ಬೆಂಗಳೂರು: ಆಸರೆ ಎಂಬ ಯೋಜನೆಯಡಿ ಸರ್ಕಾರ 2009ರಲ್ಲಿ ಪ್ರವಾಹ ಪೀಡಿತರಿಗೆ ಮನೆ ನಿರ್ಮಾಣ ಮಾಡಿತ್ತು. ಆದರೆ, ಜನ ತಮ್ಮ ಊರು ಬಿಟ್ಟು ಅಲ್ಲಿಗೆ ಹೋಗದೇ ಇರುವುದಕ್ಕೆ ಮನೆಗಳು ಪಾಳುಬಿದ್ದಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ನಿಯಮ 69 ರ ಅಡಿಯಲ್ಲಿ, ಮಳೆ ಅನಾಹುತದ ಕುರಿತು ಮಾತನಾಡುತ್ತ, 2009ರಲ್ಲಿ ಸಹ ದೊಡ್ಡ ಮಟ್ಟದ ಅನಾಹುತವಾಗಿತ್ತು. ದಾನಿಗಳು ಮನೆ ಕಟ್ಟಿಸಿಕೊಡಲು ಮುಂದಾಗಿದ್ದರು. ಇಂದು ಆ ಮನೆಗಳ ಪರಿಸ್ಥಿತಿ ಏನಾಯಿತು? ಜನ ಆ ಮನೆಗಳಿಗೆ ಹೋಗಿದ್ದಾರ? ಜಮೀನು ಖರೀದಿಸಿ ಮನೆ ಕಟ್ಟಲು ಸರ್ಕಾರ ನಿರ್ಧಾರ ಮಾಡಿತ್ತು. ಕಳಪೆ ಕಾಮಗಾರಿಯಿಂದ ನಿರ್ಮಾಣವಾಗಿದ್ದ ಮನೆಗಳಲ್ಲಿದ್ದ ಜನರು, ವಾಪಸ್ ತೆರಳಿದರು. ಪ್ರವಾಹ ಕಡಿಮೆ ಆದ ಮೇಲೆ ಸರ್ಕಾರವೂ ಇದನ್ನು ಮರೆಯಿತು ಮರೆಯಿತು ಎಂದು ಆಕ್ರೋಶ ಹೊರಹಾಕಿದರು.
ಈ ಕುರಿತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿಕ್ರಿಯೆ ನೀಡಿದರು. 2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 100 ವರ್ಷದ ಇತಿಹಾಸ ಮೀರಿದ ಮಳೆ ಆಗಿತ್ತು. ಅನೇಕ ಹಳ್ಳ, ಕೊಳ್ಳ ನದಿಗಳು ಉಕ್ಕಿ ಹರಿದು, ಮನೆಗಳಿಗೆ ನೀರು ಹೋಗಿತ್ತು. ಆ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ದಾನಿಗಳಿಂದ ಹಣ ಪಡೆದು ಕೆಲವು ಗ್ರಾಮಗಳನ್ನು ನಿರ್ಮಾಣ ಮಾಡಿದರು. ಸರ್ಕಾರಿ ಜಮೀನು ಇರಲಿಲ್ಲವಾದ್ಧರಿಂದ, ಜಮೀನು ಖರೀದಿ ಮಾಡಿ ಮನೆಗಳನ್ನು ಕಟ್ಟಿಕೊಡಲಾಗಿತ್ತು.
ಪ್ರವಾಹ ಕಡಿಮೆಯಾದ ನಂತರ ಜನರು ಮತ್ತೆ ಹಳೆಯ ಊರುಗಳಿಗೆ ಹೋದರು. ಆ ಮನೆಗಳಿಗೆ ವಾಸಕ್ಕೆ ಯಾರೂ ಹೋಗದೇ ಇರುವುದರಿಂದ, ಯಾರೋ ನೀರಿನ ವ್ಯವಸ್ಥೆ ಪೈಪ್‌ಗಳನ್ನು, ಮೋಟಾರ್‌ಗಳನ್ನು ಕಿತ್ತುಕೊಂಡು ಹೋದರು.
2019-20 ನೇ ಸಾಲಿನಲ್ಲಿ 1,205 ಕೋಟಿ ಪರಿಹಾರವನ್ನು ಒಂದೇ ಜಿಲ್ಲೆಗೆ ಕೊಟ್ಟಿದ್ದೇವೆ. 46,959 ಮನೆ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇವೆ. ದೇಶದ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಯಾರಾದರೂ ಇಷ್ಟು ಕೊಟ್ಟ ಉದಾಹರಣೆ ಇದೆಯೇ? ಎಂದರು.
ಮತ್ತೆ ಮಾತನಾಡಿದ ಕುಮಾರಸ್ವಾಮಿ, ಮನೆ ಕಟ್ಟಿಕೊಟ್ಟಿದ್ದೀರ ನಿಜ. ಅದರ ಬಗ್ಗೆ ಆಕ್ಷೇಪ ಇಲ್ಲ. ಆದರೆ ಜನರು ಪ್ರವಾಹ ಇಳಿದ ಬಳಿಕ ಮತ್ತೆ ಮನೆಗೆ ಹೋಗುತ್ತಾರೆ. ಪೂರ್ವಜರು ಕಟ್ಟಿದ ಮನೆಗಳಿಗೇ ವಾಪಸಾಗುತ್ತಾರೆ. ಉತ್ತರ ಕರ್ನಾಟಕದಲ್ಲಿ ಇಂತಹ ಅನೇಕ ಸಮಸ್ಯೆಗಳಿವೆ ಎಂದರು.
ಕೇಂದ್ರ ತಂಡ ಸರಿಯಾಗಿ ಅಧ್ಯಯನ ನಡೆಸುತ್ತಿಲ್ಲ ಎಂದ ಎಚ್‌ಡಿಕೆ, ಬಂದ ಪುಟ್ಟ ಹೋದ ಪುಟ್ಟ ರೀತಿ ಮಾಡದೆ ಗಂಭೀರವಾಗಿ ವರದಿ ನೀಡಬೇಕು ಎಂದರು.
ಇದನ್ನೂ ಓದಿ | ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಬದ್ಧ ಎಂದ ಗೋವಿಂದ ಕಾರಜೋಳ