Site icon Vistara News

Govt Employees Strike: ಬೊಮ್ಮಾಯಿ ಭರವಸೆಗೆ ಜಗ್ಗದ ನೌಕರರ ಸಂಘ, ಬುಧವಾರ ಮುಷ್ಕರ ನಿಶ್ಚಿತ; ಷಡಾಕ್ಷರಿ ಸ್ಪಷ್ಟೋಕ್ತಿ

Bommai Shadakshari

Bommai Shadakshari

ಬೆಂಗಳೂರು: ಏಳನೇ ವೇತನ ಆಯೋಗದ ಜಾರಿ ಹಾಗೂ ಹೊಸ ಪಿಂಚಣಿ ರದ್ದುಗೊಳಿಸಿ ಹಳೆಯ ಪಿಂಚಣಿ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂಬ ಬೇಡಿಕೆಯಿಂದ ಒಂದು ಹೆಜ್ಜೆಯೂ ಹಿಂದಿಡದಿರಲು ತೀರ್ಮಾನಿಸಿರುವ ರಾಜ್ಯ ಸರ್ಕಾರಿ ನೌಕರರ ಸಂಘವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆಗಿನ ಸಭೆಯ ಬಳಿಕವೂ ಬುಧವಾರ ರಾಜ್ಯಾದ್ಯಂತ ಕೆಲಸಕ್ಕೆ ಗೈರಾಗುವ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ (Govt Employees Strike) ಆರಂಭಿಸಲು ತೀರ್ಮಾನಿಸಿದೆ.

ಮಂಗಳವಾರ ರಾತ್ರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ನೌಕರರ ಸಂಘದ ಮುಖಂಡರು ಸಭೆ ನಡೆಸಿದರು. ಏಳನೇ ವೇತನ ಆಯೋಗದ ಜಾರಿ ಕುರಿತು ಮಧ್ಯಂತರ ವರದಿ ತರಿಸಿಕೊಂಡು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಸರ್ಕಾರಕ್ಕೆ ಒಂದಷ್ಟು ಸಮಯ ಬೇಕು ಎಂಬುದಾಗಿ ಸಿಎಂ ಭರವಸೆ ನೀಡಿದರು. ಆದರೆ, ಇದಾದ ಬಳಿಕ ಕಬ್ಬನ್‌ ಪಾರ್ಕ್‌ನಲ್ಲಿರುವ ಸರ್ಕಾರಿ ನೌಕರರ ಭವನದಲ್ಲಿ ನಡೆದ 108 ಸಂಘಟನೆಗಳ ಪದಾಧಿಕಾರಿಗಳ ಸಭೆಯಲ್ಲಿ, ಮುಷ್ಕರ ಕೈಬಿಡದಿರುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

“ಬಸವರಾಜ ಬೊಮ್ಮಾಯಿ ಅವರು ನಮ್ಮ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ. ಆದರೆ, ನಮಗೆ ಆಯೋಗದ ವರದಿ ಜಾರಿ ಸೇರಿ ಎಲ್ಲ ಬೇಡಿಕೆಗಳ ಈಡೇರಿಕೆ ಕುರಿತು ಆದೇಶ ಹೊರಡಿಸುವವರೆಗೆ ಮುಷ್ಕರ ನಿಲ್ಲಿಸುವುದಿಲ್ಲ.‌ ಬುಧವಾರ ನಿಗದಿಯಂತೆ ಮುಷ್ಕರ ನಡೆಯುತ್ತದೆ. ಪದಾಧಿಕಾರಿಗಳ ಸಭೆಯಲ್ಲಿ ಇದೇ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ರಾಜ್ಯ ನೌಕರರ ಸಂಘದ ಅಧ್ಯಕ್ಷ ಎಸ್‌.ಷಡಾಕ್ಷರಿ ಸಭೆ ಬಳಿಕ ತಿಳಿಸಿದರು.

ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ಸರ್ಕಾರ- ನೌಕರರ ಬಿಕ್ಕಟ್ಟು ಸುಖಾಂತ್ಯಗೊಳ್ಳಲಿ, ಆಡಳಿತ ಯಂತ್ರ ಸ್ತಬ್ಧವಾಗದಿರಲಿ

Exit mobile version