Site icon Vistara News

Government Order : ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ 11 ಎಕರೆ ಭೂಮಿ; ಸರ್ಕಾರದಿಂದ ಆದೇಶ

11 acres of land to Rashtrothtana Parishad for educational purpose; Order from Govt

rss

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಕೊನೆಯ ಸಚಿವ ಸಂಪುಟ ಸಭೆಯಲ್ಲಿ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ಗೆ ಒಟ್ಟು 11 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ನೀಡುವ ತೀರ್ಮಾನ ತೆಗೆದುಕೊಂಡಿದ್ದು, ಅಧಿಕೃತ ಆದೇಶ (Government Order) ಹೊರಬಿದ್ದಿದೆ.

ಚಾಮರಾಜನಗರ ಜಿಲ್ಲೆ ಕಸಬಾ ಹೋಬಳಿ ಯಡಪುರ ಗ್ರಾಮದ ಸರ್ವೇ ನಂಬರ್‌ 124ರಲ್ಲಿನ ಐದು ಎಕರೆ ಗೋಮಾಳ ಜಮೀನನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿದೆ. ಕೃಷಿಯೇತರ ಪ್ರಚಲಿತ ಮಾರುಕಟ್ಟೆ ಮೌಲ್ಯದ ಶೇ.100ರಷ್ಟು ಮತ್ತು ಇನ್ನಿತರೆ ಶಾಸನಬದ್ದ ಶುಲ್ಕಗಳನ್ನು ವಿಧಿಸಿ ಮಂಜೂರು ಮಾಡಲಾಗಿದೆ.

ಸರ್ಕಾರದ ಆದೇಶ

ಮಂಜೂರು ಮಾಡಿರುವ ಜಮೀನನ್ನು ಎರಡು ವರ್ಷಗಳ ಒಳಗಾಗಿ ಶೈಕ್ಷಣಿಕ ಉದ್ದೇಶಕ್ಕೆ ಬಳಸಬೇಕು. ಇದನ್ನು ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆ ನೀಡುವುದಾಗಲೀ, ಅಡಮಾನ ವರ್ಗಾವಣೆ, ದಾನ ಇತರೆ ಯಾವುದೇ ಪರಭಾರೆಯನ್ನು ಮಾಡುವಂತಿಲ್ಲ ಎಂದು ಷರುತ್ತು ವಿಧಿಸಲಾಗಿದೆ.

ಇದೇ ರೀತಿಯಾಗಿ ಚಿಕ್ಕಮಗಳೂರು ಜಿಲ್ಲೆ ಕಸಬಾ ಹೋಬಳಿ, ಹಿರೇಮಗಳೂರು ಗ್ರಾಮದ ಸರ್ವೇ ನಂಬರ್‌ 544ರಲ್ಲಿನ ಆರು ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ತಿಗೆ ಗುತ್ತಿಗೆ ನೀಡಿರುವುದನ್ನು 30 ವರ್ಷಗಳಿಗೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.

ಈ ಬಗ್ಗೆ ಮಾ.24 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಏ.1 ರಂದು ಅಧಿಕೃತ ಆದೇಶ ಹೊರಬಿದ್ದಿದೆ.

ಭೂಮಿ ನೀಡಿಕೆ ಷರತ್ತುಗಳೇನು?

