Site icon Vistara News

ಜೋಕಾಲಿ ಆಡುತ್ತಿದ್ದಾಗ ಉರುಳಿಗೆ ಸಿಲುಕಿ ಬಾಲಕಿ ಸಾವು; ಕುಡಿದು ಈಜಲು ಹೋದವ ನೀರು ಪಾಲು

girl death in jokali at karkala

ಉಡುಪಿ/ಕೋಲಾರ: ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮ ಕೆಮ್ಮಣ್ಣುವಿನಲ್ಲಿ ಜೋಕಾಲಿ ಆಡುತ್ತಿದ್ದ ಪುಟ್ಟ ಬಾಲಕಿಗೆ ಉರುಳು ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಲಕ್ಷ್ಮಿ ಪೂಜಾರಿ ಎಂಬುವವರ ಮಗಳು ಮಾನ್ವಿ (9) ಮೃತ ಬಾಲಕಿಯಾಗಿದ್ದಾಳೆ. ಚಿಕ್ಕಪ್ಪನ ಮನೆಗೆ ಆಟವಾಡಲೆಂದು ಹೋಗಿದ್ದ ವೇಳೆ ಈ ಘಟನೆ ನಡೆದಿದೆ. ಮತ್ತೊಬ್ಬ ಬಾಲಕಿಯ ಜತೆಗೆ ಸೀರೆ ಕಟ್ಟಿ ಜೋಕಾಲಿ ಆಡಲಾಗುತ್ತಿತ್ತು. ಸೀರೆ ಕುತ್ತಿಗೆಗೆ ಸುತ್ತಿಕೊಂಡ ಪರಿಣಾಮ ಉಸಿರುಗಟ್ಟಿ ಮಾನ್ವಿ ಮೃತಪಟ್ಟಿದ್ದಾಳೆ.

ತಕ್ಷಣವೇ ಆಕೆಯನ್ನು ರಕ್ಷಿಸಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾದರೂ ಪ್ರಯೋಜನವಾಗಿಲ್ಲ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: New Parliament Building: ಪಂಚಾಯ್ತಿಯಿಂದ ಸಂಸತ್ತಿನ ತನಕ ಒಂದೇ ನಿಷ್ಠೆ; 9 ವರ್ಷದ ಸಾಧನೆಗಳಿಂದಲೇ ಹೆಚ್ಚು ಖುಷಿ ಎಂದ ಮೋದಿ

ಮೈಲಾಂಡಹಳ್ಳಿ ಗ್ರಾಮದ ಬಳಿ ಇರುವ ಕೃಷಿಹೊಂಡ

ಕೋಲಾರದಲ್ಲಿ ಕುಡಿದು ಈಜಲು ಹೋದವ ನೀರುಪಾಲು

ಕೋಲಾರ: ತಾಲೂಕಿನ ಮೈಲಾಂಡಹಳ್ಳಿ ಗ್ರಾಮದ ಬಳಿ ಕೃಷಿಹೊಂಡದಲ್ಲಿ ಕುಡಿದ ಮತ್ತಿನಲ್ಲಿ ಗೆಳೆಯರೊಂದಿಗೆ ಈಜಲು ಹೋಗಿದ್ದ ಯುವಕ ಮೃತಪಟ್ಟಿದ್ದು, ಸಂಬಂಧಿಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ.

ಬೆಂಗಳೂರಿನ ಹೆಬ್ಬಾಳ ಮೂಲದ 34 ವರ್ಷದ ಚಾಲಕ ಶಿವಕುಮಾರ್ ಮೃತ ಯುವಕ. ಕಳೆದ ರಾತ್ರಿ ತನ್ನೊಟ್ಟಿಗೆ ಮೂವರು ಗೆಳೆಯರ ಜತೆ ಮದ್ಯ ಸೇವನೆ ಮಾಡಿದ್ದ ಶಿವಕುಮಾರ್‌ ಅವರು, ಬೆಳಗಿನ ಜಾವ ಮೈಲಾಂಡಹಳ್ಳಿ ಗ್ರಾಮದ ಹೊರವಲಯದ ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದು, ನೀರು ಪಾಲಾಗಿದ್ದಾರೆ.

ಇದನ್ನೂ ಓದಿ: Bandipur National Park: ಬಂಡೀಪುರವೀಗ ಫುಲ್‌ ರಶ್, ದಿನಕ್ಕೆ 8 ಲಕ್ಷ ರೂ. ಆದಾಯ; ಇದು ಮೋದಿ ಎಫೆಕ್ಟ್‌!

ಆದರೆ, ಶಿವಕುಮಾರ್ ಪೋಷಕರು ಇದು ಕೊಲೆ ಎಂದು ಆರೋಪ ಮಾಡಿದ್ದಾರೆ. ಜತೆಯಲ್ಲಿದ್ದವರೇ ಕೊಲೆ ಮಾಡಿರುವುದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ವೇಮಗಲ್ ಪೊಲೀಸರು ಶಿವಕುಮಾರ್ ಮೃತದೇಹವನ್ನು ಕೃಷಿ ಹೊಂಡದಿಂದ ಹೊರ ತೆಗೆದು ಆರ್.ಎಲ್. ಜಾಲಪ್ಪ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದಾರೆ. ಮೃತ ಶಿವಕುಮಾರ್ ಜತೆಯಲ್ಲಿದ್ದ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಿವಕುಮಾರ್‌ ಖಾಸಗಿ ಸುದ್ದಿವಾಹಿನಿಯೊಂದರ ಚಾಲಕ ಎಂದು ಹೇಳಲಾಗಿದೆ.

Exit mobile version