Site icon Vistara News

Gift to weavers : ನೇಕಾರರಿಗೆ ಸರ್ಕಾರದಿಂದ ದಸರಾ ಗಿಫ್ಟ್‌; 250 ಯುನಿಟ್‌ ವಿದ್ಯುತ್‌ ಫ್ರೀ

Powerloom 250 uint power

ವಿಜಯಪುರ/ಬೆಂಗಳೂರು: ರಾಜ್ಯ ಸರ್ಕಾರ (Karnataka Government) ನೇಕಾರರಿಗೆ ದಸರಾ ಗಿಫ್ಟ್‌ (Gift to weavers) ನೀಡಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ನೇಕಾರರಿಗೆ ವರದಾನವೆಂಬಂತೆ, ರಾಜ್ಯ ಸರ್ಕಾರ 10 ಎಚ್‌.ಪಿ. ಒಳಗಿನ ವಿದ್ಯುತ್‌ ಮಗ್ಗಗಳಿಗೆ 250 ಯುನಿಟ್‌ವರೆಗೂ ಉಚಿತ ವಿದ್ಯುತ್‌ (Free Electricity upto 250 units) ನೀಡುವಂತೆ ಆದೇಶ ಹೊರಡಿಸಿದೆ.

10 ಎಚ್​ಪಿವರೆಗಿನ ಮಗ್ಗ ಮತ್ತು ಮಗ್ಗಪೂರ್ವ ಘಟಕಗಳಿಗೆ ತಿಂಗಳಿಗೆ ಗರಿಷ್ಠ 250 ಯೂನಿಟ್ ಉಚಿತ ವಿದ್ಯುತ್ ನೀಡಲು ಸರ್ಕಾರ ಆದೇಶ ನೀಡಿದೆ. ಈ ಆದೇಶ ಹೊರಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಜವಳಿ ಸಚಿವ ಶಿವಾನಂದ ‌ಪಾಟೀಲ್ (Shivananda patil) ಅವರು ಶನಿವಾರ ವಿಜಯಪುರದಲ್ಲಿ ಹೇಳಿದರು.

ನೇಕಾರರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಈ ಭರವಸೆಯನ್ನು ನೀಡಿತ್ತು. ಸರ್ಕಾರ ಇದಕ್ಕೆ ಸಂಬಂಧಿಸಿ ಕ್ರಮ ಕೈಗೊಂಡು ಆರ್ಥಿಕ ಸಂಕಷ್ಟದಲ್ಲಿರುವ ನೇಕಾರರ ನೆರವಿಗೆ ಧಾವಿಸಿದೆ. ಈ ಮೂಲಕ ದಸರಾ, ದೀಪಾವಳಿ ಕೊಡುಗೆ ನೀಡಿದೆ ಎಂದು ಶಿವಾನಂದ ಪಾಟೀಲ್‌ ಹೇಳಿದರು.

ಎಷ್ಟು ಜನರಿಗೆ ಅನುಕೂಲ?

ಈ ಯೋಜನೆ ಅನುಷ್ಠಾನದಿಂದ ರಾಜ್ಯದ ಸುಮಾರು 40 ಸಾವಿರ ನೇಕಾರರಿಗೆ ಅನುಕೂಲವಾಗಲಿದೆ. ನೇಕಾರರಿಗೆ ಉಚಿತ ವಿದ್ಯುತ್‌ ಪೂರೈಕೆಗೆ ಮಾಸಿಕ ಅಂದಾಜು 150 ಕೋಟಿ ರೂ. ವೆಚ್ಚವಾಗಲಿದೆ. ಈ ವೆಚ್ಚವನ್ನು ವಿದ್ಯುತ್‌ ಸರಬರಾಜು ಕಂಪನಿಗಳಿಗೆ ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಭರಿಸಲಾಗುವುದು ಎಂದು ಸಚಿವರು ತಿಳಿಸಿದರು. ಶೇ. 80ರಷ್ಟು ನೇಕಾರರು 10 ಎಚ್‌ಪಿ ವರೆಗಿನ ಮಗ್ಗ ಹೊಂದಿದ್ದು, ಅವರಿಗೆ ಯೋಜನೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: Karnataka live news: DA Hike: ರಾಜ್ಯ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್; ತುಟ್ಟಿಭತ್ಯೆ ಶೇ. 3.75 ಹೆಚ್ಚಳ

10 ಎಚ್‌ಪಿಗಿಂತ ಹೆಚ್ಚಿನ ಮಗ್ಗಗಳಿಗೂ ರಿಯಾಯಿತಿ ದರ

10 ಎಚ್‌ಪಿವರೆಗಿನ ವಿದ್ಯುತ್‌ ಮಗ್ಗಗಳಿಗೆ ಉಚಿತ ವಿದ್ಯುತ್‌ ನೀಡುವ ಜತೆಗೆ 10ರಿಂದ 20 ಎಚ್‌.ಪಿ.ವರೆಗಿನ ವಿದ್ಯುತ್‌ ಮಗ್ಗ ಹಾಗೂ ಮಗ್ಗಪೂರ್ವ ಘಟಕಗಳಿಗೆ ಪ್ರತಿ ಯುನಿಟ್‌ಗೆ 1.25 ರೂ. ಯಂತೆ ರಿಯಾಯಿತಿ ದರದಲ್ಲಿ ಮಾಸಿಕ ಗರಿಷ್ಠ 500 ಯುನಿಟ್‌ ವರೆಗೆ ವಿದ್ಯುತ್‌ ಪೂರೈಸಲಾಗುವುದು ಎಂದೂ ಶಿವಾನಂದ ‌ಪಾಟೀಲ್ ತಿಳಿಸಿದ್ದಾರೆ.

ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಸಮಸ್ಯೆ ಬಿಕ್ಕಟ್ಟು ಬಗೆಹರಿಸಲು ಸರ್ಕಾರ ಯತ್ನಿಸುತ್ತಿದೆ. ಸಕ್ಕರೆ ಕಾರ್ಖಾನೆಗಳು ಕಾರ್ಯಾರಂಭಗೊಂಡರೆ 800-1000 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ ಎಂದು ಅವರು ಹೇಳಿದರು.

Exit mobile version