Site icon Vistara News

Reservation : ಮೀಸಲಾತಿ ಒಪ್ಪಿಕೊಳ್ಳಲು ಸ್ವಾಮೀಜಿಗಳಿಗೆ 25 ಬಾರಿ ಫೋನ್‌ ಮಾಡಿ ಒತ್ತಡ: ಡಿಕೆಶಿ ಆರೋಪ, ಬಿಜೆಪಿ ತಿರುಗೇಟು

DKS Ashok R

#image_title

ಬೆಂಗಳೂರು: ರಾಜ್ಯ ಸರ್ಕಾರ ಶುಕ್ರವಾರ (ಮಾ. 24) ಸಂಜೆ ಬಿಡುಗಡೆ ಮಾಡಿದ ಪರಿಷ್ಕೃತ ಮೀಸಲಾತಿ ನೀತಿಯನ್ನು (Reservation) ಒಪ್ಪಿಕೊಳ್ಳುವಂತೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೂಡಲ ಸಂಗಮಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ಮೇಲೆ ಒತ್ತಡ ಹೇರಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ಗಂಭೀರ ಆರೋಪ ಮಾಡಿದ್ದಾರೆ.

ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಈ ಹೊಸ ಮೀಸಲಾತಿಯನ್ನು ರದ್ದುಪಡಿಸಲಾಗುವುದು ಎಂದೂ ಘೋಷಿಸಿದರು.

ಮುಸ್ಲಿಮರಿಗೆ ನೀಡಿದ್ದ ಮೀಸಲಾತಿಯನ್ನು ರದ್ದುಪಡಿಸಿ ಅದನ್ನು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹಂಚಿದ್ದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ರೀತಿಯ ಭಿಕ್ಷೆಯನ್ನು ಒಕ್ಕಲಿಗರು ಮತ್ತು ಲಿಂಗಾಯತರು ಕೇಳಿರಲಿಲ್ಲʼʼ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಅದೇ ಹೊತ್ತಿಗೆ ಸ್ವಾಮೀಜಿಗಳಿಗೆ ಕರೆ ಮಾಡಿ ಮೀಸಲಾತಿಯನ್ನು ಒಪ್ಪಿಕೊಳ್ಳುವಂತೆ ಒತ್ತಡ ಹಾಕಲಾಗಿದೆ ಎಂದರು.

ಆದಿಚುಂಚನಗಿರಿ ಶ್ರೀಗಳು ಮತ್ತು ಜಯಮೃತ್ಯುಂಜಯ ಸ್ವಾಮೀಜಿಗಳಿಗೆ 25 ಬಾರಿ ಫೋನ್ ‌ಮಾಡಿದ್ದಾರೆ. ಶೇಕಡಾ 2ರಷ್ಟು ಮೀಸಲಾತಿ ಹೆಚ್ಚಳ ಮಾಡಿದ್ದೇವೆ ಒಪ್ಪಿಕೊಳ್ಳಿ ಎಂದು ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದರು.

ʻʻನಾವು ಮುಸ್ಲಿಂ ಸಮುದಾಯದ ಮೀಸಲಾತಿ ಕೇಳಿಲ್ಲ. ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಲ್ಲ. ಅವರು ಅನ್ನದಾತರು. ನಮಗೆ ಶೇ. 2 ಮೀಸಲಾತಿ ಹೆಚ್ಚಳ ಬೇಕಾಗಿಲ್ಲ. ಕಂದಾಯ ಸಚಿವರಾದ ಆರ್‌. ಅಶೋಕ್‌ ಹೇಳಿದಂತೆ 11% ಮೀಸಲಾತಿ ನೀಡಲಿʼʼ ಎಂದು ಆಗ್ರಹಿಸಿದರು ಡಿ.ಕೆ.ಶಿವಕುಮಾರ್‌.

