Site icon Vistara News

2005ಕ್ಕಿಂತ ಮೊದಲು ನೇಮಕವಾದವರಿಗೆ ಒಪಿಎಸ್‌ ಜಾರಿಗೊಳಿಸಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಒತ್ತಾಯ

Primary School Teachers

ಬೆಂಗಳೂರು: 2005ರ ಅಧಿಸೂಚನೆಗಿಂತ ಮೊದಲು ನೇಮಕವಾದ ನೌಕರರು, ಶಿಕ್ಷಕರಿಗೆ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ರದ್ದುಗೊಳಿಸಿ ಹಳೇ ಪಿಂಚಣಿ ವ್ಯವಸ್ಥೆ (OPS) ಜಾರಿಗೊಳಿಸುವಂತೆ ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಪಿ.ಸಿ.ಜಾಫರ್ ಅವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ (Government Primary School Teachers Association) ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ನಗರದಲ್ಲಿ ಗುರುವಾರ ಡಾ. ಪಿ.ಸಿ.ಜಾಫರ್ ಅವರೊಂದಿಗೆ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ನೇತೃತ್ವದಲ್ಲಿ ಪದಾಧಿಕಾರಿಗಳು ಮಾತುಕತೆ ನಡೆಸಿದ್ದು, ಸಂಘದ ಮನವಿಯ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಡಾ. ಪಿ.ಸಿ.ಜಾಫರ್ ಭರವಸೆ ನೀಡಿದ್ದಾರೆ.

2006ರ ಏಪ್ರಿಲ್‌ 1ರಿಂದ ಸರ್ಕಾರಿ ಸೇವೆಗೆ ಸೇರಿದ ಶಿಕ್ಷಕರಿಗೆ ಸಂಧ್ಯಾಕಾಲದ ಬದುಕಿಗೆ ಭದ್ರತೆಯನ್ನು ತಂದುಕೊಡುವ ನಿಟ್ಟಿನಲ್ಲಿ ಹಾಗೂ ಈಗಾಗಲೇ ಮರಣ ಹೊಂದಿರುವ ನೂತನ ಪಿಂಚಣಿ ಯೋಜನೆಗೆ ಒಳಪಡುವ ಅವಲಂಬಿತ ಕುಟುಂಬಗಳಿಗೆ ಮತ್ತು ನೂತನ ಪಿಂಚಣಿ ಯೋಜನೆಯಡಿ ನಿವೃತ್ತಿ ಹೊಂದಿ ಕನಿಷ್ಠ ಪಿಂಚಣಿಯೂ ಇಲ್ಲದೇ ದಯಾನೀಯ ಜೀವನ ನಡೆಸುತ್ತಿರುವ ಶಿಕ್ಷಕರ ಬದುಕಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ್ದಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ | Children’s Day: ಮೂವರು ಮಕ್ಕಳಿಗೆ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ

ರಾಜ್ಯ ಮಟ್ಟದ‌ ಆಲ್‌ ಇಂಡಿಯಾ ಪ್ರೈಮರಿ ಟೀಚರ್ಸ್‌ ಫೆಡರೇಷನ್ (ಎಐಪಿಎಫ್‌) ಹೋರಾಟದ ಹಿನ್ನೆಲೆಯಲ್ಲಿ ರಾಜಸ್ಥಾನ, ಛತ್ತೀಸ್‌ಗಡ, ಪಂಜಾಬ್, ಜಾರ್ಖಂಡ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಈಗಾಗಲೇ NPS ಯೋಜನೆ ರದ್ದುಗೊಳಿಸಿ ಆದೇಶಿಸಲಾಗಿದೆ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ನಿರಂತರವಾಗಿ ಎನ್‌ಪಿಎಸ್‌ ಯೋಜನೆ ರದ್ದು ಮಾಡುವಂತೆ ಹೋರಾಟ ನಡೆಸುತ್ತಿದೆ. ಪ್ರಸ್ತುತ ಈಗಾಗಲೇ ನೂತನ ಪಿಂಚಣಿ ಯೋಜನೆಯ ಕುರಿತು 2018ರ ಡಿ.30 ರಂದು ಒಂದು ಸಮಿತಿಯನ್ನು ರಚಿಸಿ ಯಾವುದೇ ವರದಿಯನ್ನು ಪಡೆಯದೇ ಮತ್ತೊಮ್ಮೆ ನೂತನ ಪಿಂಚಣಿ ಯೋಜನೆಯ ಶಿಕ್ಷಕರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ರೀತಿಯಲ್ಲಿ ದಿನಾಂಕ 2023ರ ಮಾರ್ಚ್‌ 1 ರಂದು ಮತ್ತೊಂದು ಸಮಿತಿಯನ್ನು ರಚಿಸಿರುವುದನ್ನು ಸಂಘವು ವಿರೋಧಿಸುತ್ತದೆ ಎಂದು ಹೇಳಿದ್ದಾರೆ.

ಪ್ರಸ್ತುತ ಉಲ್ಲೇಖಿತ ಅಧಿಕೃತ ಜ್ಞಾಪನದಲ್ಲಿ ಕೇಂದ್ರ ಸರ್ಕಾರವು ದಿನಾಂಕ 2003 ಡಿ. 12ಕ್ಕಿಂದ ಮುಂಚಿತವಾಗಿ ನೇಮಕಾತಿ ಅಧಿಸೂಚನೆ ಹೊರಡಿಸಿ ನಂತರ ನೇಮಕಗೊಂಡ ಶಿಕ್ಷಕರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ಆದೇಶಿಸಿದೆ. ಹೀಗಾಗಿ 2006ರ ಏ. 1ರ ನಂತರ ಸರ್ಕಾರವು ಅಧಿಸೂಚನೆ ಹೊರಡಿಸಿರುವ ಶಿಕ್ಷಕರ ನೇಮಕಾತಿಗಳಿಗೆ ಸಂಬಂಧಿಸಿದಂತೆ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿ, ತಕ್ಷಣ ಆದೇಶ ಹೊರಡಿಸುವಂತೆ ಸಂಘವು ಒತ್ತಾಯಿಸುತ್ತದೆ ಎಂದು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಇದನ್ನೂ ಓದಿ | DK Shivakumar : ಡಿ.ಕೆ. ಶಿವಕುಮಾರ್‌ ಮೇಲಿನ ಸಿಬಿಐ ಕೇಸ್‌ ವಾಪಸ್‌; ಕ್ಯಾಬಿನೆಟ್‌ ಮಹತ್ವದ ನಿರ್ಣಯ

ಈ ಸಂದರ್ಭದಲ್ಲಿ ಆರ್ಥಿಕ ಇಲಾಖೆಯ ಅಧಿಕಾರಿಗಳಾದ ಡಾ. ಎಂ.ಟಿ.ರೇಜು, ಇನ್ನಿತರ ಅಧಿಕಾರಿಗಳು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿಜಯನಗರ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪ, ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್, ಚಿಕ್ಕೋಡಿ ಜಿಲ್ಲಾಧ್ಯಕ್ಷ ಸಿದ್ರಾಮ.ಮ.ಲೋಕನ್ನವರ, ಪುತ್ತೂರಿನ ನಾಗೇಶ, ಸಂದೇಶ್, ನ್ಯಾಯವಾದಿಗಳಾದ ಮೂಲಿಮನಿ ಪಾಷಾ ಉಪಸ್ಥಿತರಿದ್ದರು.

Exit mobile version