ಬೆಂಗಳೂರು: ಬೆಂಗಳೂರು ನಗರದಲ್ಲಿ ಮತ್ತೆ ಭಾರಿ ಮೊತ್ತದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳು ಪತ್ತೆಯಾಗಿದೆ. ಅಕಸ್ಮಾತ್ ಚುನಾವಣೆ ನೀತಿ ಸಂಹಿತೆ ಇಲ್ಲದಿದ್ದಲ್ಲಿ ಇನ್ನು ಎಷ್ಟರ ಮಟ್ಟಿಗೆ ದಾಖಲೆಯಿಲ್ಲದ ಚಿನ್ನಾಭರಣ , ನಗದು ನಗರಕ್ಕೆ ಬಂದಿರಬಹುದು ಎಂದು ಊಹಿಸೋದಕ್ಕೂ ಕಷ್ಟವಾಗಿದೆ.
7 ಕೆಜಿ 999 ಗ್ರಾಂ ಚಿನ್ನಾಭರಣ ಹಾಗು 46, ಕೆಜಿ 700 ಗ್ರಾಂ ಬೆಳ್ಳಿ ಅಂದರೆ ಐದು ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ವಿವೇಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೀಝ್ ಮಾಡಲಾಗಿದೆ. ಮೆಲ್ನೋಟಕ್ಕೆ ಇದು ಮತದಾರರಿಗೆ ಹಂಚಲು ತಂದಿರುವ ಶಂಕೆ ವ್ಯಕ್ತವಾಗಿದೆ. ಅದರ ಜತೆಗೆ ಚಿನ್ನಾಭರಣ ಮಳಿಗೆಗಳಿಗೆ ತೆರಿಗೆ ತಪ್ಪಿಸಿ ತರಲಾಗುತ್ತಿರುವ ಚಿನ್ನ, ಬೆಳ್ಳಿಯೂ ಇರಬಹುದು ಎಂಬ ಸಂಶಯವಿದೆ.
ಮಂಗಳವಾರ ರಾತ್ರಿ ವಿವೇಕ್ ನಗರದ ಗಾಂಧಿ ಪ್ರತಿಮೆ ಬಳಿ ಇರುವ ಚೆಕ್ ಪೋಸ್ಟ್ ಬಳಿ ವಾಹನ ಪರಿಶೀಲನೆ ನಡೆಸುತ್ತಿದ್ದ ವೇಳೆ ತಮಿಳುನಾಡು ಮೂಲದ ಈಶರ್ ವಾಹನದಲ್ಲಿ ಚಿನ್ನಾಭರಣ ಸಿಕ್ಕಿತ್ತು.
ಒಂದೇ ಒಂದು ಪತ್ರವನ್ನು ಹಿಡಿದಿದ್ದ ಮೂವರು ವ್ಯಕ್ತಿಗಳು, ಗಾಡಿಯಲ್ಲಿ ಚಿನ್ನಾಭರಣವಿದ್ದು ಅದನ್ನ ನಗರದ ವಿವಿಧೆಡೆ ವಿತರಿಸಲು ಹೋಗುತ್ತಿರುವುದಾಗಿ ಸಬೂಬು ನೀಡಿದ್ದರು. ನಂತರ ವಾಹನದಲ್ಲಿ ಬಾಕ್ಸ್ಗಳನ್ನ ಪರಿಶೀಲನೆ ನಡೆಸಿದಾಗ ಅದರಲ್ಲಿ ಕೆಜಿಗಟ್ಟಲೆ ಬಂಗಾರ, ಬೆಳ್ಳಿಯ ಗಟ್ಟಿಗಳು ಪತ್ತೆಯಾಗಿದ್ದವು. ಇವುಗಳಿಗೆ ಸೂಕ್ತ ದಾಖಲೆಗಳು ಇರಲಿಲ್ಲ.
ಹೆಚ್ಚಿನ ವಿಚಾರಣೆ ನಡೆಸಿದಾಗ ತಮಿಳುನಾಡಿನ ಉದ್ಯಮಿಯೊಬ್ಬನ ಸೂಚನೆಯ ಮೇರೆಗೆ ಹಾಗೂ ಆತ ಕೊಟ್ಟ ಫೋನ್ ನಂಬರ್ನಲ್ಲಿರುವ ವ್ಯಕ್ತಿಯನ್ನು ಸಂಪರ್ಕ ಮಾಡಿ ಚಿನ್ನಾಭರಣ ತಲುಪಿಸಲು ಬಂದಿದ್ದರು ಎನ್ನಲಾಗಿದೆ. ಇನ್ನು ಲಾಜಿಸ್ಟಿಕ್ ಕಂಪನಿಯ ವಾಹನದಲ್ಲಿ ಬಂದಿದ್ದ ಹಿನ್ನೆಲೆಯಲ್ಲಿ ಅದರಲ್ಲಿ ಏನು ವಸ್ತು ಇದೆ ಎಂಬ ವಿಚಾರ ವಾಹನದ ಸಿಬ್ಬಂದಿಗೆ ಗೊತ್ತಿರುವುದಿಲ್ಲ. ಆದ್ರೆ ಇಲ್ಲಿ ವಾಹನ ಚಾಲಕ, ಕ್ಲೀನರ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ವ್ಯಕ್ತಿಗಳಿಗೆ ಅದರಲ್ಲಿ ಚಿನ್ನಾಭರಣವಿರುವ ವಿಚಾರ ಗೊತ್ತಿದೆ. ಇದು ಪೊಲೀಸರಿಗೆ ಸಾಕಷ್ಟು ಅನುಮಾನ ಮೂಡಿಸಿದೆ . ಇನ್ನು ದಾಖಲೆ ಇಲ್ಲದ ನಗದು ಹಾಗು ಚಿನ್ನಾಭರಣ ಸಾಗಾಟ ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ
ಈಗ ಮೂವರನ್ನು ವಶಕ್ಕೆ ಪಡೆದಿರುವ ವಿವೇಕ್ ನಗರ ಪೊಲೀಸರು, ವಿಚಾರಣೆಯನ್ನು ಮುಂದುವರಿಸಿದ್ದಾರೆ. ಹಾಗು ತಮಿಳುನಾಡಿನಲ್ಲಿರುವ ಸಂಬಂಧಪಟ್ಟ ಉದ್ಯಮಿಯನ್ನು ಪೊಲೀಸ್ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ : Gold sieze : 28 ಕೋಟಿ ರೂ. ಮೌಲ್ಯದ 47 ಕೆಜಿ ಬಂಗಾರ ವಶಕ್ಕೆ; ಎಲ್ಲಿಗೆ ಹೋಗುತ್ತಿತ್ತು ಈ ಬೃಹತ್ ಒಡವೆ ರಾಶಿ?