Site icon Vistara News

ಸುಶಾಸನ ಮಾಸ | 10 ಸಾವಿರ ಜನರಿಗೆ ಉದ್ಯೋಗ ನೇಮಕಾತಿ ಪತ್ರ ನೀಡಲು ಸಿದ್ಧತೆ

atal bihari vajapayee

ಬೆಂಗಳೂರು: ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ತಮ್ಮ ನೇತೃತ್ವದ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಹಾಗೂ ಜೀವನೋಪಾಯ ಇಲಾಖೆಗಳಲ್ಲಿ ಡಿ.1ರಿಂದ ‘ಸುಶಾಸನ ಮಾಸ’ವನ್ನು ಆಚರಿಸಲಾಗುತ್ತಿದ್ದು, ಹತ್ತು ಸಾವಿರ ಯುವಕರಿಗೆ ಈ ಸಂದರ್ಭದಲ್ಲಿ ಉದ್ಯೋಗಪತ್ರ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸುಶಾಸನ ಮಾಸಾಚರಣೆ ಅಂಗವಾಗಿ ಇಲಾಖೆಗಳಲ್ಲಿನ ಹಲವು ಸುಧಾರಣಾ ಕ್ರಮಗಳನ್ನು ಇಡೀ ತಿಂಗಳು‌ ಜನರಿಗೆ ತಿಳಿಸಲಾಗುತ್ತದೆ. ಡಿ.25 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ಮುಖ್ಯಮಂತ್ರಿ ಭಾಗವಹಿಸಲಿದ್ದಾರೆ. ಹಲವು ಮಹತ್ವದ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಐಟಿಬಿಟಿ ಮತ್ತು ಕೌಶಲಾಭಿವೃದ್ಧಿ ಇಲಾಖೆ ಮುಂದಾಗಿದೆ.

ಈ ಸಂಬಂಧವಾಗಿ ಹಮ್ಮಿಕೊಳ್ಳಬೇಕಿರುವ ಕಾರ್ಯಕ್ರಮಗಳನ್ನು ಕುರಿತು ಚರ್ಚಿಸಲು ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ, ಮೂರೂ ಇಲಾಖೆಗಳ ಉನ್ನತಾಧಿಕಾರಿಗಳ ಜತೆ ಗುರುವಾರ ಸಭೆ ನಡೆಸಿದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಂಪೂರ್ಣವಾಗಿ ಹೊಸ ರೂಪ ನೀಡಲಾಗುವುದು. ಜತೆಗೆ ಕೌಶಲಾಭಿವೃದ್ಧಿ ಇಲಾಖೆಯ ಮೂಲಕ 10 ಸಾವಿರ ಜನರಿಗೆ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗ ಕೊಡಿಸುವ ಸಂಬಂಧ ನೇಮಕಾತಿ ಪತ್ರಗಳನ್ನು ನೀಡಲಾಗುವುದು.

ಹಾಗೆಯೇ, ಜಿಟಿಟಿಸಿ ಸುವರ್ಣ ಸಂಭ್ರಮದ ಅಂಗವಾಗಿ ಕಟ್ಟಿರುವ ನೂತನ ಕಟ್ಟಡವನ್ನು ಈ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುವುದು. ಅಲ್ಲದೆ, ತಾಂತ್ರಿಕ ಶಿಕ್ಷಣ ಇಲಾಖೆಗೆ ನೇಮಕಾತಿ ಮತ್ತು ವೃಂದ ನಿಯಮಗಳನ್ನು 15 ವರ್ಷಗಳ ನಂತರ ರೂಪಿಸಲಾಗುತ್ತಿದೆ ಎಂದು ಅಶ್ವತ್ಥನಾರಾಯಣ ತಿಳಿಸಿದರು.

ಸುಶಾಸನ ಮಾಸಾಚರಣೆಯ ಅಂಗವಾಗಿ, ಉತ್ತಮ ವಿ.ವಿ.ಗಳು ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿ ಗಳನ್ನು ನೀಡುವ ಉದ್ದೇಶ ಇದೆ. ಎಲ್ಲ ಕಾಲೇಜುಗಳಲ್ಲೂ ಎನ್‌ಇಪಿ ಮತ್ತು ಅದರ ಪ್ರಗತಿ ಕುರಿತು ಪ್ರಬಂಧ ಮತ್ತು ಚರ್ಚಾಸ್ಪರ್ಧೆಗಳನ್ನು ಆಯೋಜಿಸಲು ಸಚಿವರು ಸೂಚಿಸಿದರು. ಜತೆಗೆ, ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಏಳು ಹೊಸ ವಿ.ವಿ.ಗಳಲ್ಲಿ ಆಗಬೇಕಿರುವ ಹುದ್ದೆಗಳ ನೇಮಕಾತಿಗೆ ಅನುಮೋದನೆ ಕೊಡಲಾಗುವುದು ಎಂದು ವಿವರಿಸಿದರು.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಾಧ್ಯಾಪಕರ ಬಡ್ತಿ ಇತ್ಯಾದಿ ವಿಚಾರಗಳು ಬಹುಕಾಲದಿಂದ ನನೆಗುದಿಗೆ ಬಿದ್ದಿವೆ. ಸುಶಾಸನ ಮಾಸಾಚರಣೆ ಸಂದರ್ಭದಲ್ಲಿ ಅವುಗಳನ್ನು ಬಗೆಹರಿಸಲಾಗುವುದು. ಇದರ ಜತೆಗೆ ಸುಗಮ ಮತ್ತು ಉತ್ತಮ ಆಡಳಿತದ ಅಂಗವಾಗಿ ತಂದಿರುವ ಸಮಗ್ರ ವಿವಿ ನಿರ್ವಹಣಾ ತಂತ್ರಾಂಶದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಇದನ್ನೂ ಓದಿ | Voter Data | ಕಾಡು, ಬೆಟ್ಟ, ನಾಡು ನುಂಗಿದ ಜೇಬು ಕಳ್ಳರಿವರು: ಡಿಕೆಶಿ ವಿರುದ್ಧ ಸಚಿವ ಅಶ್ವತ್ಥನಾರಾಯಣ ಕಿಡಿ

Exit mobile version