Site icon Vistara News

Govt Employees: ಪ್ರತಿ ಸೋಮವಾರ ಕೇಂದ್ರ ಕಚೇರಿಗಳಿಗೆ ಅಧಿಕಾರಿ, ನೌಕರರ ಹಾಜರು ಕಡ್ಡಾಯ: ರಾಜ್ಯ ಸರ್ಕಾರ ಆದೇಶ

Govt Employees

ಬೆಂಗಳೂರು: ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು (Govt Employees) ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕಚೇರಿಗಳಿಗೆ ಆಗಮಿಸುವ ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಸೂಚನೆಯಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಮಲಾಕ್ಷಿ. ಬಿ ಅವರು ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶ ಹೊರಡಿಸಿದ್ದಾರೆ.

ಕರ್ನಾಟಕವು ಕೃಷಿ ಪ್ರಧಾನವಾದ ರಾಜ್ಯವಾಗಿದ್ದು, ಸಾಮಾನ್ಯವಾಗಿ ಕೃಷಿಕರು ಸೋಮವಾರದ ದಿನದಂದು ತುಸುಮಟ್ಟಿಗೆ ಕೃಷಿ ಚಟುವಟಿಕೆಗಳಿಗೆ ಬಿಡುವು ನೀಡಿ, ಸಂತೆ, ಪೇಟೆ ಕೆಲಸಗಳು ಹಾಗೂ ಕಚೇರಿಗಳಿಗೆ ತಮ್ಮ ಕೆಲಸಗಳಿಗಾಗಿ ಹೋಗುವುದು ಹಿಂದಿನಿಂದ ನಡೆದುಕೊಂಡು ಬಂದ ವಾಡಿಕೆಯಾಗಿದೆ.

ಈ ಹಿಂದೆ, ಪ್ರತಿ ಸೋಮವಾರಗಳಂದು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಾದಿಯಾಗಿ ಎಲ್ಲರೂ ತಮ್ಮ ತಮ್ಮ ಕೇಂದ್ರಸ್ಥಾನದ ಕಚೇರಿಗಳಲ್ಲಿದ್ದು, ಜನರ ಕೆಲಸಗಳನ್ನು ಮಾಡುತ್ತಿದ್ದರು. ಆದರೆ, ಕೃಷಿಯೇತರ ಹಿನ್ನೆಲೆಯಿಂದ ಅಧಿಕಾರಿಗಳು, ನೌಕರರು ಸರ್ಕಾರಿ ಸೇವೆಗೆ ಬರುವ ಪ್ರಮಾಣ ಹೆಚ್ಚಿದ ಮೇಲೆ ಈ ಪದ್ಧತಿಯಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರಾಗಿದೆ. ಆದ್ದರಿಂದ, ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು ಪ್ರತಿ ಸೋಮವಾರಗಳಂದು ತಮ್ಮ ತಮ್ಮ ಕೇಂದ್ರಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಎಂಎಲ್‌ಸಿ ಅಡಗೂರು ಎಚ್.ವಿಶ್ವನಾಥ್ ಮನವಿ ಕೋರಿದ್ದರು. ಈ ಬಗ್ಗೆ ಸಕಾರಾತ್ಮಕವಾಗಿ ಸಿಎಂ ಸಿದ್ದರಾಮಯ್ಯ ಸ್ಪಂದಿಸಿ, ಅಗತ್ಯ ಕ್ರಮವಹಿಸಲು ಸೂಚನೆ ನೀಡಿದ್ದಾರೆ.

ಸಾರಿಗೆ ನಿಗಮಕ್ಕೂ ಅನ್ವಯ

ಪ್ರತಿ ಸೋಮವಾರಗಳಂದು ಪ್ರತಿಯೊಂದು ಇಲಾಖೆಯ ಅಧಿಕಾರಿ, ನೌಕರರು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಕರ್ತವ್ಯ ನಿರ್ವಹಿಸಬೇಕು ಎಂಬ ರಾಜ್ಯ ಸರ್ಕಾರ ಸೂಚನೆಯು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಕ್ಕೂ ಅನ್ವಯವಾಗಿದೆ. ನಿಗಮ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ತುರ್ತು ಕಾರ್ಯಗಳನ್ನು ಹೊರತುಪಡಿಸಿ. ಪ್ರತಿ ಸೋಮವಾರಗಳಂದು ತಮ್ಮ ಕೇಂದ್ರ ಸ್ಥಾನದ ಕಚೇರಿಗಳಲ್ಲಿ ಹಾಜರಿದ್ದು, ಸೇವೆ ಒದಗಿಸಬೇಕು ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಸುತ್ತೋಲೆ ಹೊರಡಿಸಿದ್ದಾರೆ.

Exit mobile version