Site icon Vistara News

ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ; ಅಧಿಸೂಚನೆ ಪ್ರಕಟ

Governor's nod to Kannada Language Comprehensive Development Bill; Notification published

kannada

ಬೆಂಗಳೂರು: ಕನ್ನಡ ಭಾಷೆಯ ಸಮಗ್ರ ಅಭಿವೃದ್ಧಿ ಮತ್ತು ಕನ್ನಡಿಗರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಉತ್ತಮ ಅವಕಾಶಗಳನ್ನು ಒದಗಿಸುವ ಉದ್ದೇಶದ ʻʻಕನ್ನಡ ಭಾಷಾ ಸಮಗ್ರ ಅಭವೃದ್ಧಿ ವಿಧೇಯಕ-2022ʼʼಕಕ್ಕೆ ರಾಜ್ಯಪಾಲರು ಶುಕ್ರವಾರ ಸಹಿ ಹಾಕಿದ್ದಾರೆ.

ಈ ವಿಧೇಯಕದ ಪರ ಮತ್ತು ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹೊತ್ತಿನಲ್ಲಿಯೇ ಸರ್ಕಾರ ಈ ವಿಧೇಯಕದ ಜಾರಿ ಸಂಬಂಧ ಅಧಿಸೂಚನೆ ಹೊರಡಿಸಿದೆ. ಕಳೆದ ತಿಂಗಳು ನಡೆದ ವಿಧಾನಸಭಾ ಅಧಿವೇಶನದಲ್ಲಿ ಈ ವಿಧೇಯಕ ಸರ್ವಾನುಮತದಿಂದ ಅಂಗೀಕಾರ ಪಡೆದಿತ್ತು.

ಆಡಳಿತದಲ್ಲಿ ಇನ್ನಷ್ಟು ಸಮರ್ಪಕವಾಗಿ ಕನ್ನಡದ ಬಳಕೆಗೆ ಅಗತ್ಯವಾಗಿರುವ ಕಾನೂನಿನ ಬೆಂಬಲವನ್ನು ಈ ವಿಧೇಯಕ ಒದಗಿಸಿದೆ. ಅಲ್ಲದೆ, ರಾಜ್ಯದಲ್ಲಿ ಆರಂಭವಾಗುವ ಕೈಗಾರಿಕೆ, ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಅಗತ್ಯ ಕಾರ್ಯವ್ಯವಸ್ಥೆಯೊಂದನ್ನು ಕಲ್ಪಿಸಿದೆ.

ಈ ವಿಧೇಯಕ ಜಾರಿಗೆ ಬಂದಿರುವುದರಿಂದ ಕನ್ನಡವನ್ನು ಆಡಳಿತದಲ್ಲಿ ಸಮರ್ಥವಾಗಿ ಬಳಸುವ ನಿಟ್ಟಿನಲ್ಲಿ ರಾಜಭಾಷಾ ಆಯೋಗವನ್ನು ರಾಜ್ಯ ಸರ್ಕಾರ ರಚಿಸಬೇಕಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲ ಅಧಿಸೂಚನೆ, ನಿಯಮ, ವಿನಿಯಮ ಇತ್ಯಾದಿಗಳನ್ನು ಕನ್ನಡಲ್ಲಿಯೇ ಪ್ರಕಟಿಸಬೇಕಾಗಿದೆ. ಆಡಳಿತದಲ್ಲಿ ಕನ್ನಡ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯ ಮಟ್ಟದ ಸಮಿತಿಯೊಂದು ರಚನೆಗೊಳ್ಳಲಿದೆ. ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿಯೂ ಸಮಿತಿಗಳು ರಚನೆಯಾಗಲಿವೆ.

ಇನ್ನು ಮುಂದೆ ರಾಜ್ಯದಲ್ಲಿ ಆರಂಭವಾಗಲಿರುವ 100ಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳನ್ನು ಹೊಂದಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರದ ಒಡೆತನದ ಪ್ರತಿಯೊಂದು ಕೈಗಾರಿಕಾ ಸಂಸ್ಥೆ, ಸಾರ್ವಜನಿಕ ವಲಯ ಉದ್ಯಮ, ಬ್ಯಾಂಕ್ ಮತ್ತು ಖಾಸಗಿ ಕೈಗಾರಿಕೆಗಳು ಸಂಸ್ಥೆಯ ದಿನನಿತ್ಯದ ಕಾರ್ಯ ಅಥವಾ ಪ್ರಕಾರ್ಯಗಳ ನಿರ್ವಹಣೆಯಲ್ಲಿ ಕನ್ನಡ ಭಾಷೆಯ ಬಳಕೆ ಮಾಡಬೇಕು. ಈ ಉದ್ದೇಶಕ್ಕಾಗಿ ʻಕನ್ನಡ ಕೋಶʼವನ್ನು ಸ್ಥಾಪಿಸಿ ಇದರ ಮುಖ್ಯಸ್ಥರನ್ನಾಗಿ ಕನ್ನಡ ಜ್ಞಾನವನ್ನು ಹೊಂದಿರುವ ಸಂಸ್ಥೆಯ ಹಿರಿಯ ಉದ್ಯೋಗಿಯನ್ನು ನೇಮಿಸಬೇಕಾಗುತ್ತದೆ.

1ನೇ ತರಗತಿಯಿಂದ 10ನೇ ತರಗತಿಯವರೆಗೆ ಓದಿದ ವಿದ್ಯಾರ್ಥಿಗಳಿಗೆ ಉನ್ನತ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣದಲ್ಲಿ ಮೀಸಲಾತಿಯನ್ನು ಕಲ್ಪಿಸಲು ಈ ವಿಧೇಯಕ ಅವಕಾಶ ಕಲ್ಪಿಸಿದೆ. ರಸ್ತೆಗಳು ಮತ್ತು ಬಡಾವಣೆ ಹೆಸರುಗಳೂ ಸೇರಿದಂತೆ ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳ ಮತ್ತು ಸ್ಥಳೀಯ ಪ್ರಾಧಿಕಾರಗಳ ಮೇಲ್ವಿಚಾರಣೆಯಲ್ಲಿ ಹಾಕಲಾಗುವ ಬೋರ್ಡ್‌ಗಳು ಕನ್ನಡದಲ್ಲಿ ಇರಬೇಕೆಂಬ ಕನ್ನಡ ಪರ ಹೋರಾಟಗಾರರ ಒತ್ತಾಯಕ್ಕೆ ಈ ವಿಧೇಯಕ ಕಾನೂನಿನ ಬೆಂಬಲ ಒದಗಿಸಿದೆ.

ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ರಾಜ್ಯದ ಕೈಗಾರಿಕಾ ನೀತಿಯನ್ನು ಜಾರಿಗೆ ಬದ್ಧವಾದ ಯಾವುದೇ ಉದ್ಯಮವು ತನ್ನ ಬಾಧ್ಯತೆಯನ್ನು ಈಡೇರಿಸಲು ವಿಫಲವಾದಲ್ಲಿ, ಎಲ್ಲಾ ಸೌಲಭ್ಯಗಳನ್ನು ಎಂದರೆ, ವಿನಾಯಿತಿಗಳು ಮತ್ತು ತೆರಿಗೆ ರಿಯಾಯಿತಿ ಅಥವಾ ತೆರಿಗೆ ಮುಂದೂಡಿಕೆ ಅಥವಾ ಯಾವುದೇ ರೀತಿಯ ಸಹಾಯಾನುದಾನವನ್ನು ನಿಲ್ಲಿಸಲು ಇನ್ನು ಮುಂದೆ ಸಾಧ್ಯವಾಗಲಿದೆ.

ರಾಜ್ಯ ಸರ್ಕಾರ ಅಥವಾ ಸ್ಥಳೀಯ ಪ್ರಾಧಿಕಾರ ಪ್ರಕಟಣೆಗಾಗಿ ಹೊರಡಿಸಿದ ಎಲ್ಲಾ ಟೆಂಡ‌ರ್ ಅಧಿಸೂಚನೆ, ಜಾಹೀರಾತು, ಅರ್ಜಿ ನಮೂನೆ, ಡಿಜಿಟಲ್ ನಮೂನೆ, ಪ್ರಮಾಣ ಪತ್ರ ಮತ್ತು ಅಧಿಸೂಚನೆಗಳು ಮುಖ್ಯವಾಗಿ ಕನ್ನಡದಲ್ಲಿಯೇ ಇರಬೇಕೆಂಬುದು ಇನ್ನು ಕಾನೂನಾಗಲಿದೆ.

ಈ ವಿಧೇಯಕದ ಜಾರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒತ್ತಾಯಿಸುತ್ತಲೇ ಬಂದಿದ್ದವು. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್‌ ಕುಮಾರ್‌ ಆಸಕ್ತಿಯಿಂದಾಗಿ ಈ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಇದನ್ನೂ ಓದಿ : Kannada Sahitya Parishat | ಸುಗ್ರೀವಾಜ್ಞೆ ಮೂಲಕ ʼಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕʼ ಜಾರಿಗೊಳಿಸಿ: ಕಸಾಪ

Exit mobile version