ಬೆಂಗಳೂರು: ಪತ್ರಿಕೋದ್ಯಮ ಸಹಿತ ಪತ್ರಕರ್ತ ಯಾವ ಮಾರ್ಗದಲ್ಲಿದ್ದಾರೆ? ಅವರ ಸಿದ್ಧಾಂತಗಳೇನು? ಯಾವ ರೀತಿಯಾಗಿ ಕಾರ್ಯನಿರ್ವಹಣೆ ಮಾಡಬೇಕು? ಎಂಬಿತ್ಯಾದಿ ನೈತಿಕ ಅಂಶಗಳನ್ನೊಳಗೊಂಡ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥ ರಾವ್ ವಿರಚಿತ “ಆ ಪತ್ರಿಕೋದ್ಯಮ” ಪುಸ್ತಕ ಶನಿವಾರ (ಆ.೬) (Book Release) ಲೋಕಾರ್ಪಣೆಗೊಂಡಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಹುರೂಪಿ ಸಹಯೋಗದೊಂದಿಗೆ “ಆ ಪತ್ರಿಕೋದ್ಯಮʼ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿದ್ದು, ಪತ್ರಕರ್ತನಾದವನು ಸಿದ್ಧಾಂತಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಜಿ.ಎನ್.ರಂಗನಾಥ ರಾವ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕಿವಿ ಮಾತು ಹೇಳಿದರು. ವಿಮರ್ಶಕ ಪ್ರೊ. ಸಿ. ಎನ್. ರಾಮಚಂದ್ರನ್, ಸಾಹಿತಿ, ಜಿ.ಎನ್. ಮೋಹನ್, ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಸೇರಿದಂತೆ ಇತರೆ ಗಣ್ಯರು ಪುಸ್ತಕ ಬಿಡುಗಡೆಗೊಳಿಸಿದರು.
ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ವಿಮರ್ಶಕ ಪ್ರೊ. ಸಿ. ಎನ್. ರಾಮಚಂದ್ರನ್, ಪತ್ರಕರ್ತನಾದವನು ಸಿದ್ಧಾಂತಗಳನ್ನು ಇಟ್ಟುಕೊಂಡು ಕೆಲಸ ಮಾಡಬೇಕು. ಸಭೆ-ಸಮಾರಂಭಗಳಲ್ಲಿ ಪತ್ರಕರ್ತರ ಮಾನ ಹಾರಾಜು ಆಗುತ್ತಿದೆ. ಅದಕ್ಕಾಗಿ ಒಂದು ನೀತಿ ಸಂಹಿತೆಯನ್ನು ರೂಪಿಸಿ, ಎಲ್ಲ ಪತ್ರಕರ್ತರು ಅದನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು. ಜಿ.ಎನ್. ರಂಗನಾಥರಾವ್ ಅವರು ತಮ್ಮ ಕೃತಿಯಲ್ಲಿ ಮಾಧ್ಯಮಗಳು ವೃತ್ತಿ ನಿಷ್ಠತೆಯನ್ನು ಮೆರೆಯಬೇಕಾದ ಅಗತ್ಯತೆಯನ್ನು ದೃಷ್ಟಾಂತಗಳ ಮೂಲಕ ಕಟ್ಟಿಕೊಟ್ಟಿದ್ದಾರೆ., ಆಳುವ ವರ್ಗದ ಓಲೈಕೆ ಮಾಡದೆ, ಕಾರ್ಪೊರೇಟ್ ಸಂಸ್ಥೆಗಳ ಬೆನ್ನು ಬೀಳದೆ, ಸತ್ಯಕ್ಕೆ ಅಪಚಾರವಾಗದೆ ಸಾಮಾಜಿಕ ಬದ್ಧತೆಯನ್ನು ಪ್ರಕಟಿಸುವ ಅಗತ್ಯ ಈ ಹಿಂದಿಗಿಂತಲೂ ಇಂದು ಹೆಚ್ಚಿದೆ ಎಂದು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಶಿವಾನಂದ ತಗಡೂರು ಮಾತನಾಡಿ, ಡಿ.ವಿ. ಗುಂಡಪ್ಪನವರ ಕನಸು ಆಶಯಗಳನ್ನು ಈಡೇರಿಸುವ ಕೆಲಸವನ್ನು ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಾಡಲಾಗುತ್ತಿದೆ. ಸಾಹಿತಿಯಾಗಿ ಹಾಗೂ ಪತ್ರಕರ್ತರಾಗಿಯೂ ಡಿವಿಜಿ ಗುರುತಿಸಿಕೊಂಡವರು. ಪತ್ರಕರ್ತರ ಮನಸ್ಸಿನೊಳಗೆ ಒಬ್ಬ ಸಾಹಿತಿ ಇದ್ದೇ ಇರುತ್ತಾನೆ ಎಂಬುದಕ್ಕೆ ಇಂದಿನ ಪುಸ್ತಕ ಬಿಡುಗಡೆಯೇ ಸಾಕ್ಷಿ. ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪುಸ್ತಕ ಬಿಡುಗಡೆ ಮಾಡಿದ್ದು ಸಂತಸ ತಂದಿದೆ. ಪತ್ರಕರ್ತರ ವೃತ್ತಿಯಲ್ಲಿ ಎದುರಾಗುವ ಸಮಸ್ಯೆಗಳಿಗೆ ಗಮನ ನೀಡುವುದಲ್ಲದೆ ಪತ್ರಕರ್ತರ ಸೃಜನಶೀಲ ಕೆಲಸಗಳಿಗೂ ಆದ್ಯತೆ ನೀಡುತ್ತದೆ ಎಂದರು.