  1. ಮಂಜೂರು ಮಾಡಿರುವ ಜಮೀನನ್ನು, ಯಾವ ಉದ್ದೇಶಕ್ಕಾಗಿ ಗುತ್ತಿಗೆ ನೀಡಲಾಗಿದೆಯೋ ಅದೇ ಉದ್ದೇಶಕ್ಕಾಗಿ ಎರಡು ವರ್ಷಗಳ ಒಳಗಾಗಿ ಉಪಯೋಗಿಸತಕ್ಕದ್ದು.
  2. ಮಂಜೂರು ಮಾಡಿರುವ ಜಮೀನನ್ನು ವಿನಾಶಕಾರಿಯಾದ ಅಥವಾ ಕಾಯಂ ಆಗಿ ಹಾನಿಕಾರಕವಾಗುವ ರೀತಿಯಲ್ಲಿ ಬಳಸತಕ್ಕದ್ದಲ್ಲ.
  3. ಮಂಜೂರು ಮಾಡಿರುವ ಜಮೀನಿನಲ್ಲಿ ಯಾವುದೇ ರೀತಿಯ ಅತಿಕ್ರಮಣವಾಗದಂತೆ ಕ್ರಮವಹಿಸತಕ್ಕದ್ದು.
  4. ಮಂಜೂರು ಮಾಡಿರುವ ಜಮೀನನ್ನು ಕಂದಾಯ ಇಲಾಖೆಯ ಅನುಮತಿ ಇಲ್ಲದೆ ಮಾರಾಟ ಮಾಡುವುದಾಗಲೀ, ಗುತ್ತಿಗೆ/ಉಪಗುತ್ತಿಗೆ ನೀಡುವುದಾಗಲೀ, ಅಡಮಾನ, ವರ್ಗಾವಣೆ, ದಾನ, ಇತರ ಯಾವುದೇ ರೀತಿಯ ಪರಭಾರೆಯನ್ನು ಮಾಡತಕ್ಕದ್ದಲ್ಲ.
  5. ಮಂಜೂರು ಮಾಡಿರುವ ಜಮೀನು ಸಂಸ್ಥೆಗೆ ಅವಶ್ಯವಿಲ್ಲವೆಂದು ಕಂಡುಬಂದಲ್ಲಿ ಕಂದಾಯ ಇಲಾಖೆಗೆ ಹಿಂದಿರುಗಿಸತಕ್ಕದ್ದು.
  6. ಮಂಜೂರು ಮಾಡಿರುವ ಜಮೀನಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪ್ರಾರಂಭಿಸುವ ಪೂರ್ವದಲ್ಲಿ ಶಾಸನಬದ್ಧವಾಗಿ ಪಡೆಯಬೇಕಾದ ಪರವಾನಿಗೆಗಳನ್ನು ಸಂಬಂಧಿತ ಪ್ರಾಧಿಕಾರಗಳಿಂದ ಪಡೆಯತಕ್ಕದ್ದು ಹಾಗೂ ನಿಯಮಾನುಸಾರ ಪಾವತಿಸಬೇಕಾದ ಎಲ್ಲಾ ರೀತಿಯ ಶುಲ್ಕಗಳನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
  7. ಈ ಆದೇಶವು ಕರ್ನಾಟಕ ಭೂ ಮಂಜೂರಾತಿ ನಿಯಮಗಳು, 1969ರ ನಿಯಮಗಳಿಗೆ ಆದೇಶವನ್ನು ಬದ್ಧವಾಗಿದ್ದು, ಸದರಿ ನಿಯಮಗಳ ಉಲ್ಲಂಘನೆಯಾದಲ್ಲಿ ಈ ನಿಯಮಾನುಸಾರ ರದ್ದುಗೊಳಿಸಲಾಗುವುದು ಹಾಗೂ ಯಾವುದೇ ಪರಿಹಾರ ನೀಡದೇ ಈ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗುವುದು.

ಮಂಜೂರು ಮಾಡಿರುವ ಜಮೀನನ್ನು ಸಂಸ್ಥೆಗೆ ಹಸ್ತಾಂತರಿಸುವಾಗ ಪ್ರದೇಶದ ವಾಸ್ತವ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾಧಿಕಾರಿಯವರು ಪೂರಕವಾದ ಷರತ್ತುಗಳನ್ನು ವಿಧಿಸಬಹುದಾಗಿದೆ ಎಂದೂ ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ.

ಇದನ್ನೂ ಓದಿ : BJP Karnataka: 40% ಆರೋಪ ಮಾಡಿದವರು ಯಾವುದೇ ದಾಖಲೆ ನೀಡಿಲ್ಲ: ಇದು ಕಾಂಗ್ರೆಸ್‌ ಕುತಂತ್ರ ಎಂದ ಸಿಎಂ ಬೊಮ್ಮಾಯಿ

Exit mobile version