಾಯವಾಗಿ ಅಧಿವೇಶನದಲ್ಲಿ ಭಾಗವಹಿಸಬೇಕು.
- ಕೇಂದ್ರದ ತಾರತಮ್ಯ ನೀತಿಯಿಂದ ರಾಜ್ಯದ ಜನತೆಗೆ ಅಪಾರ ನಷ್ಟವಾಗಿದೆ. ಹಣಕಾಸು ಆಯೋಗದಲ್ಲೂ ನಮಗೆ ಅನ್ಯಾಯವಾಗಿದೆ. ತೆರಿಗೆ ಪಾಲಿನಲ್ಲೂ ಅನ್ಯಾಯವಾಗಿದೆ.
- ನಮ್ಮ ನಾಡಿನ ಜನತೆ ಕಟ್ಡುವ ತೆರಿಗೆಯಲ್ಲಿ ನಮ್ಮ ಪಾಲು ಸಮರ್ಪಕವಾಗಿ ಬರುತ್ತಿಲ್ಲ. ನಾವು ಕ್ರಿಯಾಶೀಲ ಒತ್ತಡ ಮತ್ತು ಬೇಡಿಕೆ ಮೂಲಕ ನಮ್ಮ ಪಾಲನ್ನು ನಾವು ಪಡೆದುಕೊಳ್ಳಬೇಕು.
- ಕೇಂದ್ರದಿಂದ ರಾಜ್ಯಕ್ಕೆ, ನಾಡಿನ ಜನತೆಗೆ ಅನ್ಯಾಯ ಆಗುತ್ತಿದ್ದರೂ ರಾಜ್ಯದಿಂದ ಆಯ್ಕೆ ಆದ ಸಂಸದರು ನಾಲ್ಕೂವರೆ ವರ್ಷಗಳ ಕಾಲ ನಾಡಿನ ಜನತೆಯ ಪರವಾಗಿ ಬಾಯಿ ಬಿಡಲಿಲ್ಲ. ಇದನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಕೋವಿಡ್, ಪ್ರವಾಹದ ಸಂದರ್ಭದಲ್ಲೂ ಈ ಸಂಸದರು ರಾಜ್ಯದ ಪರವಾಗಿ ಕೇಂದ್ರದ ಮುಂದೆ ಬಾಯಿ ಬಿಡಲಿಲ್ಲ. ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಇವರಿಗೆ ಸರಿಯಾದ ಉತ್ತರ ಕೊಡಬೇಕು. ಕೇಂದ್ರ ಸರ್ಕಾರದ ತಾರತಮ್ಯ ಧೋರಣೆ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಿ. ಕೇಂದ್ರದಿಂದ ರಾಜ್ಯದ ಪಾಲು ಪಡೆಯಲು ಒತ್ತಡ ಹಾಕಬೇಕು.
- ಹೀಗಾಗಿ ಬರಲಿರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಜನಪರವಾಗಿ ಕೆಲಸ ಮಾಡಿ.
ಖಾದರ್ ಅವರನ್ನು ಹಾಡಿ ಹೊಗಳಿದ ಸಿದ್ದರಾಮಯ್ಯ
ಕರ್ನಾಟಕದ 15ನೇ ವಿಧಾನಸಭೆಯ ಕೊನೆಯ ದಿನವಾದ ಇಂದು 16ನೇ ವಿಧಾನಸಭೆಯ ಸಭಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ಯು.ಟಿ.ಖಾದರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ (Congress legislature party) ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.
ಯು.ಟಿ. ಖಾದರ್ ಅವರು ಪಕ್ಷ ಮತ್ತು ಜನರ ಬಗ್ಗೆ ಹೊಂದಿರುವ ಬದ್ಧತೆ ಅಸಾಧಾರಣವಾದದ್ದು ಎಂದು ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆ ಸದಸ್ಯರಿಗೆ ಮಾತ್ರ ಆಹ್ವಾನ
ಕಾಂಗ್ರೆಸ್ ಶಾಸಕಾಂಗ ಸಭೆಗೆ ಈ ಬಾರಿ ಕೇವಲ ನೂತನವಾಗಿ ಆಯ್ಕೆಯಾದ ವಿಧಾನಸಭಾ ಶಾಸಕರನ್ನ ಆಹ್ವಾನಿಸಲಾಗಿದೆ. ವಿಧಾನ ಪರಿಷತ್ ಸದಸ್ಯರಿಗೆ ಇಂದಿನ ಸಭೆಗೆ ಆಹ್ವಾನ ಇರಲಿಲ್ಲ. ಸ್ಪೀಕರ್ ಚುನಾವಣೆ ಇರುವ ಹಿನ್ನೆಲೆಯಲ್ಲಿ ಮಾತ್ರ ಶಾಸಕಾಂಗ ಪಕ್ಷ ಸಭೆ ನಡೆಯಿತು.
ಇದನ್ನೂ ಓದಿ: Assembly Session: ಸ್ಪೀಕರ್ ಆಗಿದ್ದವರು ಸೋಲ್ತಾರೆ ಎನ್ನೋದು ಮೂಢನಂಬಿಕೆ: ನಂಬೋಲ್ಲ ಎಂದ ಯು.ಟಿ. ಖಾದರ್