ಚಿತ್ರದುರ್ಗ: ಪ್ರಸಕ್ತ ಸಾಲಿನ ವಿಧಾನಸಭಾ ಚುನಾವಣೆ (Karnataka Election 2023) ಸಂಬಂಧ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ ಟಿಕೆಟ್ ವಂಚಿತರಿಂದ ಬಂಡಾಯದ ಬಾವುಟ ಹಾರಿದೆ. ಹೊಸದುರ್ಗದ ಹಾಲಿ ಶಾಸಕ ಗೂಳಿಹಟ್ಟಿ ಶೇಖರ್‌ಗೆ (Goolihatti Shekhar) ಟಿಕೆಟ್ ಕೈತಪ್ಪುತ್ತಿದ್ದಂತೆ ಆಕ್ರೋಶಗೊಂಡಿದ್ದು, ಮಾಜಿ ಸಚಿವ ಜನಾರ್ದನ ರೆಡ್ಡಿಯ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕೆ ಸೇರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ನಡುವೆ ಮಾತನಾಡಿರುವ ಗೂಳಿಹಟ್ಟಿ, ತಮಗೆ ಟಿಕೆಟ್ ತಪ್ಪಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yadiyurappa) ಅವರೇ ನೇರ ಕಾರಣ ಎಂದು ಹರಿಹಾಯ್ದಿದ್ದಾರೆ.
ಈ ಬಗ್ಗೆ ಹೊಸದುರ್ಗದ ಕಣಿವೆ ರಂಗನಾಥ ಸ್ವಾಮಿ ಸನ್ನಿಧಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ತಮ್ಮ ಶಿಷ್ಯ ಎಸ್. ಲಿಂಗಮೂರ್ತಿಗೆ ಟಿಕೆಟ್ ಕೊಡಿಸಿದ್ದಾರೆ. ನಾನು ಎಸ್‌ಸಿ ಸಮುದಾಯ ಎಂಬ ಕಾರಣಕ್ಕೆ ನಿರ್ಲಕ್ಷ್ಯ ಮಾಡಿದ್ದಾರೆ. ಲಿಂಗಾಯಿತರು ಹೆಚ್ಚಿರುವ ಕ್ಷೇತ್ರದಲ್ಲಿ ಎಸ್‌ಸಿ ಅಭ್ಯರ್ಥಿ ಗೆಲ್ಲುವುದನ್ನು ಸಹಿಸಲು ಬಿಜೆಪಿಗೆ ಆಗುತ್ತಿಲ್ಲ. ಬಿಜೆಪಿಯಲ್ಲಿ ಅವರವರ ಬೆಂಬಲಿಗರಿಗೆ ಟಿಕೆಟ್ ಕೊಡಿಸುತ್ತಾರೆ. ನನಗೆ ಯಾವ ಗಾಡ್‌ಫಾದರ್ ಇಲ್ಲ. ಅದಕ್ಕೆ ಟಿಕೆಟ್ ಸಿಕ್ಕಿಲ್ಲ. ನಾನು ಪಕ್ಷೇತರ ಅಥವಾ ಜನಾರ್ದನ ರೆಡ್ಡಿ ಪಕ್ಷದಿಂದ ಕಣಕ್ಕೆ ಇಳಿಯೋದು ಖಚಿತ ಎಂದು ಹೇಳಿದರು.
ಇದನ್ನೂ ಓದಿ: Success Story: ಪಾನ್ ಶಾಪ್ ಮಾಲೀಕನ ಮಗಳೀಗ ಮ್ಯಾಜಿಸ್ಟ್ರೇಟ್, ತಂದೆಯ ಕನಸಿಗೆ ‘ಜ್ಯೋತಿ’ಯಾದ ದಿಟ್ಟೆ
ನನ್ನ ಪವರ್ ಏನು ಅಂತ ಕ್ಷೇತ್ರದ ಜನರಿಗೆ ಗೊತ್ತಿದೆ. 2008ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದವನು ನಾನು. ಕ್ಷೇತ್ರದ ಮತದಾರರೇ ನನಗೆ ಲೀಡರ್ಸ್. ನಾನು ಈಗಾಗಲೇ ಜನಾರ್ದನ ರೆಡ್ಡಿ ಜತೆ ಮಾತನಾಡಿದ್ದೇನೆ. ಸಂಜೆ ಒಳಗೆ ತೀರ್ಮಾನ ಮಾಡುತ್ತೇವೆ. ಏಪ್ರಿಲ್ 17ರಂದು ನಾಮಪತ್ರ ಸಲ್ಲಿಕೆ ಮಾಡುವುದು ಖಚಿತ ಎಂದು ಹೇಳಿದರು.
