Site icon Vistara News

Go back protest | ತೀರ್ಥಹಳ್ಳಿಯಲ್ಲಿ ರೋಹಿತ್‌ ಚಕ್ರತೀರ್ಥಗೆ ಗೋ ಬ್ಯಾಕ್‌ ಪ್ರತಿಭಟನೆ ಬಿಸಿ: ಕುವೆಂಪು ನಾಡಗೀತೆ ವಿರೂಪದ ಸಿಟ್ಟು

ರೋಹಿತ್‌ ಚಕ್ರತೀರ್ಥ ಗೋ ಬ್ಯಾಕ್

ಶಿವಮೊಗ್ಗ: ವಿರೂಪಗೊಳಿಸಿದ ನಾಡಗೀತೆಯನ್ನು ಹಂಚಿಕೊಂಡಿದ್ದ ಲೇಖಕ, ಚಿಂತಕ ರೋಹಿತ್‌ ಚಕ್ರತೀರ್ಥ ಅವರಿಗೆ ಬುಧವಾರ ತೀರ್ಥಹಳ್ಳಿಯಲ್ಲಿ ತೀವ್ರ ಪ್ರತಿಭಟನೆ ಬಿಸಿ‌ (Go back protest) ತಟ್ಟಿತು.

ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಡೆಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ಅವರು ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ವಿಷಯ ಕುರಿತು ಮುಖ್ಯ ಭಾಷಣ ಮಾಡಲಿದ್ದಾರೆ. ಇದು ಕುವೆಂಪು ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ.

ಕುವೆಂಪು ಅವರನ್ನು ಅವಮಾನಿಸುವ ಮೂಲಕ ರೋಹಿತ್ ಚಕ್ರತೀರ್ಥ ವಿಕೃತಿ ಮೆರೆದಿದ್ದಾರೆ. ಇವರಿಗೆ ಕುವೆಂಪು ಅವರ ಬಗ್ಗೆ ಮಾತನಾಡಲು ಅವಕಾಶ ನೀಡಬಾರದು ಎಂದು ಸಾಮಾಜಿಕ ಜಾಲತಾಣದಲ್ಲಿ ಹಿಂದಿನಿಂದಲೇ ಪ್ರತಿಭಟನೆ ವ್ಯಕ್ತವಾಗಿತ್ತು. ಗೋ ಬ್ಯಾಕ್ ಪ್ರತಿಭಟನೆಯೂ ಜೋರಾಗಿತ್ತು. ಈ ನಡುವೆ ಕೆಲವರು ರೋಹಿತ್‌ ಚಕ್ರತೀರ್ಥ ಅವರ ಪರವಾಗಿಯೂ ತಮ್ಮ ವಾದ ಮಂಡನೆ ಮಾಡಿದ್ದರು.

ಕೊಪ್ಪ ವೃತ್ತದಲ್ಲಿ ಪ್ರತಿಭಟನೆ
ಈ ನಡುವೆ, ತೀರ್ಥಹಳ್ಳಿಯಲ್ಲಿರುವ ಕೊಪ್ಪ ವೃತ್ತದಲ್ಲಿರುವ ಕುವೆಂಪು ಪ್ರತಿಮೆ ಎದುರು ಕುವೆಂಪು ಅಭಿಮಾನಿಗಳು ದೊಡ್ಡ ಮಟ್ಟದ ಪ್ರತಿಭಟನೆ ಆಯೋಜಿಸಿದ್ದರು. ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ತೀರ್ಥಹಳ್ಳಿಗೆ ಕಾಲಿಟ್ಟರೆ ಪ್ರತಿಭಟನೆ, ಮಸಿ ಬಳಿಯುವ ಎಚ್ಚರಿಕೆಯೊಂದಿಗೆ ವಿವಿಧ ಸಂಘಟನೆಗಳ ಮುಖಂಡರು ವೃತ್ತದಲ್ಲಿ ಸೇರಿದ್ದರು. ಚಕ್ರತೀರ್ಥ ಗೋ ಬ್ಯಾಕ್ ಘೋಷಣೆ ಕೂಗಿದರು. ಈ ನಡುವೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಚದುರಿಸಿದರು.

ಇತ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಮಾಜಿ ಶಾಸಕ ಕಡಿದಾಳ್ ದಿವಾಕರ್ ಅವರು ಸಭೆಗೆ ಗೈರಾಗಿದ್ದಾರೆ. ರೋಹಿತ್‌ ಚಕ್ರತೀರ್ಥ ಅವರನ್ನು ಬಿಗಿ ಭದ್ರತೆಯ ಮೂಲಕ ಸಭಾ ವೇದಿಕೆಗೆ ಕರೆದೊಯ್ಯಲಾಯಿತು.

ಪ್ರತಿಭಟನೆಗೆ ಏನು ಕಾರಣ?
ರೋಹಿತ್ ಚಕ್ರತೀರ್ಥ ಅವರು ಬಹು ಹಿಂದೆ ನಾಡಕವಿ ಕುವೆಂಪು ಅವರು ಬರೆದಿದ್ದ ನಾಡಗೀತೆಯ ಸಾಲುಗಳನ್ನು ವಿರೂಪಗೊಳಿಸಿದ್ದ ಒಂದು ಪೋಸ್ಟ್‌ನ್ನು ಹಂಚಿಕೊಂಡಿದ್ದರು. ಅಂದು ಅವರ ಫೋಸ್ಟ್​ನಲ್ಲಿ ʻಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯಹೇ ಅರೇಬಿಕ್ ಮಾತೆ.. ಜೈ ಸುಂದರ ಮಟನ್ ಅಂಗಡಿಗಳ ಸಾಲೇ” ಎಂದು ಬರೆಯಲಾಗಿತ್ತು. ಅದು ಚಕ್ರತೀರ್ಥ ಅವರು ಬರೆದ ಸಾಲುಗಳಾಗಿರಲಿಲ್ಲ. ಆದರೆ, ಅವರು ಅದನ್ನು ಹಂಚಿಕೊಂಡಿದ್ದರಿಂದ ಆಕ್ರೋಶ ಅವರ ಕಡೆಗೆ ತಿರುಗಿತ್ತು.

ಕುವೆಂಪು ಅಭಿಮಾನಿಗಳು ಮತ್ತು ನೆಟ್ಟಿಗರು ವಿರೋಧಿಸಿದ್ದರು. ಕುವೆಂಪು ಅವರನ್ನು ಅವಮಾನಿಸುವ ಮೂಲಕ ರೋಹಿತ್ ಚಕ್ರತೀರ್ಥ ವಿಕೃತಿ ಮೆರೆದಿದ್ಧಾರೆ ಎಂದು ದೂರಿದ್ದರು. ಶಿಕ್ಷಣ ಇಲಾಖೆಯ ಮೂಲಕ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ಬಳಿಕ ಈ ವಿವಾದ ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು.

ಪಠ್ಯಪುಸ್ತಕ ಪರಿಷ್ಕರಣೆಯ ಸಂದರ್ಭದಲ್ಲಿ ನಾರಾಯಣಗುರು ಸೇರಿದಂತೆ ಹಲವರು ಮಹನೀಯರಿಗೆ ಅವಮಾನ ಮಾಡಲಾಗಿದೆ ಎಂಬ ಆಕ್ರೋಶವೂ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ತೀರ್ಥಹಳ್ಳಿಯ ಕಾರ್ಯಕ್ರಮಕ್ಕೆ ರೋಹಿತ್ ಚಕ್ರತೀರ್ಥರವರು ಬರುವುದು ಬೇಡ ಎಂಬ ಆಕ್ರೋಶ ವ್ಯಕ್ತವಾಗಿತ್ತು.

ಇದನ್ನೂ ಓದಿ | Motivational story: ಕಾಡು ದಾರಿಯಲ್ಲಿ ಕಾಲಿಗೆ ಮುಳ್ಳು ಚುಚ್ಚಿದಾಗ ಕಂಡ ದೇವರು

Exit mobile version