ಬೆಂಗಳೂರು: ರಾಜ್ಯ ಸರ್ಕಾರವು ಸರ್ಕಾರಿ ನೌಕರರ ವೇತನವನ್ನು ಶೇ. 17ರಷ್ಟು ಹೆಚ್ಚಿಸಿದ ಮತ್ತು ಹಳೆ ಪಿಂಚಣಿ ಜಾರಿ ಅಧ್ಯಯನಕ್ಕೆ ಸಮಿತಿ ರಚನೆ ಘೋಷಿಸಿದ ಬಳಿಕ ಸರ್ಕಾರಿ ನೌಕರರ ಸಂಘ ಮುಷ್ಕರ (Govt. Employees protest) ವಾಪಸ್ ಪಡೆದಿದೆ. ಅದರೆ, ಇದರ ನಡುವೆ ನೌಕರರ ಸಂಘದಲ್ಲಿ ಭಿನ್ನಮತ ಭುಗಿಲೆದ್ದಿದೆ.
ರಾಜ್ಯ ಸರ್ಕಾರ ಶೇ. 17 ವೇತನ ಹೆಚ್ಚಳ ಘೋಷಿಸಿದ ಬೆನ್ನಿಗೇ ಮುಷ್ಕರವನ್ನು ವಾಪಸ್ ಪಡೆದಿರುವುದಾಗಿ ಘೋಷಿಸಿದ ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಷಡಕ್ಷರಿ ಅವರ ನಿಲುವಿಗೆ ನಿಲುವಿಗೆ ವೃಂದ ಸಂಘಗಳ ವಿರೋಧ ವ್ಯಕ್ತವಾಗಿದೆ.
ಪ್ರಮುಖವಾಗಿ ಸಚಿವಾಲಯ ನೌಕರರ ಸಂಘ ಮತ್ತು ರಾಜ್ಯ ಸರ್ಕಾರಿ ಎನ್ ಪಿ ಎಸ್ ನೌಕರರ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಪಿ.ಗುರುಸ್ವಾಮಿ ಮತ್ತು ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಷಡಕ್ಷರಿ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ನಡುವೆ, ಗುರುಸ್ವಾಮಿ ಅವರನ್ನು ಉಚ್ಚಾಟನೆ ಮಾಡಿದ್ದಾಗಿ ಷಡಕ್ಷರಿ ಅವರು ಘೋಷಣೆ ಮಾಡಿದ್ದಾರೆ.
ಗುರುಸ್ವಾಮಿ ಆಕ್ಷೇಪ ಏನು?
ಸರ್ಕಾರ ಶೇ. 17 ವೇತನ ಹೆಚ್ಚಳ ಘೋಷಿಸಿದ ಕೂಡಲೇ ಮುಷ್ಕರ ವಾಪಸ್ ಪಡೆದದ್ದು ಸರಿಯಲ್ಲ. ಇನ್ನಷ್ಟು ಮಾತುಕತೆ ನಡೆಸಿ ಹೆಚ್ಚು ಮಾಡಿಸಬಹುದಿತ್ತು ಎಂದು ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರು ಸ್ವಾಮಿ ಸ್ವಾಮಿ ಹೇಳಿದ್ದಾರೆ.
ʻʻಇವತ್ತಿನ ಷಡಕ್ಷರಿ ನಿರ್ಧಾರದ ಬಗ್ಗೆ ನಮ್ಮ ವಿರೋಧವಿದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದರೂ ನಾವು ಅವರಿಗೆ ಬೆಂಬಲ ನೀಡಿದೆವು. ಹೀಗಿರುವಾಗ ಈ ಥರ ಆತುರದ ನಿರ್ಧಾರವನ್ನು ಅಧ್ಯಕ್ಷರು ತಗೋಬಾರದಿತ್ತು. ಸರ್ಕಾರ ಜೊತೆ ಇನ್ನೂ ಚರ್ಚೆ ಮಾಡಬೇಕಿತ್ತುʼʼ ಎನ್ನುವುದು ಗುರುಸ್ವಾಮಿ ವಾದ.
ʻʻಆವತ್ತು ಗುರು ಸ್ವಾಮಿ ಮನಸ್ಸು ಮಾಡಿದ್ರೆ ಸಚಿವಾಲಯ ಬಂದ್ ಆಗುತ್ತದೆ ಅಂತ ಅವರೇ ಹೇಳಿದ್ದರು. ಅದರೆ, ಈಗ ನನ್ನನ್ನು ಹುಚ್ಚ ಎನ್ನುತ್ತಿದ್ದಾರೆ. ಅದಕ್ಕೆಲ್ಲ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಷಡಕ್ಷರಿ ಬಗ್ಗೆ ವೈಯಕ್ತಿಕ ವಿರೋಧವಿಲ್ಲ, ಅವರ ನಿಲುವನ್ನು ಖಂಡಿಸಿದ್ದೇನೆ ಅಷ್ಟೆʼʼ ಎಂದು ಪಿ. ಗುರುಸ್ವಾಮಿ ಹೇಳಿದರು.
