Site icon Vistara News

ಪೌರ ಕಾರ್ಮಿಕರ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿಗೆ; ಲಿಖಿತ ಭರವಸೆಗೆ ಸಂಘಟನೆಗಳ ಪಟ್ಟು

ಸರ್ಕಾರ

ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ನಡೆದ ಪೌರಕಾರ್ಮಿಕರ ಪ್ರತಿಭಟನೆ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಕುರಿತು ಸಭೆ ನಡೆಸಿ, ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಕುರಿತು ಕ್ರಮ ತೆಗೆದುಕೊಳ್ಳಲು ಸಮಿತಿ ರಚಿಸುವುದಾಗಿ ಸಿಎಂ ಭರವಸೆ ನೀಡಿದ್ದರೂ, ಎಲ್ಲವನ್ನೂ ಲಿಖಿತವಾಗಿ ನೀಡುವವರೆಗೂ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಸಂಘಟನೆಗಳು ಹೇಳಿವೆ.

ನಗರದ ಗೃಹ ಕಚೇರಿ ಕೃಷ್ಣಾದಲ್ಲಿ ಪೌರಕಾರ್ಮಿಕರ ಸಮಸ್ಯೆಗಳನ್ನು ಚರ್ಚಿಸಲು ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಿತು. ಈ ವೇಳೆ ಸಿಎಂ ಬೊಮ್ಮಾಯಿ ಮಾತನಾಡಿ, ರಾಜ್ಯದಲ್ಲಿ ಬಿಬಿಎಂಪಿ ಹಾಗೂ ಇತರ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನೇರ ಪಾವತಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಲು ಸರ್ಕಾರದ ತಾತ್ವಿಕ ಒಪ್ಪಿಗೆ ಇದೆ. ಇದನ್ನು ಕಾನೂನುಬದ್ಧವಾಗಿ ಜಾರಿಗೊಳಿಸಲು ಸರ್ಕಾರದ ಹಿರಿಯ ಅಧಿಕಾರಿಗಳು, ಕಾನೂನು ಇಲಾಖೆ ಹಾಗೂ ಪೌರ ಕಾರ್ಮಿಕರ ಪ್ರತಿನಿಧಿಗಳನ್ನೊಳಗೊಂಡ ಸಮಿತಿ ರಚಿಸಲಾಗುವುದು, ಈ ಸಮಿತಿಯು ಮೂರು ತಿಂಗಳೊಳಗೆ ವರದಿ ಸಲ್ಲಿಸಲಿದೆ ಎಂದು ತಿಳಿಸಿದ್ದಾರೆ.

ಪೌರಕಾರ್ಮಿಕರಿಗೆ ಸಾಮಾಜಿಕವಾಗಿ ಗೌರವ, ಸೌಲಭ್ಯ ಹಾಗೂ ಸುರಕ್ಷತೆ ಅಗತ್ಯ ಎನ್ನುವುದು ಸರ್ಕಾರಕ್ಕೆ ಮನವರಿಕೆಯಾಗಿದೆ. ಸರ್ಕಾರವು ಪೌರಕಾರ್ಮಿಕರ ಸಮಸ್ಯೆಗಳಿಗೆ ಮಾನವೀಯತೆಯಿಂದ ಸ್ಪಂದಿಸಲಿದೆ. ಈ ಉದ್ದೇಶದಿಂದಲೇ ಆಯವ್ಯಯದಲ್ಲಿ ಪೌರಕಾರ್ಮಿಕರಿಗೆ ಮಾಸಿಕ 2000 ರೂ. ಸಂಕಷ್ಟ ಭತ್ಯೆ ಘೋಷಿಸಿದ್ದು, ಇಂದಿನ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದರೊಂದಿಗೆ ಪೌರಕಾರ್ಮಿಕರ ನೇಮಕಾತಿ ಸರಳೀಕರಣಗೊಳಿಸಲು ವಿಶೇಷ ನೇಮಕಾತಿ ನಿಯಮಗಳನ್ನು ರೂಪಿಸಲಾಗುವುದು ಹಾಗೂ ನೇಮಕಾತಿ ನೀತಿಯನ್ನೂ ಜಾರಿಗೆ ತರಲಾಗುವುದು. ಈ ಸಂದರ್ಭದಲ್ಲಿ ಐ.ಪಿ.ಡಿ. ಸಾಲಪ್ಪ ವರದಿ, ಚಂದ್ರಶೇಖರ್ ಸಮಿತಿ ವರದಿ ಹಾಗೂ ರಾಷ್ಟ್ರೀಯ ಕಾನೂನು ಶಾಲೆಯ ವರದಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಜೊತೆಗೆ ಬೇರೆ ರಾಜ್ಯಗಳಲ್ಲಿ ನೀಡಲಾಗುತ್ತಿರುವ ಸೌಲಭ್ಯಗಳ ಮಾಹಿತಿಯನ್ನೂ ಪಡೆಯಲು ಸೂಚಿಸಿದರು.