ʻʻಮೀಸಲಾತಿಗೆ ಯಾಕೆ ಮಿತಿ ಹಾಕಿಕೊಂಡು ಕುಳಿತುಕೊಳ್ಳಲಾಗಿದೆ? ಮೀಸಲಾತಿ ಲಾಕ್ ಮಾಡಿರುವುದನ್ನು ಓಪನ್ ಮಾಡಲಿ. ಜನಸಂಖ್ಯೆ ಆಧಾರವಾಗಿ‌ ಮೀಸಲಾತಿ ಹಂಚಲಿʼ ಎಂದು ಹೇಳಿದ ಅವರು, ʻʻನಮಗೆ ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ‌ಬೇಡ. ನಮ್ಮ ಜನಸಂಖ್ಯೆ ಆಧಾರದಲ್ಲಿ ‌ಲಿಂಗಾಯತರಿಗೆ, ಒಕ್ಕಲಿಗರಿಗೆ ಮೀಸಲಾತಿ ಬೇಕುʼʼ ಎಂದರು. ಮುಸ್ಲಿಮರನ್ನು ಪಂಕ್ಚರ್‌ ಹಾಕುವವರು ಎಂದು ಹೀಯಾಳಿಸಿದ್ದನ್ನು ನೆನಪಿಸಿಕೊಂಡು ಖಂಡಿಸಿದರು.

ಸ್ವಾಮೀಜಿಗಳಿಗೆ ಒತ್ತಡ ಹಾಕಲು ಸಾಧ್ಯವೇ?

ರಾಜ್ಯ ಸರ್ಕಾರ ಸ್ವಾಮೀಜಿಗಳ ಮೇಲೆ ಒತ್ತಡ ಹಾಕಿ ಮೀಸಲಾತಿಯನ್ನು ಒಪ್ಪುವಂತೆ ಮಾಡಿದ ಎಂಬ ಡಿ.ಕೆ. ಶಿವಕುಮಾರ್‌ ಆರೋಪವನ್ನು ಕಂದಾಯ ಸಚಿವ ಆರ್‌. ಅಶೋಕ್‌ ಅಲ್ಲಗಳೆದಿದ್ದಾರೆ ಮತ್ತು ತಿರುಗೇಟು ನೀಡಿದ್ದಾರೆ.

ʻʻಡಿ.ಕೆ ಶಿವಕುಮಾರ್‌ ಮತ್ತು ಸಿದ್ದರಾಮಯ್ಯನವರಿಗೆ ಸ್ವಲ್ಪ ಜ್ಞಾನ ಕಡಿಮೆ ಅನ್ನಿಸುತ್ತದೆ. ಸ್ವಾಮೀಜಿಗಳಿಗೆ ಒತ್ತಡ ಹಾಕಲು ಸಾಧ್ಯವೇ? ಈ ರೀತಿ ಹೇಳಿರುವುದು ನಿಜಕ್ಕೂ ಸ್ವಾಮೀಜಿಗಳಿಗೆ ಅವಮಾನ ಮಾಡಿದಂತೆ. ಕಾಂಗ್ರೆಸ್ ಸ್ವಾಮೀಜಿಗಳಿಗೆ ಅವಮಾನ ಮಾಡುತ್ತಿದೆʼʼ ಎಂದು ಹೇಳಿದರು.

ಕಾಂಗ್ರೆಸ್‌ ಸರ್ಕಾರ ಬಂದ್ರೆ ಮೀಸಲಾತಿ ರದ್ದು ಮಾಡುವ ಡಿ.ಕೆ ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅಶೋಕ್‌ ಅವರು, ʻʻತಾಕತ್‌ ಇದ್ರೆ, ದಮ್ ಇದ್ರೆ ಲಿಂಗಾಯತರು ಮತ್ತು ಒಕ್ಕಲಿಗರಿಗೆ ನೀಡಿರುವ ಮೀಸಲಾತಿಯನ್ನು ತೆಗೆಯಲಿ ನೋಡೋಣʼʼ ಎಂದು ಸವಾಲು ಹಾಕಿದರು.

