ಬೆಂಗಳೂರು: ಇಲ್ಲಿನ ಆನಂದ್ ರಾವ್ ಸರ್ಕಲ್ (Anand Rao Circle) ಬಳಿ ಅಪರಿಚಿತರಿಬ್ಬರು ಪೊಲೀಸರೆಂದು ಹೇಳಿ 1 ಕೋಟಿ 12 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಯನ್ನು (Gold Theft) ದೋಚಿ ಪರಾರಿ ಆಗಿದ್ದರು. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ (Upparpet Police Station) ದೂರು ದಾಖಲಾಗಿತ್ತು. ಇದೀಗ ತನಿಖೆ ನಡೆಸಿದಾಗ ಆ ಕಳ್ಳರು ಪೊಲೀಸರೆಂದು ತಿಳಿದು ಬಂದಿದೆ. ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್‌ಗಳಾದ (Railway police Constable) ಜ್ಞಾನೇಶ್ ಹಾಗೂ ವಟಾವಟಿ ಬಂಧಿತ ಆರೋಪಿಗಳಾಗಿದ್ದಾರೆ.
ಅಬ್ದುಲ್ ರಜಾಕ್, ಮಲ್ಲಯ್ಯ ಹಾಗೂ ಸುನೀಲ್ ಎಂಬುವವರು ರಾಯಚೂರಿನ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಮಾಲೀಕರ ಸೂಚನೆಯಂತೆ ಚಿನ್ನದ ಗಟ್ಟಿ ಖರೀದಿಗೆ ಬೆಂಗಳೂರಿಗೆ ಸೋಮವಾರ (ಮಾ.13) ಬಂದಿದ್ದರು. ಸುಮಾರು 2 ಕೆ.ಜಿ 200 ಗ್ರಾಂ ತೂಕದ ಚಿನ್ನದ ಗಟ್ಟಿ ಖರೀದಿ ಮಾಡಿ ಬಸ್ಸಿನಲ್ಲಿ ಕುಳಿತಿದ್ದರು.
ಈ ವೇಳೆ ಸುನೀಲ್ ಬಸ್ಸಿನಲ್ಲಿ ಕುಳಿತಿದ್ದರೆ, ಚಿನ್ನದ ಗಟ್ಟಿ ಇದ್ದ ಬ್ಯಾಗ್ ಸಮೇತ ಅಬ್ದುಲ್ ರಜಾಕ್ ಹಾಗೂ ಮಲ್ಲಯ್ಯ ಶೌಚಾಲಯಕ್ಕೆ ಹೊರಟಿದ್ದರು. ಈ ವೇಳೆ ಅಲ್ಲಿಗೆ ಬಂದ ಕಾನ್ಸ್‌ಟೇಬಲ್ ಜ್ಞಾನೇಶ್ ಹಾಗೂ ವಟಾವಟಿ ಐಡಿ ಕಾರ್ಡ್‌ವೊಂದನ್ನು ತೋರಿಸಿ ತಾವು ಸಿವಿಲ್ ಪೊಲೀಸರೆಂದು ಹೇಳಿ ಅವರನ್ನು ತಡೆದಿದ್ದಾರೆ. ಎರಡು ತಿಂಗಳಿನಿಂದ ನೀವೂ ಗೋಲ್ಡ್ ಸ್ಮಗ್ಲಿಂಗ್ ಮಾಡುತ್ತಿದ್ದೀರ ಎಂದು ಬೆದರಿಸಿ, ಥೇಟ್ ಸಿವಿಲ್ ಪೊಲೀಸರಂತೆ ಹಿಂಬದಿ ಪ್ಯಾಂಟ್ ಹಿಡಿದು ಕರೆದೊಯ್ದಿದ್ದರು. ನಂತರ ರೇಸ್ ಕೋರ್ಸ್, ಚೌಡಯ್ಯ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಡಿ ಬಳಿಕ ತಳ್ಳಿ ಆಟೋದಲ್ಲಿ ಪರಾರಿಯಾಗಿದ್ದರು.
ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲು ಮಾಡಲಾಗಿತ್ತು. ಮೊದಲಿಗೆ ಇದು ದೂರುದಾರನ ಕಡೆಯವರೋ ಅಥವಾ ಚಿನ್ನ ನೀಡಿದ್ದ ಬೆಂಗಳೂರಿನ ಶಾಪ್ ಸಿಬ್ಬಂದಿಯ ಕೃತ್ಯ ಎಂಬುದು ಮೇಲ್ನೋಟಕ್ಕೆ ಶಂಕಿಸಲಾಗಿತ್ತು. ಪೊಲೀಸ್ ಡಾಟಾ ಬೇಸ್‌ನಲ್ಲಿರುವ ಮಾಹಿತಿಯನ್ನು ಪರಿಶೀಲಿಸಿದಾಗ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್‌ಗಳೇ ಆರೋಪಿಗಳೆಂದು ತಿಳಿದು ಬಂದಿದೆ.
ಸಿಸಿಟಿವಿಯಲ್ಲಿ ಕಾಣಿಸಿದ್ದ ಮುಖವನ್ನು ಸ್ಕ್ಯಾನ್ ಮಾಡಿ ಸೂಪರ್ ಇಂಪೋಝ್ ಮಾಡಿದಾಗ ಆರೋಪಿಗಳ ಚಹರೆ ಸ್ಪಷ್ಟವಾಗಿತ್ತು. ಆ ಫೋಟೊವನ್ನು ರಾಜ್ಯದ ಎಲ್ಲ ವಿಭಾಗದ ಪೊಲೀಸರ ಡಾಟಾಬೇಸ್‌ನಲ್ಲಿ ಪರಿಶೀಲನೆ ನಡೆಸಿದಾಗ ಅಸಲಿ ಸಂಗತಿ ಹೊರಬಿದ್ದಿದೆ. 2019ರ ಬ್ಯಾಚ್‌ನ ರೈಲ್ವೆ ಪೊಲೀಸ್ ಆಗಿರುವ ಜ್ಞಾನೇಶ್ ಹಾಗು ವಟಾವಟಿ ಚಿನ್ನ ಕದ್ದು ತಮ್ಮ ರೂಂನಲ್ಲಿ ಅಡಿಗಿಸಿಟ್ಟಿದ್ದರು ಎಂಬುದು ಬಳಿಕ ಗೊತ್ತಾಗಿದೆ.
ಇದನ್ನೂ ಓದಿ:Fraud Case: ನಕಲಿ ಐಪಿಎಸ್‌ನಿಂದ ಕೋಟಿ ಕೋಟಿ ಲೂಟಿ; ಅಸಲಿ ಪೊಲೀಸರನ್ನೂ ಯಾಮಾರಿಸಿದ್ದು ಹೇಗೆ?
ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಖುದ್ದು ಡಿಸಿಪಿ ಲಕ್ಷ್ಮಣ ನಿಂಬರಗಿಯವರೇ ವಿಚಾರಣೆ ನಡೆಸುತ್ತಿದ್ದಾರೆ. ಈ ಮೊದಲು ಇಂತಹ ಕೃತ್ಯದಲ್ಲಿ ಭಾಗಿಯಾಗಿದ್ದರಾ ಎಂಬ ಮಾಹಿತಿ ಈಗ ಹೊರ ಬರಬೇಕಿದೆ. ಇದರಲ್ಲಿ ಪೊಲೀಸ್ ಸಿಬ್ಬಂದಿ, ಮೇಲಧಿಕಾರಿಗಳ ಕೈವಾಡ ಇರುವುದರ ಬಗ್ಗೆ ಶಂಕೆ ಹಿನ್ನೆಲೆ ಆರೋಪಿಗಳನ್ನು ಮತ್ತಷ್ಟು ವಿಚಾರಣೆಗೊಳಪಡಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