ಇದರೊಂದಿಗೆ ಪೌರಕಾರ್ಮಿಕರಿಗೆ ಪ್ರತ್ಯೇಕವಾಗಿ ಗೃಹಭಾಗ್ಯ ಯೋಜನೆ ಜಾರಿಗೊಳಿಸಲು ಹೊಸದಾಗಿ ಮಂಜೂರಾತಿ ನೀಡಲಾಗುವುದು. ಪೌರಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ರೈತವಿದ್ಯಾನಿಧಿ ಮಾದರಿಯಲ್ಲಿ ವಿದ್ಯಾರ್ಥಿ ವೇತನ ನೀಡಲಾಗುವುದು. ಪೌರಕಾರ್ಮಿಕ ಮಹಿಳೆಯರಿಗೆ ಸರ್ಕಾರಿ ನೌಕರರಿಗೆ ನೀಡುವಂತೆ ಹೆರಿಗೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು. ಎಲ್ಲ ನಗರ ಸ್ಥಳೀಯ ಸಂಸ್ಥೆಗಳು ಪೌರಕಾರ್ಮಿಕರಿಗೆ ವಿಶ್ರಾಂತಿ ಕೊಠಡಿ, ಶೌಚಾಲಯ ಸೌಲಭ್ಯ ಒದಗಿಸಬೇಕು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‍ನಲ್ಲಿ ಒಂದು ಅಥವಾ ಎರಡು ವಿಶ್ರಾಂತಿ ಕೊಠಡಿಗಳನ್ನು ನಿರ್ಮಿಸಲು ಸೂಚಿಸಿದರು.

ಸಭೆಯಲ್ಲಿ ಸಚಿವರಾದ ಎಂ.ಟಿ.ಬಿ.ನಾಗರಾಜ್, ಬಿ.ಎ. ಬಸವರಾಜ, ಮುನಿರತ್ನ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ, ಅಖಿಲ ಕರ್ನಾಟಕ ಪೌರಕಾರ್ಮಿಕರ ಮಹಾಸಭೆಯ ಅಧ್ಯಕ್ಷ ನಾರಾಯಣ ಮತ್ತು ಇತರ ಸಂಘಟನೆಗಳ ಪ್ರತಿನಿಧಿಗಳು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ ಪ್ರಸಾದ್, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪೌರಕಾರ್ಮಿಕರು ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸಿಎಂ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ.

ಭೈರತಿ ಬಸವರಾಜ, ನಗರಾಭಿವೃದ್ಧಿ ಸಚಿವ

ಲಿಖಿತ ಭರವಸೆ ಕೊಡಿ

ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿರುವ ಪೌರಕಾರ್ಮಿಕರನ್ನು ಕಾಯಂಗೊಳಿಸಬೇಕು ಎಂದು ನಾವು ಸರ್ಕಾರಕ್ಕೆ ಒತ್ತಾಯಿಸಿದ್ದೆವು. ಸಿಎಂ ಮೂರು ತಿಂಗಳ ಒಳಗಡೆ ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದು, ಮನೆ ಕಟ್ಟಲು ಹಾಗೂ ಶಿಕ್ಷಣಕ್ಕೆ ನೆರವು ನೀಡುವುದಾಗಿ ತಿಳಿಸಿರುವುದಾಗಿ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ನಾರಾಯಣ ಹೇಳಿದರು.

ಐಪಿಡಿ ಸಾಲಪ್ಪ ಅವರ ವರದಿ ಪ್ರಕಾರ 700 ಜನಕ್ಕೆ ಒಬ್ಬ ಪೌರ ಕಾರ್ಮಿಕ ಇದ್ದು, ಅದನ್ನು 500 ಜನಕ್ಕೆ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಎಲ್ಲ ಬೇಡಿಕೆ ಈಡೇರಿಸುವವರೆಗೂ ಸಮಾನ‌ ಕೆಲಸಕ್ಕೆ ಸಮಾನ ವೇತನ ನೀಡಲು ಮನವಿ ಮಾಡಿದ್ದೇವೆ. ಕಾರ್ಮಿಕ ಇಲಾಖೆ ಅಧಿಕಾರಿಗಳ ಜತೆಗೆ ಮಾತನಾಡುತ್ತೇನೆಂದು ಸಿಎಂ ತಿಳಿಸಿದ್ದಾರೆ. ಸದ್ಯ ಎಲ್ಲ ಬೇಡಿಕೆಗೆ ಅವರು ಮೌಖಿಕವಾಗಿ ಒಪ್ಪಿಕೊಂಡಿದ್ದಾರೆ. ಆದರೆ ನಮಗೆ ಸಿಎಂ ಲಿಖಿತಪೂರ್ವಕವಾಗಿ ಭರವಸೆ ಕೊಟ್ಟರೆ ಮಾತ್ರವೇ ಪ್ರತಿಭಟನೆ ನಿಲ್ಲುಸುತ್ತೇವೆ ಎಂದು ನಾರಾಯಣ ತಿಳಿಸಿದ್ದಾರೆ.

ಇದನ್ನೂ ಓದಿ | ಶಿಂಧೆ ಸಿಎಂ ಆದ ಬೆನ್ನಲ್ಲೇ ಶರದ್‌ ಪವಾರ್‌ಗೆ ಬಂತು ಐಟಿ ‌ ʻಲವ್‌ ಲೆಟರ್‌ʼ, ಇ.ಡಿ ಮುಂದೆ ಹಾಜರಾದ ಸಂಜಯ್‌ ರಾವತ್‌

Exit mobile version