ಇದನ್ನೂ ಓದಿ | ಆ.7ಕ್ಕೆ ಶಿರಸಿಯಲ್ಲಿ ಡಾ. ಗಿರಿಧರ್ ಕಜೆ ರಚನೆಯ ಔನ್ನತ್ಯ ಕೃತಿ ಬಿಡುಗಡೆ
ಸಾಹಿತಿ, ಬಹುರೂಪಿಯ ಜಿ.ಎನ್. ಮೋಹನ್ ಮಾತನಾಡಿ, ಜಾಗತೀಕರಣದ ನಂತರ ಮಾಧ್ಯಮ ಇನ್ನೊಂದು ಉದ್ಯಮವಾಗಿ ಬದಲಾಗಿದೆ. ಈ ಮೊದಲಿನ ಮಾಧ್ಯಮಕ್ಕೆ ಸಮಾಜವನ್ನು ಕಟ್ಟುವ ಕನಸುಗಳಿತ್ತು. ಆದರೆ ಕೊಳ್ಳುಬಾಕ ಸಂಸ್ಕೃತಿಗೆ ಉತ್ತೇಜನ ನೀಡಿದ ಜಾಗತೀಕರಣ, ಮಾಧ್ಯಮವನ್ನು ವ್ಯಾಪಾರದ ಇನ್ನೊಂದು ಸರಕನ್ನಾಗಿ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಯಾರು ಜಿ.ಎನ್.ರಂಗನಾಥ ರಾವ್?
ಜಿ. ಎನ್. ರಂಗನಾಥ ರಾವ್ ಅವರು ಹಲವು ಪತ್ರಿಕೆ, ನಿಯತಕಾಲಿಕೆಗಳಿಗೆ ಸಂಪಾದಕರಾಗಿ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. “ಆ ಪತ್ರಿಕೋದ್ಯಮ” ಪುಸ್ತಕದಲ್ಲಿ ಅವರ ಮಾಧ್ಯಮ ಲೋಕದ ಪಯಣದ ಏಳುಬೀಳುಗಳ ಮತ್ತು ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಅಲ್ಲದೆ, ಹಿಂದಿನ ಮತ್ತು ಈಗಿನ ಪತ್ರಿಕೋದ್ಯಮದ ನಡುವಿನ ವ್ಯತ್ಯಾಸಗಳು ಸೇರಿದಂತೆ ಹಲವು ವಿಶ್ಲೇಷಣೆಗಳನ್ನು ಇಲ್ಲಿ ನೀಡಿದ್ದಾರೆ.
ಪುಸ್ತಕದ ವಿವರ:
ಕೃತಿ: “ಆ ಪತ್ರಿಕೋದ್ಯಮ”
ಜಿ.ಎನ್. ರಂಗನಾಥ ರಾವ್
ಪ್ರಕಾಶನ: ಬಹುರೂಪಿ
ಬೆಲೆ: 300 ರೂ.
ಸಂಪರ್ಕ: 70191 82729
ಇದನ್ನೂ ಓದಿ | ಕೋಟಿ ಸದಸ್ಯತ್ವಕ್ಕೆ ಕಸಾಪ ಮೊದಲ ಹೆಜ್ಜೆ; ಆ್ಯಪ್ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