Site icon Vistara News

Govt Employees: ಸರ್ಕಾರಿ ನೌಕರರಿಗೆ ಅಲರ್ಟ್‌; ಬೆಳಗ್ಗೆ 9.15ಕ್ಕೆ ಆಫೀಸ್‌ ತಲುಪದಿದ್ರೆ ಅರ್ಧ ದಿನ ರಜೆ!

govt employees

ನವ ದೆಹಲಿ: ಸರ್ಕಾರಿ ಕಚೇರಿಗಳಿಗೆ ಕೆಲ ನೌಕರರು (Govt Employees) ತಡವಾಗಿ ಬರುತ್ತಾರೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವ ಸಂಗತಿ. ಅಂತಹವರಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಇದೀಗ ಕಠಿಣ ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರಿ ನೌಕರರು ಕಚೇರಿಗೆ ಬೆಳಗ್ಗೆ 9.15ರೊಳಗೆ ಕಚೇರಿ ತಲುಪಿ, ಬಯೋಮೆಟ್ರಿಕ್‌ ನೀಡದಿದ್ದರೆ ಅಂತಹವರಿಗೆ ಅರ್ಧ ದಿನ ಸಾಂದರ್ಭಿಕ ರಜೆ (casual leave) ಎಂದು ಪರಿಗಣಿಸಲು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (DOPT) ಆದೇಶ ನೀಡಿದೆ.

ಇನ್ನು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ಪುಸ್ತಕದ ಬದಲಾಗಿ ಕಡ್ಡಾಯವಾಗಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆ ಬಳಸಬೇಕು ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ತಿಳಿಸಿದೆ. ಒಂದು ವೇಳೆ ವಿವಿಧ ಕಾರಣಗಳಿಂದ ನೌಕರರು ಕೆಲಸಕ್ಕೆ ಹಾಜರಾಗಲು ಸಾಧ್ಯವಾಗದಿದ್ದರೆ, ಒಂದು ದಿನ ಮೊದಲೇ ಕಚೇರಿಯಲ್ಲಿ ತಿಳಿಸಿ ಸಾಂದರ್ಭಿಕ ರಜೆ (CL) ಚೀಟಿ ಸಲ್ಲಿಸಬೇಕು ಎಂದು ನೌಕರರಿಗೆ ಸೂಚಿಸಲಾಗಿದೆ.

ಹಾಗೆಯೇ ಉದ್ಯೋಗಿಗಳ ಹಾಜರಾತಿ, ಸಮಯ ಪಾಲನೆ ಬಗ್ಗೆ ಹಿರಿಯ ಅಧಿಕಾರಿಗಳು ಪರಿಶೀಲಿಸಬೇಕು. ಕೇಂದ್ರ ಸರ್ಕಾರಿ ಕಚೇರಿಗಳ ಕೆಲಸದ ಅವಧಿ ಬೆಳಗ್ಗೆ 9ಗಂಟೆಯಿಂದ ಸಂಜೆ 5.30ವರೆಗೆ ಇರುತ್ತದೆ. ಆದರೆ, ಕೆಲ ನೌಕರರು, ಅಧಿಕಾರಿಗಳು ಮಾತ್ರ ತಡವಾಗಿ ಆಫೀಸ್‌ಗೆ ಬಂದು, ಬೇಗನೆ ವಾಪಸ್‌ ಹೋಗುತ್ತಾರೆ. ಇದರಿಂದ ಕೆಲಸದ ನಿಮಿತ್ತ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಹಾಜರಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಇದನ್ನೂ ಓದಿ | KAS Exam: ಕೆಎಎಸ್‌ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್‌; ಪರೀಕ್ಷೆ ಬರೆಯಲು ಒಂದು ಬಾರಿ ಹೆಚ್ಚುವರಿ ಅವಕಾಶ

2014ಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಕಚೇರಿಗಳಲ್ಲಿ ಆಧಾರ್‌ ಆಧಾರಿತ ಬಯೋಮೆಟ್ರಿಕ್ಸ್ ಹಾಜರಾತಿ ವ್ಯವಸ್ಥೆ (AEBAS) ಜಾರಿ ಮಾಡಿತ್ತು. 2019ರಲ್ಲಿ ಕೋವಿಡ್‌ ವ್ಯಾಪಿಸಿದಾಗ ಮುನ್ನೆಚ್ಚರಿಕಾ ಕ್ರಮವಾಗಿ ಬಯೋಮೆಟ್ರಿಕ್‌ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು, ನಂತರ 2022ರಲ್ಲಿ ವ್ಯವಸ್ಥೆ ಮರು ಆರಂಭವಾಗಿದೆ. ಇದೀಗ ಕಚೇರಿಗಳಲ್ಲಿ ನೌಕರರು ಸಮಯಪಾಲನೆ ಮಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿರುವುದರಿಂದ ಸುಧಾರಣೆ ಕಂಡುಬರಲಿದೆ ಎಂದು ಹಿರಿಯ ಅಧಿಕಾರಿಗಳು ಹೇಳುತ್ತಿದ್ದಾರೆ.

Exit mobile version