ರಾಯಚೂರು: ಇಲ್ಲಿನ ಸಿಂಧನೂರು ಪಟ್ಟಣದ ಆದರ್ಶ ಕಾಲೋನಿಯಲ್ಲಿ ಸೂರ್ಯ ಗಿಫ್ಟ್ ಸೆಂಟರ್ನಲ್ಲಿ (Gift Center) ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಮಾರಾಮಾರಿಯೇ ನಡೆದುಹೋಗಿದೆ. ಗುರುವಾರ ಅಂಗಡಿಯಿಂದ ಆಟಿಕೆಯೊಂದನ್ನು ಶಿವಕುಮಾರ್ ಎಂಬಾತ ಖರೀದಿಸಿದ್ದರು. ಆದರೆ, ಮತ್ತೆ ಆಟಿಕೆ ಹಿಂಪಡೆದು, ಹಣ ವಾಪಸ್ ಮಾಡುವಂತೆ ತಾಕೀತು ಮಾಡಿದ್ದಾರೆ.
ಈ ವೇಳೆ ಸೆಂಟರ್ ಸಿಬ್ಬಂದಿ ಬಾಲಕೃಷ್ಣ ರಿಫಂಡ್ ಆಯ್ಕೆ ಇಲ್ಲ ಬದಲಾಗಿ ಬೇರೆ ವಸ್ತು ಖರೀದಿಸುವಂತೆ ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಬಳಿಕ ಶಿವಕುಮಾರ್ ತನ್ನ ಸ್ನೇಹಿತರನ್ನು ಕರೆಸಿ ಗಲಾಟೆ ಮಾಡಿದ್ದಾರೆ. ಮಾತಿನಲ್ಲಿ ಶುರುವಾದ ಗಲಾಟೆ ಬಳಿಕ ಹೊಡಿಬಡಿ ಹಂತಕ್ಕೆ ತಲುಪಿದೆ.
ಗ್ರಾಹಕ ಶಿವಕುಮಾರ್ ಹಾಗೂ ಸ್ನೇಹಿತರು ಗಿಫ್ಟ್ ಸೆಂಟರ್ ಗಾಜು ಒಡೆದು ಪುಂಡಾಟಿಕೆ ಮಾಡಿದ್ದಾರೆಂದು ಸಿಬ್ಬಂದಿ ಆರೋಪಿಸಿದ್ದಾರೆ. ಬಾಲಕೃಷ್ಣ ಮೇಲೆ ಮನಬಂದಂತೆ ಶಿವಕುಮಾರ್ ಹಲ್ಲೆ ನಡೆಸಿದ್ದು, ಅಂಗಡಿಯ ಇತರೆ ಸಿಬ್ಬಂದಿ ಶ್ಯಾಮ್ ಪ್ರಸಾದ್, ಹರಿತಾ, ಮಹಾಲಕ್ಷ್ಮೀ ಸೇರಿ ಕೆಲವರ ಮೇಲೆ ಹಲ್ಲೆ ನಡೆಸಿದ್ದಾರೆ.
ಗ್ರಾಹಕನ ದಾಂಧಲೆ ಸಂಬಂಧ ಬಾಲಕೃಷ್ಣ ಸಿಂಧನೂರು ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಹಲ್ಲೆ ಮಾಡಿದ ಆರೋಪದಡಿ ಶಿವಕುಮಾರ್ ಹಾಗೂ ಮಹಾಂತೇಶ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಸಿಂಧನೂರು ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.
ಇದನ್ನೂ ಓದಿ | Shraddha Murder Case | ಪೊಲೀಸರು ಸಹಕಾರ ನೀಡಿದ್ದರೆ ಮಗಳು ಬದುಕುತ್ತಿದ್ದಳು, ಶ್ರದ್ಧಾ ತಂದೆ ಗಂಭೀರ ಆರೋಪ