ಅದೇ ಹೊತ್ತಿಗೆ, ʻʻನೌಕರರ ಸಂಘದಲ್ಲಿ ಭಿನ್ನಾಭಿಪ್ರಾಯ, ದ್ವಂದ್ವವಿಲ್ಲ. ಆದರೆ ಅಭಿಪ್ರಾಯ ಭೇದವಿದೆʼʼ ಎಂದಿದ್ದಾರೆ ಗುರುಸ್ವಾಮಿ. ತನ್ನನ್ನು ಉಚ್ಚಾಟನೆ ಮಾಡಿರುವ ಷಡಕ್ಷರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗುರುಸ್ವಾಮಿ, ʻʻಅವರ ಪರ ಜೈ ಅಂದ್ರೆ ಸರಿ, ಇಲ್ಲ ಅಂದ್ರೆ ತಪ್ಪಾʼʼ ಎಂದು ಪ್ರಶ್ನಿಸಿದ್ದಾರೆ.
ʻʻನೌಕರರ ಸಮಸ್ಯೆ ಬಗ್ಗೆ ಹೋರಾಟ ಮಾಡೋದು ಅಷ್ಟೇ ನಮ್ಮ ಕೆಲಸ. ಎನ್ ಪಿ ಎಸ್ ನೌಕರರ ಪ್ರತಿಭಟನೆ, ರಾಜ್ಯ ಸರ್ಕಾರಿ ನೌಕರರ ಸಂಘ ಎರಡಕ್ಕೂ ಕೂಡ ನಾನು ಬೆಂಬಲ ಕೊಟ್ಟಿದ್ದೇನೆ. ಮುಂದೆ ನೌಕರರ ಪರ ಯಾರೇ ಪ್ರತಿಭಟನೆ ಮಾಡಿದರೂ ಬೆಂಬಲ ಕೊಡ್ತೀವಿʼʼ ಎಂದಿದ್ದಾರೆ ಗುರುಸ್ವಾಮಿ.
ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಹೇಳೋದೇನು?
ʻʻನಾವು ಕಳೆದ ಎಂಟು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟಕ್ಕೆ ಕಿಮ್ಮತ್ತಿಲ್ಲ ಎಂದು ಷಡಕ್ಷರಿ ಹೇಳಿದ್ದಾರೆ. ನಮ್ಮ ಹೋರಾಟಕ್ಕೆ ಕಿಮ್ಮತ್ತಿಲ್ಲ ಎಂದರೆ ಅವರ ಹೋರಾಟಕ್ಕೂ ಕಿಮ್ಮತ್ತಿಲ್ಲʼʼ ಎಂದು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ್ ಹೇಳಿದ್ದಾರೆ.
ʻʻನಾವು 28 ರಾಜ್ಯ ಸೇರಿ ಹೋರಾಟ ಮಾಡ್ತಿದ್ದೇವೆ. ಐದು ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ರಾಜ್ಯದಲ್ಲಿ ವೋಟ್ ಫಾರ್ ಒಪಿಎಸ್ ಪ್ರತಿಭಟನೆ ಮಾಡುತ್ತಿದ್ದೇವೆ. ಅದನ್ನು ಮುಂದುವರಿಸುತ್ತೇವೆʼʼ ಎಂದು ಶಾಂತಾರಾಮ್ ಹೇಳಿದರು.
ತಮ್ಮ ಸಂಘದ ಮೇಲೆ ಮಾಡಲಾದ ಭ್ರಷ್ಟಾಚಾರದ ಆರೋಪವನ್ನು ಖಂಡಿಸಿದ ಅವರು, ʻʻಆರೋಪಗಳನ್ನು ಯಾರು ಬೇಕಾದರೂ ಮಾಡಬಹುದು. ಅದರೆ, ಅದು ಹಿಟ್ ಆಂಡ್ ರನ್ ಆಗಬಾರದು. ದಾಖಲೆ ಇಟ್ಟು ಮಾತನಾಡಲಿʼʼ ಎಂದು ಸವಾಲು ಹಾಕಿದರು.
ಭಿನ್ನಮತದ ಆರೋಪಕ್ಕೆ ಷಡಾಕ್ಷರಿ ಹೇಳೋದೇನು?
ಈ ನಡುವೆ, ಭಿನ್ನಮತದ ಆಕ್ಷೇಪಗಳಿಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು, ಗುರುಸ್ವಾಮಿ ಅವರು ಸಭೆಯಲ್ಲಿ ಉಪಸ್ಥಿತರಿದ್ದು ತಮ್ಮ ಅಭಿಪ್ರಾಯ ಹೇಳಿದ್ದಾರೆ. ಈಗ ಹೊರಗೆ ಬಂದು ಏನೇನೋ ಮಾತನಾಡುತ್ತಾರೆ. ಅವರಿಗೆ ಪ್ರಚಾರದ ಹುಚ್ಚು.ʼʼ ಎಂದು ಹೇಳಿದರು.
ಇದನ್ನೂ ಓದಿ : Govt Employees Strike : ಶೇ.17 ರಷ್ಟು ವೇತನ ಹೆಚ್ಚಳದ ಆದೇಶ; ಹೋರಾಟ ಸಕ್ಸಸ್ ಎಂದ ಸಿ.ಎಸ್. ಷಡಾಕ್ಷರಿ