ವ್ಯಾವಹಾರಿಕ ಜ್ಞಾನವಿಲ್ಲ ಎಂದ ಅಶೋಕ್‌

ʻʻಎಲ್ಲಾ ಸ್ವಾಮೀಜಿಗಳು ಮೀಸಲಾತಿ ಒಪ್ಪಿದ್ದಾರೆ. ರಾಜ್ಯದಲ್ಲಿ ಎಲ್ಲರೂ ಮೀಸಲಾತಿ ನೀತಿಯಿಂದ ಸಂತೋಷವಾಗಿದ್ದಾರೆ. ಡಿ.ಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಿಗೆ ವ್ಯವಹಾರಿಕ ಜ್ಞಾನ ಇಲ್ಲ ಅನಿಸುತ್ತದೆ. ಅವರಿಗೆ ಮುಸ್ಲಿಮರ ಬಗ್ಗೆ ಅತಿಯಾದ ಪ್ರೀತಿ ಇದೆ. ಆ ಕಾರಣದಿಂದ ಏನೇನೋ ಮಾತನಾಡುತ್ತಿದ್ದಾರೆʼʼ ಎಂದು ನುಡಿದರು ಅಶೋಕ್‌.

ʻʻಸಂವಿಧಾನ ತಿದ್ದುಪಡಿ ಮಾಡಿದ್ದು ನಾವಲ್ಲ, ಕಾಂಗ್ರೆಸ್‌ʼʼ ಎಂದು ಹೇಳಿದ ಅಶೋಕ್‌, ಯಾರದ್ದೋ ಕಿತ್ತು ಯಾರಿಗೋ ಕೊಟ್ರು ಅಂತ ಕೇಳೋದಿಕ್ಕೆ ನೀವ್ಯಾರು? ನಿಮ್ಮ ಸರ್ಕಾರ ಇದ್ದಾಗ ನೀವ್ಯಾಕೆ ಮಾಡಲಿಲ್ಲ? ನಮ್ಮ ಸರ್ಕಾರ ಎಲ್ಲರಿಗೂ ಒಪ್ಪಿಗೆಯಾಗುವ ನೀಡಿ ಮಾಡಿದ್ದು ಅವರಿಗೆ ಸಹಿಸೋದಕ್ಕೆ ಆಗುತ್ತಿಲ್ಲ. ಅವರಿಗೆ ಹಸಿ ಮೆಣಸಿನ ಕಾಯಿ ಹೊಟ್ಟೆಯಲ್ಲಿ ಹಾಕಿದಂತೆ ಆಗಿದೆ. ಹಾಗಾಗಿ ಥಕ ಥಕ ಥಕ ಅಂತ ಕುಣೀತಾ ಇದ್ದಾರೆʼʼ ಎಂದರು.

ಕಾಂಗ್ರೆಸ್‌ನವರೇ ಭಿಕ್ಷುಕರು

ಮುಸ್ಲಿಮರ ಮೀಸಲಾತಿ ಕಿತ್ತುಕೊಂಡು ತಮ್ಮದಾಗಿಸಿಕೊಳ್ಳಲು ಒಕ್ಕಲಿಗರು, ಲಿಂಗಾಯತರು ಭಿಕ್ಷುಕರಲ್ಲ ಎಂಬ ಮಾತಿಗೆ ಪ್ರತಿಕ್ರಿಯಿಸಿದ ಅಶೋಕ್‌, ʻʻಕಾಡಿ ಬೇಡೋದು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಮಾತ್ರ. ಕಾಂಗ್ರೆಸ್ ನವರು ಈ ರಾಜ್ಯದಲ್ಲಿ ಭಿಕ್ಷುಕರು ಇದ್ದ ಹಾಗೆ. ಎಲ್ಲೂ ಕಾಂಗ್ರೆಸ್ ಇಲ್ಲʼʼ ಎಂದು ಛೇಡಿಸಿದರು.

ಇದನ್ನೂ ಓದಿ : Reservation : ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಹೊಸ ಮೀಸಲಾತಿ ನೀತಿ ರದ್ದು, ಮುಸ್ಲಿಮರಿಗೆ ನ್ಯಾಯ; ಡಿಕೆಶಿ ಘೋಷಣೆ

Exit mobile version