ಬೆಳಗಾವಿ: ಕಾಂತಾರ ಸಿನಿಮಾ ಬಳಿಕ ರಾಜ್ಯ ಸರ್ಕಾರವು ಕರಾವಳಿಯ ಪ್ರಮುಖ ಆರಾಧನೆಯಲ್ಲೊಂದಾದ ಭೂತಾರಾಧನೆಯಲ್ಲಿ ದೈವಾರಾಧಕರಿಗೆ ಮಾಸಾಶನವನ್ನು (Remuneration) ಘೋಷಣೆ ಮಾಡಿದ ಬೆನ್ನಲ್ಲೇ ಈಗ ವೀರಗಾಸೆ ಮಾಡುವ ಪುರವಂತರಿಗೂ ಮಾಸಾಶನ ನೀಡಬೇಕೆಂಬ ಒತ್ತಾಯವೂ ಕೇಳಿಬಂದಿದ್ದು, ಸೋಷಿಯಲ್ ಮೀಡಿಯಾ ಮೂಲಕ ಅಭಿಯಾನ ಆರಂಭವಾಗಿದೆ.
ಕಲಾವಿದರಿಗೆ ಮಸಾಶನ ನೀಡುತ್ತಿರುವಂತೆಯೇ ಭೂತಾರಾಧನೆಯಲ್ಲಿ ದೈವ ನರ್ತನ ಮಾಡುವ ೬೦ ವರ್ಷ ಮೇಲ್ಪಟ್ಟ ದೈವ ನರ್ತರಿಗೆ ಮಾಸಿಕವಾಗಿ ೨ ಸಾವಿರ ರೂಪಾಯಿ ನೀಡುವ ಬಗ್ಗೆ ಈಚೆಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಸರ್ಕಾರದ ನಿರ್ಧಾರವನ್ನು ಪ್ರಕಟಪಡಿಸಿದ್ದರು. ಸರ್ಕಾರದಿಂದ ಈ ನಿರ್ಧಾರ ಹೊರಬರುತ್ತಲೇ ವೀರಗಾಸೆ ಮಾಡುವ ಪುರವಂತರಿಗೂ ಮಾಸಾಶನ ನೀಡುವಂತೆ ಒತ್ತಾಯಗಳು ಕೇಳಿಬಂದಿವೆ.
ಮಾಸಾಶನಕ್ಕೆ ಆಗ್ರಹ
ಅನಾದಿ ಕಾಲದಿಂದಲೂ ರಥೋತ್ಸವ, ಗುಗ್ಗಳೋತ್ಸವದಲ್ಲಿ ಪುರವಂತರು ಭಾಗಿಯಾಗುತ್ತಾ ಬಂದಿದ್ದಾರೆ. ಪುರಾತನ ಕಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕಿದೆ. ಇದು ವೀರಭದ್ರ ದೇವರ ಕಲೆಯಾಗಿದ್ದು, ಉತ್ತರ ಕರ್ನಾಟಕ ಭಾಗದ ಪಾರಂಪರಿಕ ಸಂಸ್ಕೃತಿಯಾಗಿದೆ. ಹೀಗಾಗಿ ಉತ್ತರ ಕರ್ನಾಟಕದ ವೀರಗಾಸೆ ಪುರವಂತರಿಗೂ ಸರ್ಕಾರ ಮಾಸಾಶನ ನೀಡಬೇಕು ಎಂದು ವೀರಗಾಸೆ ಪುರವಂತರು ಒತ್ತಾಯಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದ ಆಯಾ ಊರಿನಲ್ಲಿ ಪುರವಂತರು ಇದ್ದಾರೆ. ಈ ಕಲೆಯು ನಶಿಸಿ ಹೋಗಲು ಬಿಡದೆ ಮುಂದುವರಿಸಿಕೊಂಡು ಬಂದಿದ್ದಾರೆ. ಪ್ರತ್ಯೇಕ ತಾಲೂಕಿನಲ್ಲಿಯೂ ವೀರಗಾಸೆ ಕಲಾವಿದರ ಸಂಘವಿದೆ. ಪುರವಂತರಲ್ಲಿಯೂ ಎಷ್ಟೋ ಜನ 60 ವರ್ಷ ಮೀರಿದವರಿದ್ದಾರೆ. ಹೀಗಾಗಿ ಅವರಿಗೂ ಸಹ ಮಾಸಾಶನ ನೀಡಬೇಕೆಂಬ ಆಗ್ರಹಗಳು ಕೇಳಿಬಂದಿವೆ. ಕರಾವಳಿಯ ದೈವಾರಾಧಕರಿಗೆ ಮಾಸಾಶನ ನೀಡಿದ್ದಕ್ಕೆ ನಮ್ಮ ಸ್ವಾಗತವಿದೆ. ಆದರೆ, ನಮಗೂ ನೀಡಿ ಎಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ | Head Bush Movie | ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರಿತ್ತ ಕಲಾವಿದರು, ವೀರಶೈವ ಪುರೋಹಿತರು; ಪ್ರದರ್ಶನ ಸ್ಥಗಿತಕ್ಕೆ ಆಗ್ರಹ