ಕಾರ್ಯಕರ್ತರ ಜತೆಗೆ ಸಭೆ
ಗೂಳಿಹಟ್ಟಿ ಶೇಖರ್‌ಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರ ಜತೆ ಹಾರನಕಣಿವೆ ರಂಗನಾಥಸ್ವಾಮಿ ದೇಗುಲದ ಬಳಿ ಗೂಳಿಹಟ್ಟಿ ಶೇಖರ್ ಸಭೆ ನಡೆಸಿದ್ದಾರೆ. ಈ ವೇಳೆ ತಮಗೆ ಅನ್ಯಾಯವಾಗಿದೆ ಎಂದು ಕಾರ್ಯಕರ್ತರ ಮುಂದೆ ನೋವು ತೋಡಿಕೊಂಡಿದ್ದಾರೆ. ಯಡಿಯೂರಪ್ಪ ಸಿಎಂ ಆಗೋಕೆ ನಾನೇ ಕಾರಣ. ಯಾವುದೇ ಷರತ್ತು ಇಲ್ಲದೆ ಅವರಿಗೆ ಬೆಂಬಲಿಸಿ ಹೋದೆ. ಆದರೆ, ಇಂದು ನನಗೆ ಟಿಕೆಟ್ ಕೈ ತಪ್ಪಿಸುವ ಕೆಲಸ ಮಾಡಿದ್ದಾರೆ. ಪಕ್ಷ ನನಗೆ ಕೊಟ್ಟ ಕಷ್ಟ ನನಗೆ ಮಾತ್ರ ಗೊತ್ತಿದೆ. ಅದಕ್ಕೆಲ್ಲ ಈಗ ಉತ್ತರ ಕೊಡುವ ಸಮಯ ಬಂದಿದೆ. ಈ ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ನನ್ನನ್ನು ಗೆಲ್ಲಿಸಿ ಉತ್ತರ ಕೊಡಬೇಕು. ನನಗೆ ಯಾವ ಹೈಕಮಾಂಡ್ ನಾಯಕರೂ ಗೊತ್ತಿಲ್ಲ ಎಂದು ಹೇಳಿದರು.
ಪುಕ್ಕಟೆಯಾಗಿ ಬಿಜೆಪಿಗೆ ಹೋಗಿದ್ದ ಕಾರಣಕ್ಕೆ ನನಗೆ ಅಹಂಕಾರ ಜಾಸ್ತಿ. ನಾನು ಏನೂ ಕೇಳದೆ ಬಿಎಸ್‌ವೈ ಸಿಎಂ ಆಗುವುದಕ್ಕೆ ಕೈ ಎತ್ತಿದೆ. ಇಂದು ಕೆಲವರು ಹುನ್ನಾರ ನಡೆಸಿ ಟಿಕೆಟ್ ತಪ್ಪಿಸಿದ್ದಾರೆ. ಅದಕ್ಕೆಲ್ಲ ಉತ್ತರ ಕೊಡುವ ಕಾಲ ಈಗ ಬಂದಿದೆ. ನಾನು ಉತ್ತರ ಕೊಡುತ್ತೇನೆ. ನೀವೇ ನನಗೆ ಲೀಡರ್ಸ್. ನನ್ನ ಜತೆಗೆ ನೀವು ಸದಾ ಇರಬೇಕು. ನಿಮ್ಮ ಮಾತೇ ನನಗೆ ವೇದವಾಕ್ಯ ನೀವೇನು ಹೇಳುತ್ತೀರೋ ಅದನ್ನೇ ಕೇಳುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ: JDS Karnataka: ಜೆಡಿಎಸ್‌ಗೆ ಮರಳಲು ವೈಎಸ್‌ವಿ ದತ್ತ ಪ್ರಯತ್ನ: ದೇವೇಗೌಡರಿಂದಲೂ ಸಿಗಲಿಲ್ಲ ಭರವಸೆ
ಕೆಆರ್‌ಪಿಪಿ ಸೇರ್ಪಡೆಗೆ ಮಾತುಕತೆ
ಈಗಾಗಲೇ ಬಿಜೆಪಿ ತೊರೆಯಲು ಮುಂದಾಗಿರುವ ಗೂಳಿಹಟ್ಟಿ ಶೇಖರ್ ಅವರು ಜನಾರ್ದನ ರೆಡ್ಡಿ ಅವರ ಕೆಆರ್‌ಪಿಪಿ ಪಕ್ಷ ಸೇರಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ರೆಡ್ಡಿ ಜತೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದ್ದು, ಇನ್ನೆರಡು ದಿನಗಳಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲು ತೀರ್ಮಾನಿಸಿದ್ದಾರೆ. ಇನ್ನು ಗೂಳಿಹಟ್ಟಿಗೆ ಟಿಕೆಟ್ ನೀಡಲು ಜನಾರ್ದನ ರೆಡ್ಡಿ ಒಪ್ಪಿಗೆ ನೀಡಿದ್ದು, ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡಲು ನಿರ್ಧಾರ ಮಾಡಿದ್ದಾರೆಂದು ತಿಳಿದುಬಂದಿದೆ.