Site icon Vistara News

Girl rescued : ಮಲ್ಪೆ ಬೀಚ್‌ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಹುಡುಗಿ ರಕ್ಷಣೆ

Malpe beach

#image_title

ಉಡುಪಿ: ಮಲ್ಪೆ ಬೀಚ್‌ ಪರಿಸರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಹುಡುಗಿಯೊಬ್ಬಳನ್ನು ಸಾಹಸಿಕ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ (Girl rescued). ಚಿತ್ರದುರ್ಗ ಮೂಲದ ಮಾನಗಿ ಗ್ರಾಮದ ಐಶ್ವರ್ಯ( 16) ನೀರಿಗೆ ಬಿದ್ದು ರಕ್ಷಿಸಲ್ಪಟ್ಟಾಕೆ.

ಕುಟುಂಬದ ಇತರ ಸದಸ್ಯರೊಂದಿಗೆ ಬಂದಿದ್ದ ಐಶ್ವರ್ಯ ಸಮುದ್ರ ತೀರದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಬೃಹತ್ ಅಲೆಗೆ ಆಯತಪ್ಪಿ ಬಿದ್ದಿದ್ದಾಳೆ. ಹಿಂದೆ ತೆರಳುವ ತೆರೆಗಳ ರಭಸ ಆಕೆಯನ್ನೂ ಸೆಳೆದುಕೊಂಡು ಹೋಗಿದೆ. ಹೀಗಾಗಿ ಆಕೆ ನೀರಿನಲ್ಲಿ ಸಿಲುಕಿ ಮುಳುಗೇಳುವಂತಾದಳು.

ಆಗ ಅಲ್ಲೇ ಇದ್ದ ಲೈಫ್‌ ಗಾರ್ಡ್‌ ಮತ್ತು ಆಪತ್ಭಾಂದವ ಈಶ್ವರ್ ಮಲ್ಪೆ ಅವರು ಕೂಡಲೇ ಸಮುದ್ರಕ್ಕೆ ಜಿಗಿದು ಆಕೆಯನ್ನು ಮೇಲಕ್ಕೆಳೆದು ತಂದರು.

ಪ್ರಥಮ ಚಿಕಿತ್ಸೆ ನೀಡಿ ನೇರವಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಉಪ್ಪು ನೀರು ಕುಡಿದ ಹಿನ್ನೆಲೆಯಲ್ಲಿ ಅಸ್ವಸ್ಥಳಾದ ಹುಡುಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಶ್ವರ ಮಲ್ಪೆ ಅವರ ಸಕಾಲಿಕ ಕಾರ್ಯಾಚರಣೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಗೃಹ ಸಚಿವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿಯಾಗಿ ಸವಾರ ಸಾವು

ಹಾಸನ: ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಎಸ್ಕಾರ್ಟ್ ವಾಹನ ಬೈಕ್‌ಗೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ (Bike Accident) ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಪೊಲೀಸ್ ಠಾಣೆ ಬಳಿ ನಡೆದಿದೆ.

ಚಿಕ್ಕಗಂಡಸಿ ಗ್ರಾಮದ ರಮೇಶ್ (45) ಮೃತರು. ಮಲೆಮಹದೇಶ್ವರ ಬೆಟ್ಟದಿಂದ ಸ್ವಗ್ರಾಮಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತೆರಳುತ್ತಿದ್ದರು. ಈ ವೇಳೆ ಗೃಹ ಸಚಿವರಿಗೆ ಎಸ್ಕಾರ್ಟ್ ಮಾಡುತ್ತಿದ್ದ ಕೆ.ಎ. 13 ಜಿ 1467 ಸಂಖ್ಯೆ ಪೊಲೀಸ್‌ ವಾಹನ ಬೈಕ್‌ಗೆ ಡಿಕ್ಕಿಯಾಗಿ ಸವಾರ ರಮೇಶ್ ಮೃತಪಟ್ಟಿದ್ದಾರೆ.

ಅಪಘಾತದ ವಿಷಯ ತಿಳಿದರೂ ವಾಹನ ನಿಲ್ಲಿಸದೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ತೆರಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಸವಾರ ಹೆಲ್ಮೆಟ್ ಧರಿಸಿರಲಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ : Youth drowned: ಸ್ನೇಹಿತರೊಂದಿಗೆ ಈಜಲು ಹೋದ ಸಾಯಿರಾಮ್ ಕಾಲೇಜು ವಿದ್ಯಾರ್ಥಿ ನೀರುಪಾಲು

Exit mobile version