ಪಣಜಿ: ಮಹದಾಯಿ ನದಿಗೆ (Mahadayi Dispute) ಅಡ್ಡಲಾಗಿ ಎರಡು ಅಣೆಕಟ್ಟುಗಳನ್ನು ನಿರ್ಮಿಸುವ ಕರ್ನಾಟಕದ ಸಮಗ್ರ ಯೋಜನಾ ವರದಿಗೆ (ಡಿಪಿಆರ್) ಕೇಂದ್ರ ಸರ್ಕಾರ ಅನುಮೋದನೆ ನೀಡಿರುವುದಕ್ಕೆ ಗೋವಾ ಸರ್ಕಾರ ಕ್ಯಾತೆ ತೆಗೆದಿದೆ. ಡಿಪಿಆರ್‌ಗಳಿಗೆ ಅನುಮೋದನೆ ನೀಡಿರುವುದನ್ನು ವಿರೋಧಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ನಿಯೋಗ ಕೊಂಡೊಯ್ಯಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಮಹದಾಯಿ ನದಿಗೆ ಎರಡು ಜಲಾಶಯ ನಿರ್ಮಿಸುವ ದಿಸೆಯಲ್ಲಿ ಕರ್ನಾಟಕದ ಡಿಪಿಆರ್‌ಗೆ ಕೇಂದ್ರ ಜಲಶಕ್ತಿ ಸಚಿವಾಲಯವು ಅನುಮೋದನೆ ನೀಡಿದೆ ಎಂದು ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ. ಹಾಗಾಗಿ, ಪ್ರಮೋದ್ ಸಾವಂತ್ ಅವರು ಸೋಮವಾರ ಸಂಪುಟ ಸಭೆ ನಡೆಸಿದ್ದು, ಶೀಘ್ರವೇ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಬಳಿ ನಿಯೋಗ ಕರೆದೊಯ್ಯಲು ತೀರ್ಮಾನಿಸಲಾಗಿದೆ.
“ಮಹದಾಯಿ ನದಿ ವಿವಾದದ ವಿಷಯದಲ್ಲಿ ಗೋವಾ ಸರ್ಕಾರ ರಾಜಿ ಆಗುವುದಿಲ್ಲ. ಕಳಸಾ ಹಾಗೂ ಬಂಡೂರಿಯಲ್ಲಿ ಜಲಾಶಯ ನಿರ್ಮಿಸುವುದರಿಂದ ಉತ್ತರ ಗೋವಾದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗುತ್ತದೆ. ಹಾಗಾಗಿ, ಕೇಂದ್ರದ ಬಳಿ ನಿಯೋಗ ತೆರಳಿ, ಡಿಪಿಆರ್ ರದ್ದುಗೊಳಿಸಬೇಕು ಎಂಬುದಾಗಿ ಮನವಿ ಮಾಡಲಾಗುತ್ತದೆ” ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ.
ಇದನ್ನೂ ಓದಿ | Mahadayi issue | ಮಹದಾಯಿ ಸಮಸ್ಯೆಗೆ ಸೋನಿಯಾ ಗಾಂಧಿಯೇ ಕಾರಣ ಎಂದ ಸಿಎಂ ಬಸವರಾಜ ಬೊಮ್ಮಾಯಿ