ಚಿಕ್ಕಮಗಳೂರು: ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ (Lok Sabha Election) ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ. ಒಂದೆಡೆ ಬಿಜೆಪಿಯಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಆಗ್ರಹ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಜಯಪ್ರಕಾಶ್ ಹೆಗ್ಡೆ ಸ್ಪರ್ಧೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೆಗ್ಡೆ ಬದಲಿಗೆ ಸ್ವಪಕ್ಷದವರೇ ಆದ ಕೆಪಿಸಿಸಿ ವಕ್ತಾರ ಹಾಗೂ ವಕೀಲ ಸುಧೀರ್ ಕುಮಾರ್ ಮುರೊಳ್ಳಿಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಮುಖಂಡರು ಒತ್ತಡ ಹೇರುತ್ತಿದ್ದಾರೆ.
ಅಕ್ಕ ನೀನು ಸಾಕು, ಗೋ ಬ್ಯಾಕ್ ಶೋಭಕ್ಕ
ಚಿಕ್ಕಮಗಳೂರು ಕ್ಷೇತ್ರದಲ್ಲಿ ಗೋ ಬ್ಯಾಕ್ ಶೋಭಕ್ಕ ಅಭಿಯಾನ ಮುಂದುವರಿದಿದೆ. 10 ವರ್ಷದಿಂದ ಸಂಸದೆಯಾಗಿರುವ ಶೋಭಾ ಕರಂದ್ಲಾಜೆ ಅವರಿಗೆ ಸ್ಥಳೀಯ ಮುಖಂಡರ ಪರಿಚಯವೇ ಇಲ್ಲ. ಹೀಗಾಗಿ ಚಿಕ್ಕಮಗಳೂರಿನ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರ ಆಗ್ರಹವಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹಠಾವೋ ಹಠಾವೋ ಶೋಭಾ ಕರಂದ್ಲಾಜೆ ಹಠಾವೋ-ಉಡುಪಿ ಚಿಕ್ಕಮಗಳೂರು ಬಚಾವೋ, ನಮ್ಮದು ಮೋದಿ ಪರಿವಾರ-ಹಾಗೆಯೇ ಶೋಭಾ ವಿರೋಧಿ ಪರಿವಾರ, ತ್ಯಾಗಮಯಿ ಅಂದ್ರೆ ಈಶ್ವರಪ್ಪ , ರಘುಪತಿ ಭಟ್. ಅಕ್ಕ ನೀನು ಸಾಕು ಗೋ ಬ್ಯಾಕ್ ಶೋಭಕ್ಕ ಎಂಬ ಪೋಸ್ಟರ್‌ಗಳು ವೈರಲ್ ಅಗುತ್ತಿವೆ. ಇನ್ನು ಭಾನುವಾರ ಚಿಕ್ಕಮಗಳೂರು ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿದ್ದ ಕಾರ್ಯಕರ್ತರು, ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದ್ದರು.
ಕಾಂಗ್ರೆಸ್‌ನಿಂದ ಸುಧೀರ್ ಕುಮಾರ್ ಮುರೊಳ್ಳಿಗೆ ಟಿಕೆಟ್ ನೀಡಲು ಆಗ್ರಹ
ಬಿಜೆಪಿಯಲ್ಲಿ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಅಭಿಯಾನ ಮುನ್ನೆಲೆಗೆ ಬಂದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲೂ ಸಂಭಾವ್ಯ ಅಭ್ಯರ್ಥಿ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಯುತ್ತಿದೆ. ಸದ್ಯ ಬಿಜೆಪಿಯಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ಮತ್ತೆ ಕಾಂಗ್ರೆಸ್‌ಗೆ ಬರಲಿದ್ದು, ಅವರಿಗೇ ಈ ಬಾರಿ ಕೈ ಟಿಕೆಟ್ ನೀಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ. ಹೀಗಾಗಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಕೈ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ನಡೆಸುತ್ತಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಬದಲಿಗೆ ಕೆಪಿಸಿಸಿ ವಕ್ತಾರ ಸುಧೀರ್ ಮುರೊಳ್ಳಿ ಟಿಕೆಟ್ ನೀಡಬೇಕು ಎಂದು ಕಾರ್ಯಕರ್ತರು, ಮುಖಂಡರು ಆಗ್ರಹಿಸಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸಿ ಪಕ್ಷದ ನಾಯಕರ ಮೇಲೆ ಒತ್ತಾಯ ಹೇರುತ್ತಿದ್ದಾರೆ. ಸ್ವ-ಪಕ್ಷಿಯರ ಟಿಕೆಟ್ ಲಾಬಿಗೆ ಹೈಕಮಾಂಡ್ ನಾಯಕರು ಸುಸ್ತಾಗಿದ್ದಾರೆ.
ಇದನ್ನೂ ಓದಿ | Lok Sabha Election 2024: 3 ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಫಿಕ್ಸ್; ಕಣದಿಂದ ಹಿಂದೆ ಸರಿಯಿತೇ ಗೌಡರ ಕುಟುಂಬ?
ಶೃಂಗೇರಿ, ಕೊಪ್ಪ, ತರೀಕೆರೆಯಲ್ಲಿ ಸರಣಿ ಸಭೆ ನಡೆಸಿರುವ ಮುಖಂಡರು, ಶತಾಯಗತಾಯ ಸುಧೀರ್ ಮುರೊಳ್ಳಿ ಅವರಿಗೆ ಟಿಕೆಟ್ ಕೊಡಿಸಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಕಷ್ಟಕಾಲದಲ್ಲಿ ಪಕ್ಷಕ್ಕೆ ಕೈಕೊಟ್ಟು ಹೋದ ಹೆಗ್ಡೆಗೆ ಟಿಕೆಟ್ ನೀಡಬಾರದು ಎಂದು ಒತ್ತಾಯ ಕೇಳಿಬಂದಿದೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೂ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ.