ಬೆಂಗಳೂರು: ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ (Janardhana Reddy) ಅವರಿಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಜನಾರ್ದನ ರೆಡ್ಡಿಯ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದಕ್ಕೆ ಅನುಮತಿ ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಗೆ ಸರ್ಕಾರ ಅನುಮತಿ ನೀಡಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ಕೋರಿಕೆಯನ್ನು ಪರಿಗಣಿಸಿ ಅನುಮತಿ ನೀಡಿರುವುದಾಗಿ ಸರ್ಕಾರ ಗುರುವಾರ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.
ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ತುರ್ತಾಗಿ ಪರಿಗಣಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಸಿಬಿಐ ಕರ್ನಾಟಕ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿದ ವೇಳೆ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಸರ್ಕಾರದ ನಿಲುವನ್ನು ತಿಳಿಸಿದರು.
ವಿಚಾರಣೆ ಸಂದರ್ಭದಲ್ಲಿ ಧ್ಯಾನ್ ಚಿನ್ನಪ್ಪ ಅವರು, “ನಾಲ್ಕು ತಿಂಗಳಾದರೂ ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿಸಿಲ್ಲ ಎಂದು ಸಿಬಿಐ ಹಾಲಿ ಅರ್ಜಿಯಲ್ಲಿ ಆರೋಪ ಮಾಡಿದೆ. 2015ರಲ್ಲಿ ರಾಜ್ಯ ಸರ್ಕಾರವು ರೆಡ್ಡಿ ಆಸ್ತಿ ಜಪ್ತಿಗೆ ಅನುಮತಿ ನೀಡಿದ್ದರೂ 2021ರವರೆಗೆ ಆ ಅರ್ಜಿಯ ಕುರಿತು ಯಾವುದೇ ಕ್ರಮವನ್ನು ಸಿಬಿಐ ಕೈಗೊಂಡಿಲ್ಲ. ಸೂಕ್ತ ಸಂದರ್ಭದಲ್ಲಿ ಸಂಬಂಧಿತ ವಿಚಾರಣಾಧೀನ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ ಯಾವುದೇ ಕ್ರಮವಾಗಿಲ್ಲ. ತಡವಾಗಿರುವುದಕ್ಕೆ ಹಲವು ವರ್ಷಗಳಾದರೂ ಸಿಬಿಐ ಯಾವುದೇ ಅರ್ಜಿ ಸಲ್ಲಿಸಿಲ್ಲ. ಇಂದಿನವರೆಗೂ ಜಪ್ತಿ ಆದೇಶವಾಗಿಲ್ಲ. ಈಗ ರಾಜ್ಯ ಸರ್ಕಾರವು ನಾಲ್ಕು ತಿಂಗಳಾದರೂ ಜಪ್ತಿ ಆದೇಶ ಪ್ರಕ್ರಿಯೆ ಮುಂದುವರಿಸಲು ಅನುಮತಿಸಿಲ್ಲ ಎಂದು ಸಿಬಿಐ ಅರ್ಜಿ ಸಲ್ಲಿಸಿದೆ. ಹಾಗಾದರೆ, ಈ ಹಿಂದೆ ಜಪ್ತಿ ಆದೇಶಕ್ಕೆ ಸಂಬಂಧಿಸಿದಂತೆ ಸಂಬಂಧಿತ ನ್ಯಾಯಾಲಯದಲ್ಲಿನ ಅರ್ಜಿಯ ಕುರಿತು 6-7 ವರ್ಷ ಸಿಬಿಐ ಏನು ಮಾಡುತ್ತಿತ್ತು?” ಎಂದು ಆಕ್ಷೇಪಿಸಿದರು.
ಸಿಬಿಐಗೆ ಕೋರ್ಟ್ ತರಾಟೆ
ಆಗ ಪೀಠವು ಮೌಖಿಕವಾಗಿ “ಹಿಂದೆ ರಾಜ್ಯ ಸರ್ಕಾರ ನೀಡಿರುವ ಅನುಮತಿಗೆ ಸಂಬಂಧಿಸಿದಂತೆ ಜಪ್ತಿ ಆದೇಶ ಎಲ್ಲಿದೆ? 2015ರಲ್ಲಿ ಸಿಬಿಐಯು ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. 2022ರಲ್ಲಿ ಅರ್ಜಿಗೆ ಸಂಖ್ಯೆ ನಿಗದಿಪಡಿಸಲಾಗಿದೆ. ಏಳು ವರ್ಷಗಳ ಕಾಲ ಪ್ರಕರಣಕ್ಕೆ ನಂಬರ್ ಸಹ ಆಗಿರಲಿಲ್ಲವೇ? ಏಳು ವರ್ಷಗಳಾದರೂ ಪ್ರಕರಣಕ್ಕೆ ಸಂಖ್ಯೆ ಏಕೆ ನಿಗದಿಯಾಗಿರಲಿಲ್ಲ. ನೀವು (ಸಿಬಿಐ) ಅದನ್ನು ಕೈಗೆತ್ತುಕೊಂಡಿರಲಿಲ್ಲವೇ? ಏಳು ವರ್ಷ ತಡವಾಗಿರುವುದನ್ನು ಹೇಗೆ ಸಮರ್ಥಿಸುತ್ತೀರಿ. ನಂಬರ್ ಆಗುವುದಕ್ಕೇ ಏಳು ವರ್ಷ ತೆಗೆದುಕೊಳ್ಳಬೇಕಾ. ನೀವು ಆ ಪ್ರಕರಣವನ್ನೇ ಕೈಗೆತ್ತುಕೊಂಡಿಲ್ಲ. ಆದರೆ, ರಾಜ್ಯ ಸರ್ಕಾರದ ಮೇಲೆ ತಡವಾಗಿದೆ ಎಂದು ದೂರು ಹೇಳುತ್ತಿದ್ದೀರಿ. ರೆಡ್ಡಿಯ 65 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಆಗಿಲ್ಲವೇ? ತಡವಾಗಿರುವುದರ ಹಿಂದಿನ ಉದ್ದೇಶವೇನು? ಪ್ರಕರಣಕ್ಕೆ ನಂಬರ್ ಆಗಲು ಏಳು ವರ್ಷಗಳು ಹಿಡಿದಿದೆ ಎಂಬುದು ಆಘಾತ ಉಂಟು ಮಾಡಿದೆ. ಎಲ್ಲಾ ಅರ್ಜಿಗಳಲ್ಲಿಯೂ ಈ ತರಹವೇ ಆಗುತ್ತದಾ? ಅಥವಾ ಇದೊಂದರಲ್ಲಿ ಮಾತ್ರ ಈ ರೀತಿಯೇ?” ಎಂದು ಸಿಬಿಐಗೆ ಚಾಟಿ ಬೀಸಿತು.
ಇದನ್ನೂ ಓದಿ | Janardhana Reddy Birthday | ಗಂಗಾವತಿ, ಬಳ್ಳಾರಿಯಲ್ಲಿ ಜನಾರ್ದನ ರೆಡ್ಡಿ ಶಕ್ತಿ ಪ್ರದರ್ಶನ; ಬೈಕ್ ರ‍್ಯಾಲಿ, ರೋಡ್ ಶೋ