Site icon Vistara News

Kidnap Case : ಪೋಷಕರ ಕಿಡ್ನ್ಯಾಪ್‌ ಕೇಸ್‌ ಸುಖಾಂತ್ಯ; ಗಂಡನ ಮನೆ ಸೇರಿದ ನವವಿವಾಹಿತೆ

Newlywed kidnapped in Gadaga

ಗದಗ: ಮನೆಯವರನ್ನು ಧಿಕ್ಕರಿಸಿ ಪ್ರೀತಿಸಿದವನ ಕೈಹಿಡಿದಳೆಂದು ಸಿಟ್ಟಿಗೆದ್ದ ಪೋಷಕರೇ ಮನೆಗೆ ನುಗ್ಗಿ ಮಗಳನ್ನು ಕಿಡ್ನ್ಯಾಪ್‌ ಮಾಡಿಬಿಟ್ಟಿದ್ದರು. ಈ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಕಿಡ್ನ್ಯಾಪ್‌ ಕೇಸ್‌ (Kidnap Case) ದಾಖಲಾಗಿತ್ತು. ಇದೀಗ ಬಲವಂತದಿಂದ ಕರೆದೊಯ್ದ ಪ್ರಕರಣವು ಸುಖಾಂತ್ಯಗೊಂಡಿದೆ. ಪೋಷಕರ ಜತೆಗೆ ನಾನೇ ಹೋಗಿದ್ದು ಎಂದು ಯುವತಿ ಹೇಳಿಕೆ ನೀಡಿ ಪ್ರಕರಣಕ್ಕೆ ತೆರೆ ಎಳೆದಿದ್ದಾಳೆ.

ಏನಿದು ಪ್ರಕರಣ?

ಗದಗ ನಗರದ ಡಿಸಿ ಮಿಲ್ ನಿವಾಸಿ ಅಭಿಷೇಕ ಹಾಗೂ ಹುಬ್ಬಳ್ಳಿ ನಿವಾಸಿ ಐಶ್ವರ್ಯ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಮದುವೆಯೊಂದರಲ್ಲಿ ಪರಿಚಯವಾಗಿದ್ದರು. ಪರಿಚಯವು ಪ್ರೀತಿಗೆ ತಿರುಗಿತ್ತು, ಪರಸ್ಪರ ಕರೆ (Phone Call), ಚಾಟಿಂಗ್‌ ಎಲ್ಲವೂ ನಡೆದಿತ್ತು. ಪ್ರೀತಿಯ ವಿಷಯವನ್ನು ಇಬ್ಬರು ಮಾತನಾಡಿಕೊಂಡಿದ್ದರು. ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಪ್ರೀತಿಯಲ್ಲಿ ಮುಳುಗಿದರು. ಹೀಗಾಗಿ ಈ ವಿಷಯವನ್ನು ಐಶ್ವರ್ಯ ತನ್ನ ಮನೆಯವರಿಗೆ ಹೇಳಿದಾಗ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ವಿರೋಧದ ನಡುವೆಯೂ ದೇವಸ್ಥಾನದಲ್ಲಿ ಮದುವೆ (Marriage at temple) ನಡೆದೇಬಿಟ್ಟಿತು.

ನಂತರ 2023ರ ಜೂನ್ 23 ರಂದು ಗದಗಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ವಿವಾಹ ನೋಂದಣಿಯನ್ನೂ (Marriage Registration) ನೆರವೇರಿಸಲಾಯಿತು. ಗಂಡನ ಮನೆಯಲ್ಲಿ ಐಶ್ವರ್ಯ ಖುಷಿ ಖುಷಿಯಿಂದಲೇ ಇದ್ದಳು. ಆದರೆ, ಬುಧವಾರ (ಜು.12) ಏಕಾಏಕಿ ಮನೆಗೆ ನುಗ್ಗಿದ ಆಕೆಯ ಪೋಷಕರು ಹುಡುಗನಿಗೆ ಖಾರದ ಪುಡಿ (Chilli powder) ಎರಚಿ ಹಲ್ಲೆ ನಡೆಸಿ, ಐಶ್ವರ್ಯಳನ್ನು ಹೊತ್ತೊಯ್ದಿದ್ದರು. ಈ ವೇಳೆ ಅಡ್ಡ ಬಂದ ಗರ್ಭಿಣಿಯಾಗಿದ್ದ ಅಭಿಷೇಕ್ ಸಹೋದರಿ ಮೇಲೆಯೂ ಹಲ್ಲೆ (Pregnant woman assaulted) ನಡೆಸಿದ್ದಾರೆ ಎಂದು ದೂರಲಾಗಿತ್ತು.

ಇದನ್ನೂ ಓದಿ: ಆಯತಪ್ಪಿ ಬಾವಿಗೆ ಬಿದ್ದ ತಂಗಿ; ಪ್ರಾಣವನ್ನು ಲೆಕ್ಕಿಸದೇ ನೀರಿಗೆ ಹಾರಿದ ಅಕ್ಕ!

ಜುಲೈ 14ರ ಶುಕ್ರವಾರ ಅದ್ಧೂರಿಯಾಗಿ ಆರತಕ್ಷತೆ ಮಾಡುವ ಬಗ್ಗೆ ಅಭಿಷೇಕ್ ಮನೆಯವರು ಪ್ಲ್ಯಾನ್ ಮಾಡಿಕೊಂಡಿದ್ದರು. ಅಭಿಷೇಕ್‌ ಮತ್ತು ಐಶ್ವರ್ಯ ಮದುವೆಯಾಗಿ 20 ದಿನ ಕಳೆದಿರಲಿಲ್ಲ. ಅಷ್ಟರೊಳಗೆ ಈ ನವಜೋಡಿ ದೂರವಾದಂತೆ ಆಗಿತ್ತು. ಈ ಸಂಬಂಧ ಅಭಿಷೇಕ್‌ ಮತ್ತವರ ಮನೆಯವರು ಮಹಿಳಾ ಪೊಲೀಸ್‌ ಠಾಣೆ ಮೆಟ್ಟಿಲೇರಿ, ಐಶ್ವರ್ಯಳನ್ನು ಆಕೆಯ ಪೋಷಕರು ಅಪಹರಣ ಮಾಡಿದ್ದಾರೆಂದು ದೂರು ನೀಡಿದ್ದರು.

ದೂರು ದಾಖಲು ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದ ಪೊಲೀಸರು ಆಕೆಯನ್ನು ಪತ್ತೆ ಹಚ್ಚಿ ವಾಪಸ್‌ ಕರೆತಂದಿದ್ದರು. ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇಡೀ ಘಟನೆ ಯುವತಿ ಹೇಳಿಕೆಯನ್ನೇ ಅವಲಂಬಿಸಿತ್ತು. ಸದ್ಯ ಐಶ್ವರ್ಯ ತಾನೇ ಪೋಷಕರ ಜತೆಗೆ ಹೋಗಿದ್ದಾಗಿ ಹೇಳಿಕೆ ನೀಡಿದ್ದಾಳೆ. ಇದರಿಂದ ತನ್ನ ತವರು ಮನೆಯನ್ನು ಸೇಫ್‌ ಮಾಡಿ, ಮತ್ತೆ ಪ್ರೀತಿಸಿದ ಹುಡುನ ಮನೆ ಸೇರಿದ್ದಾಳೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version