Site icon Vistara News

Govt Doctors Shortage: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ; ನೇಮಕಾತಿಗೆ ಬೇಕಿದೆ ಭರ್ತಿ 2 ತಿಂಗಳು

Hospital

ಬೆಂಗಳೂರು: ಇಡೀ ರಾಜ್ಯದಲ್ಲಿ ಜೆನರಲ್ ಆಸ್ಪತ್ರೆ, ಪಿಎಚ್‌ಸಿ, ಟ್ರಯಾಜ್ ಸೆಂಟರ್, ನಮ್ಮ ಕ್ಲಿನಿಕ್‌, ಮೆಟರ್ನಿಟಿ ಹೋಂ ಎಂದು ಸಾವಿರಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳಿವೆ. ಆದರೆ ಅಲ್ಲಿ ಸಿಗಬೇಕಾದ ಮೂಲ ಸೌಕರ್ಯಗಳೇ ಇತ್ತೀಚೆಗೆ ಸಿಗದಂತಾಗಿದೆ. ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ (Govt Doctors Shortage) ಎದುರಾಗಿದೆ.

ವೈದ್ಯಕೀಯ ಶಿಕ್ಷಣ ಪಡೆದು ಉತ್ತೀರ್ಣರಾದ ಬಹುತೇಕರು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಮಾಡುವ ಬದಲು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಇದರಿಂದಾಗಿ ಬಡವರು, ಮಧ್ಯಮ ವರ್ಗದವರು ಸರ್ಕಾರಿ ಆಸ್ಪತ್ರೆಗಳಿಗೆ ಹೋದಾಗ ಸೌಲಭ್ಯಗಳು ಸಿಗದೆ ವಂಚಿತರಾಗುತ್ತಿದ್ದಾರೆ. ಈ ಅಸಮತೋಲನವನ್ನು ಸರಿಪಡಿಸಲು ಆರೋಗ್ಯ ಇಲಾಖೆ ಮುಂದಾಗಿದ್ದು, ಇನ್ನೆರೆಡು ತಿಂಗಳು ಸಮಯಾವಕಾಶ ಬೇಕು ಎಂದು ಆರೋಗ್ಯ ಇಲಾಖೆಯ ಆಯುಕ್ತ ಡಿ ರಂದೀಪ್ ತಿಳಿಸಿದ್ದಾರೆ.

2355 ಕೇಡರ್‌ಗಳಲ್ಲಿ 200 ಪೋಸ್ಟ್‌ಗಳು ಖಾಲಿ

ರಾಜ್ಯದ ಸಾವಿರಾರು ಆಸ್ಪತ್ರೆಗಳಲ್ಲಿರುವ 2355 ಕೇಡರ್‌ಗಳಲ್ಲಿ 200 ಪೋಸ್ಟ್‌ಗಳು ಖಾಲಿ ಉಳಿದಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ನಗರ ಹಾಗೂ ರಾಜ್ಯದೆಲ್ಲಡೆ ಹೊಸ ಆಸ್ಪತ್ರೆಗಳನ್ನು ನಿರ್ಮಿಸಿದೆ. ಆದರೆ ವೈದ್ಯರಿಲ್ಲದೆ ಆಸ್ಪತ್ರೆಗಳು ದೇವರಿಲ್ಲದ ಗುಡಿಯಂತೆ ಆಗಿದೆ.

ಚುನಾವಣಾ ಹಿನ್ನೆಲೆ ನೇಮಕಾತಿ ಪ್ರಕ್ರಿಯೆಗೆ ಬ್ರೇಕ್

ಕಳೆದ ಹಲವಾರು ವರ್ಷಗಳಿಂದ ಸರ್ಕಾರಿ ಆಸ್ಪತ್ರೆಗೆ ಬರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇದನ್ನು ಸರಿಪಡಿಸಲು ಸರ್ಕಾರ ಕೂಡ ಕ್ರಮ ತೆಗೆದುಕೊಂಡಿದೆ. ವೈದ್ಯಕೀಯ ಶಿಕ್ಷಣ ಪಡೆದ ಎಲ್ಲರೂ ಕನಿಷ್ಟ ಪಕ್ಷ 1 ವರ್ಷವಾದರೂ ಗ್ರಾಮಗಳಲ್ಲಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು ಎಂದು ನಿಯಮಗಳನ್ನು ರೂಪಿಸಿದೆ.

ಇದನ್ನೂ ಓದಿ: IPL 2023: ನಾಳೆ ಲಕ್ನೋ ಸೂಪರ್​ಜೈಂಟ್ಸ್​ vs ಆರ್‌ಸಿಬಿ ಕ್ರಿಕೆಟ್‌ ಮ್ಯಾಚ್‌; ನಕಲಿ ಟಿಕೆಟ್‌ ದಂಧೆಕೋರರ ಮೇಲೆ ಖಾಕಿ ಅಲರ್ಟ್‌

ಆದರೆ ಅದನ್ನು ಮುಂದುವರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲು ಆಗದೇ ಇರುವುದರಿಂದ ವೈದ್ಯರ ಕೊರತೆ ಎದುರಾಗಿದೆ. ಇದೇ ಕಾರಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಇವೆಲ್ಲದರ ಮಧ್ಯೆ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ 2 ತಿಂಗಳು ಯಾವ ನೇಮಕಾತಿ ಮಾಡಲು ಸಾಧ್ಯವಿಲ್ಲ. ಮೇ 15ರ ನಂತರವಷ್ಟೇ ಹೊಸ ವೈದ್ಯರ ನೇಮಕ ಸಾಧ್ಯ ಎಂದು ಆಯುಕ್ತ ಡಿ ರಂದೀಪ್ ಮಾಹಿತಿ ನೀಡಿದ್ದಾರೆ.

Exit mobile version